ಸೋಮವಾರ, ಮಾರ್ಚ್ 30, 2020
19 °C

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ವರ್ಗಾವಣೆ ಆದೇಶ ಹೊರಡಿಸಿದ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌. ಮುರಳೀಧರ್‌ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರವು ಬುಧವಾರ ರಾತ್ರಿ ಆದೇಶ ಹೊರಡಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಪರ–ವಿರೋಧಿಗಳ ನಡುವೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ದೆಹಲಿ ಪೊಲೀಸರ ಕಾರ್ಯವೈಖರಿಯನ್ನು ನ್ಯಾಯಮೂರ್ತಿ ಎಸ್‌. ಮುರಳೀಧರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ವರ್ಗಾವಣೆ ಆದೇಶ ಹೊರಬಿದ್ದಿದೆ.

ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿ ಭಾರತ ಸಂವಿಧಾನದ 222ನೇ ವಿಧಿಯ 1 ಪರಿಚ್ಛೇದದಲ್ಲಿ ನೀಡಲಾದ ವಿಶೇಷ ಅಧಿಕಾರವನ್ನು ಬಳಸಿ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ ಮುರಳೀಧರ್‌ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಳಿಸಿದ್ದಾರೆ ಎಂದು ಸರ್ಕಾರ ಹೊರಡಿಸಿರುವ ಆದೇಶ ಹೇಳಿದೆ.

ಮೂವರು ಹೈಕೋರ್ಟ್‌ನ ನ್ಯಾಯಮೂರ್ತಿಗಳ ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿತ್ತು.

ನ್ಯಾಯಮೂರ್ತಿ ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಳಿಸಿ ಹೊರಡಿಸಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ. ವರ್ಗಾವಣೆ ವಿರೋಧಿಸಿ ಅಸೋಸಿಯೇಷನ್‌ ಕೆಲಸ ಮೊಟಕುಗೊಳಿಸಿದೆ.

ಇಂಥ ವರ್ಗಾವಣೆಗಳು ನ್ಯಾಯದಾನ ವ್ಯವಸ್ಥೆಗೆ ಅಪಾಯಕಾರಿ ಮಾತ್ರವಲ್ಲ; ನ್ಯಾಯಾಲಯದ ಮೇಲೆ ಜನರಿಗೆ ಇರುವ ವಿಶ್ವಾಸವನ್ನು ನಾಶಗೊಳಿಸುತ್ತದೆ ಎಂದು ಅಸೋಸಿಯೇಷನ್‌ ಹೇಳಿದೆ.

ನ್ಯಾಯಮೂರ್ತಿ ಎಸ್‌. ಮುರಳೀಧರ್ ಅವರನ್ನು ವರ್ಗಾವಣೆಗೊಳಿಸುವಂತೆ ಕೊಲಿಜಿಯಂ ಎರಡು ಬಾರಿ ಸೂಚಿಸಿತ್ತು. ಆದರೆ ಹಿರಿಯ ನ್ಯಾಯಮೂರ್ತಿಗಳ ವಿರೋಧದಿಂದಾಗಿ ವರ್ಗಾವಣೆ ಪ್ರಕ್ರಿಯೆ ಕೈಬಿಡಲಾಗಿತ್ತು. ‘ಮೈ ಲಾರ್ಡ್‌’ ಮತ್ತು ‘ಯುವರ್ ಲಾರ್ಡ್‌ ಷಿಪ್‌’ ಪದ ಬಳಕೆಯನ್ನು ಮುರಳೀಧರ್ ವಿರೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ. 2023ರಲ್ಲಿ ಅವರು ನಿವೃತ್ತಿ ಹೊಂದಲಿದ್ದಾರೆ.

ಟ್ವಿಟ್ಟರ್‌ನಲ್ಲಿ #JusticeMuralidhar ಹ್ಯಾಷ್‌ಟ್ಯಾಗ್‌ ಟ್ರೆಂಡ್ ಆಗುತ್ತಿದೆ. ಈ ಹ್ಯಾಷ್‌ಟ್ಯಾಗ್ ಬಳಸಿ ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಸುಮಾರು 19 ಸಾವಿರ ಮಂದಿ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು