ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸಾ – ಬಂಡೂರಿ ನಾಲೆಗಳ ತಿರುವು ಯೋಜನೆ: ಅನುಮತಿಗೆ ಕೇಂದ್ರ ತಡೆ

Last Updated 18 ಡಿಸೆಂಬರ್ 2019, 19:01 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ ನದಿ ನೀರನ್ನು ಆಶ್ರಯಿಸಿರುವ ಕಳಸಾ–ಬಂಡೂರಿ ನಾಲೆಗಳ ತಿರುವು ಯೋಜನೆಗೆ ನೀಡಿದ್ದ ಅನುಮತಿಗೆ ಕೇಂದ್ರದ ಪರಿಸರ ಇಲಾಖೆ ತಡೆ ನೀಡಿದೆ.

ಮಹದಾಯಿ ಜಲ ವಿವಾದ ನ್ಯಾಯಮಂಡಳಿಯು ನೀರು ಹಂಚಿಕೆ ಮಾಡಿ 2018ರ ಆಗಸ್ಟ್‌ 14ರಂದು ನೀಡಿದ್ದ ಐತೀರ್ಪನ್ನು ಕಣಿವೆ ವ್ಯಾಪ್ತಿಯ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಸರ್ಕಾರಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ. ಹಾಗಾಗಿ ಪ್ರಕರಣ ಇತ್ಯರ್ಥ ಆಗುವವರೆಗೂ ಈ ಅನುಮತಿಯನ್ನು ತಡೆ ಹಿಡಿಯಲಾಗುವುದು ಎಂದು ಇಲಾಖೆ ತಿಳಿಸಿದೆ.

ಕಳಸಾ–ಬಂಡೂರಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ಗೆ ಬುಧವಾರ ಈ ಕುರಿತು ಪತ್ರ ಬರೆದಿರುವ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಉಪ ನಿರ್ದೇಶಕ ಮೋಹಿತ್‌ ಸಕ್ಸೇನಾ, ಕಳಸಾ–ಬಂಡೂರಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಅನುಮತಿ ನೀಡಿ 2019ರ ಅಕ್ಟೋಬರ್‌ 17ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕರ್ನಾಟಕಕ್ಕೆ ನೋಟಿಸ್‌ ಜಾರಿ ಮಾಡಿದೆ. ಪ್ರಕರಣವು ಬಾಕಿ ಇರುವುದನ್ನು ಮನಗಂಡು ಮೊದಲು ನೀಡಿರುವ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಹೇಳಲಾಗಿದೆ.

ಜಲ ವಿದ್ಯುತ್‌ ಉತ್ಪಾದನೆ ಅಥವಾ ನೀರಾವರಿಗೆ ನೀರನ್ನು ಬಳಸಿಕೊಳ್ಳುವ ಉದ್ದೇಶ ಈ ಯೋಜನೆಯಲ್ಲಿ ಇಲ್ಲದ್ದರಿಂದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭಕ್ಕೆ ಆಕ್ಷೇಪವಿಲ್ಲ. ಕರ್ನಾಟಕ ಸರ್ಕಾರದ ಈ ಯೋಜನೆಯ ಅನುಷ್ಠಾನಕ್ಕೆ ಅಭ್ಯಂತರ
ಇಲ್ಲ ಎಂದು ಕಳೆದ ಅಕ್ಟೋಬರ್‌ನಲ್ಲಿ ಅನುಮತಿ ನೀಡುವ ವೇಳೆ ಕೇಂದ್ರ ಸರ್ಕಾರ ಹೇಳಿತ್ತು.

ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ನೀಡಿರುವ ಐತೀರ್ಪನ್ನು ಆಧರಿಸಿ ಅಧಿಸೂಚನೆ ಹೊರಡಿಸಬೇಕು ಎಂಬ ಕರ್ನಾಟಕದ ಬೇಡಿಕೆಗೆ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದ ಕಾರಣವನ್ನೇ ಮುಂದಿರಿಸಿರುವ ಕೇಂದ್ರ, ಈ ಕುರಿತ ಅಧಿಸೂಚನೆ ಹೊರಡಿಸಿಲ್ಲ.

****

ಕಳಸಾ–ಬಂಡೂರಿ ಯೋಜನೆಯ ಅನಿವಾರ್ಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ರಾಜ್ಯಕ್ಕೆ ನ್ಯಾಯ ಒದಗಿಸಲು ಸರ್ಕಾರ ಬದ್ಧ
-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ನಾನು ಮುಖ್ಯಮಂತ್ರಿ ಆಗಿದ್ದಾಗ ದೆಹಲಿಗೆ ನಿಯೋಗ ಕರೆದುಕೊಂಡು ಹೋಗಿದ್ದೆ. ಬಿಜೆಪಿಯವರು ಪ್ರಧಾನಿ ಎದುರು ತುಟಿಬಿಚ್ಚಲಿಲ್ಲ. ಈಗಲೂ ಬಿಡಲಾರರು
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ಗೋವಾ ಒತ್ತಡಕ್ಕೆ ಕೇಂದ್ರ ಮಣಿದಿದೆ. ಮೋದಿ ಅವರು ಇಡೀ ದೇಶಕ್ಕೆ ಪ್ರಧಾನಿಗಳೋ? ಅಥವಾ ಗೋವಾ ರಾಜ್ಯಕ್ಕೆ ಮಾತ್ರ ಪ್ರಧಾನಿಗಳೋ?
-ವೀರೇಶ ಸೊಬರದಮಠ ರೈತ ಸೇನಾ ರಾಜ್ಯ ಘಟಕದ ಆಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT