ಎಫ್‌ಸಿಆರ್‌ಎ ನಿಯಮ ಉಲ್ಲಂಘನೆ ಆರೋಪ| ಗ್ರೋವರ್‌ ವಿರುದ್ಧ ಸಿಬಿಐ ಎಫ್‌ಐಆರ್‌

ಬುಧವಾರ, ಜೂಲೈ 17, 2019
27 °C

ಎಫ್‌ಸಿಆರ್‌ಎ ನಿಯಮ ಉಲ್ಲಂಘನೆ ಆರೋಪ| ಗ್ರೋವರ್‌ ವಿರುದ್ಧ ಸಿಬಿಐ ಎಫ್‌ಐಆರ್‌

Published:
Updated:
Prajavani

ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಂಬೈ ಮೂಲದ ಎನ್‌ಜಿಒ ‘ಲಾಯರ್ಸ್‌ ಕಲೆಕ್ಟಿವ್ಸ್‌’ ವಿರುದ್ಧ ಸಿಬಿಐ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ.

ಪ್ರಕರಣ ಸಂಬಂಧ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಎನ್‌ಜಿಒ ಅಧ್ಯಕ್ಷ ಆನಂದ್‌ ಗ್ರೋವರ್‌ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಇವರು ಸುಪ್ರೀಂಕೋರ್ಟ್‌ನ ಖ್ಯಾತ ವಕೀಲೆ ಇಂದಿರಾ ಜೈಸಿಂಗ್‌ ಪತಿ.

ಎನ್‌ಜಿಒದ ಕೆಲವು ಪದಾಧಿಕಾರಿಗಳು, ಖಾಸಗಿ ವ್ಯಕ್ತಿಗಳು ಹಾಗೂ ಕೆಲವು ಅಧಿಕಾರಿಗಳನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ. ಸಹಿ ನಕಲು ಮಾಡಿರುವುದು, ವಂಚನೆ ಹಾಗೂ ಕ್ರಿಮಿನಲ್‌ ಪಿತೂರಿ ನಡೆಸಿದ ಆರೋಪಗಳಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಎನ್‌ಜಿಒ 1981ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ತುಳಿತಕ್ಕೆ ಒಳಗಾಗಿರುವ ಜನರಿಗೆ ಕಾನೂನು ನೆರವು ಒದಗಿಸುವುದು, ಮಾನವ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುವ ವಕೀಲರ ಗುಂಪು ‘ಲಾಯರ್ಸ್‌ ಕಲೆಕ್ಟಿವ್ಸ್‌’ ಎಂದು ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

ಕೇಂದ್ರ ಗೃಹ ಸಚಿವಾಲಯ ನೀಡಿದ ದೂರಿನನ್ವಯ ಸಿಬಿಐ ಈ ಕ್ರಮ ಕೈಗೊಂಡಿದೆ. ‘ಲಾಯರ್ಸ್‌ ಕಲೆಕ್ಟಿವ್ ಸಂಸ್ಥೆ 2006–07 ಹಾಗೂ 2014–15ರ ಅವಧಿಯಲ್ಲಿ ವಿದೇಶಗಳಿಂದ ₹ 32.39 ಕೋಟಿ ದೇಣಿಗೆ ಪಡೆದಿದೆ. ಈ ಹಣವನ್ನು ದುರ್ಬಳಕೆ ಮಾಡಿ, ಎಫ್‌ಸಿಆರ್‌ಎ ನಿಯಮ ಉಲ್ಲಂಘಿಸಲಾಗಿದೆ. ಸಂಸ್ಥೆಯ ದಾಖಲೆಗಳನ್ನು ಪರಿಶೀಲಿಸಿದಾಗ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಗೃಹ ಸಚಿವಾಲಯ ದೂರಿತ್ತು.

ಪಿಐಎಲ್‌: ‘ಲಾಯರ್ಸ್‌ ವಾಯ್ಸ್‌’ ಎಂಬ ಎನ್‌ಜಿಒ ಸಹ ‘ಲಾಯರ್ಸ್‌ ಕಲೆಕ್ಟಿವ್‌’ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ‘ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಚಟುವಟಿಕೆಗಳನ್ನು ನಡೆಸಲು ಈ ಸಂಸ್ಥೆ ವಿದೇಶಗಳಿಂದ ಸಂಗ್ರಹಿಸಿದ ಹಣವನ್ನು ಬಳಸಿಕೊಳ್ಳುತ್ತಿದೆ’ ಎಂದು ಪಿಐಎಲ್‌ನಲ್ಲಿ ದೂರಲಾಗಿತ್ತು. ಇಂದಿರಾ ಜೈಸಿಂಗ್‌, ಆನಂದ್‌ ಗ್ರೋವರ್‌ ಹಾಗೂ ಲಾಯರ್ಸ್‌ ಕಲೆಕ್ಟಿವ್‌ ಪದಾಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದರು.

‘ಸಿಜೆಐ ವಿರುದ್ಧ ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿಯೊಬ್ಬರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಕುರಿತಂತೆ ನಡೆದ ತನಿಖೆಯಲ್ಲಿ ಸರಿಯಾದ ಪ್ರಕ್ರಿಯೆ ಪಾಲಿಸಿಲ್ಲ ಎಂದು ಇಂದಿರಾ ಜೈಸಿಂಗ್‌ ದೂರಿದ್ದರಿಂದ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಬಲಿಪಶು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !