ಸೋಮವಾರ, ಮಾರ್ಚ್ 1, 2021
24 °C

ವಿಚಾರವಾದಿಗಳ ಹತ್ಯೆಯಲ್ಲಿ ಸಾಮ್ಯತೆ: ಒಂದೇ ಸಂಸ್ಥೆಯಿಂದ ತನಿಖೆ- ‘ಸುಪ್ರೀಂ’ ಇಂಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ವಿಚಾರವಾದಿ ಎಂ.ಎಂ. ಕಲಬುರ್ಗಿ, ಸಾಮಾಜಿಕ ಕಾರ್ಯಕರ್ತರಾದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಅವರ ಹತ್ಯೆಯಲ್ಲಿ ಸಾಮ್ಯತೆ ಇದ್ದಲ್ಲಿ, ನಾಲ್ಕೂ ಪ್ರಕರಣಗಳನ್ನು ಒಂದೇ ಸಂಸ್ಥೆ ತನಿಖೆ ನಡೆಸಬಹುದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ. 

ಗೌರಿ ಲಂಕೇಶ್ ಹಾಗೂ ಎಂ.ಎಂ. ಕಲಬುರ್ಗಿ ಅವರ ಹತ್ಯೆಯಲ್ಲಿ ಸಾಮ್ಯತೆ ಇದೆ ಎಂಬುದಾಗಿ ಕರ್ನಾಟಕ ಪೊಲೀಸರು ಸಲ್ಲಿಸಿದ ವಸ್ತುಸ್ಥಿತಿ ವರದಿ ಉಲ್ಲೇಖಿಸಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ನಾಲ್ಕೂ ಪ್ರಕರಣಗಳು ಒಂದಕ್ಕೊಂದು ನಂಟು ಹೊಂದಿದ್ದಲ್ಲಿ, ಕೇಂದ್ರೀಯ ತನಿಖಾ ಸಂಸ್ಥೆಯೇ (ಸಿಬಿಐ) ಏಕೆ ತನಿಖೆಗೆ ಮುಂದಾಗಬಾರದು ಎಂಬ ಬಗ್ಗೆ ಜನವರಿ ಮೊದಲನೇ ವಾರದ ವೇಳೆಗೆ ತನಗೆ ಮಾಹಿತಿ ನೀಡುವಂತೆ ಸಿಬಿಐಗೆ ಕೋರ್ಟ್ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ನವೀನ್ ಸಿಂಗ್ ಅವರ ಪೀಠ ಈ ವಿಚಾರಣೆ ನಡೆಸಿತು.

ದಾಭೋಲ್ಕರ್ ಪ್ರಕರಣವನ್ನು ಬಾಂಬೆ ಹೈಕೋರ್ಟ್ ವರ್ಗಾವಣೆ ಮಾಡಿದ ಬಳಿಕ ಸಿಬಿಐ ತನಿಖೆ ನಡೆಸುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರವು ಕೋರ್ಟ್‌ಗೆ ತಿಳಿಸಿತು. ಪನ್ಸಾರ್ ಪ್ರಕರಣದ ಪ್ರಗತಿ ಬಗ್ಗೆ ಕೋರ್ಟ್ ಮಾಹಿತಿ ಕೇಳಿತು. ಪ್ರಕರಣ ಕೊಲ್ಲಾಪುರ ಕೋರ್ಟ್‌ನಲ್ಲಿ ಬಾಕಿಯಿದೆ ಎಂದು ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿತು. 

ಕಲಬುರ್ಗಿ: 3 ತಿಂಗಳಲ್ಲಿ ಚಾರ್ಜ್‌ಶೀಟ್

ಡಾ. ಎಂ.ಎಂ ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಮೂರು ತಿಂಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್‌ಗೆ ಮಂಗಳವಾರ ಮಾಹಿತಿ ನೀಡಿದರು.

ಕಲಬುರ್ಗಿ ಅವರು 2015ರಲ್ಲಿ ಧಾರವಾಡದಲ್ಲಿ ಹತ್ಯೆಯಾಗಿದ್ದರು. 

ತನಿಖೆಯಲ್ಲಿ ಮಹತ್ವದ ಪ್ರಗತಿ ಕಾಣುತ್ತಿಲ್ಲ ಎಂದು ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಆರೋಪಿಸಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸಿಬಿಐ, ಎನ್‌ಐಎ ಹಾಗೂ ರಾಜ್ಯ ಸರ್ಕಾರಗಳಿಗೆ ಜನವರಿ 10ರಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. 

ತನಿಖೆ ವಿಚಾರದಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ನವೆಂಬರ್ 26ರಂದು ಕರ್ನಾಟಕ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ದಾಭೋಲ್ಕರ್ ಹಾಗೂ ಪಾನ್ಸರೆ ಅವರ ಹತ್ಯೆಗೂ ಕಲಬುರ್ಗಿ ಹತ್ಯೆಗೂ ನಂಟು ಇದೆ ಎಂದು ಉಮಾದೇವಿ ಅವರು ಆರೋಪಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು