ಭಾನುವಾರ, ಜುಲೈ 25, 2021
25 °C
50 ಸಾವಿರ ರ್‍ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ರವಾನೆ: ಸಚಿವ ಜಿ.ಕಿಶನ್‌ ರೆಡ್ಡಿ

ದೆಹಲಿ: 6 ಲಕ್ಷ ಜನರ ಸೋಂಕು ಪತ್ತೆ ಪರೀಕ್ಷೆಗೆ ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ

ನವದೆಹಲಿ: ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷಾ ಕಿಟ್ ಬಳಸಿ ದೆಹಲಿಯ 6 ಲಕ್ಷ ಜನರ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸಿದೆ. 

ಈ ಸಂಬಂಧ, ಉತ್ತರ ಕೊರಿಯಾದಿಂದ ಆಮದು ಮಾಡಿಕೊಂಡಿರುವ 50 ಸಾವಿರ ಕಿಟ್‌ಗಳನ್ನು ದೆಹಲಿಗೆ ಸರಬರಾಜು ಮಾಡಲಾಗಿದೆ ಎಂದು ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್‌ ರೆಡ್ಡಿ ಗುರುವಾರ ತಿಳಿಸಿದ್ದಾರೆ.

‘ದೆಹಲಿಯ ಆಸ್ಪತ್ರೆಗಳಲ್ಲಿ ಈಗಾಗಲೇ 431 ವೆಂಟಿಲೇಟರ್‌ಗಳಿದ್ದು, 500 ಹೆಚ್ಚುವರಿ ವೆಂಟಿಲೇಟರ್‌ ಮತ್ತು 650 ಆಂಬುಲೆನ್ಸ್‌ ಸೌಲಭ್ಯಗಳನ್ನು ಒದಗಿಸಲಿದೆ’ ಎಂದು ಹೇಳಿದರು. 

‘ತಕ್ಷಣದಿಂದಲೇ ದೆಹಲಿಯಲ್ಲಿ 169 ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸಲಿದ್ದು, ಅಲ್ಲಿ ರ್‍ಯಾಪಿಡ್‌ ಆ್ಯಂಟಿಜೆನ್ ಕಿಟ್‌ ಬಳಸಿ‌ ಪರೀಕ್ಷೆ ನಡೆಸಲಾಗುವುದು. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿನ ಜನರು ಮತ್ತು ಸೋಂಕು ದೃಢಪಟ್ಟಿರುವವರ ಸಂಬಂಧಿಗಳು ಈ ಕೇಂದ್ರಗಳಲ್ಲಿ ತಪಾಸಣೆಗೆ ಒಳಗಾಗಬಹುದು’ ಎಂದು ಸಚಿವರು ಹೇಳಿದ್ದಾರೆ. 

‘ಕೊರೊನಾ ಸೋಂಕು ಏರುತ್ತಲೇ ಇರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ, ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ‘ ಎಂದು ತಿಳಿಸಿದ್ದಾರೆ.

ಸೋಂಕಿತರನ್ನು ಗುರುತಿಸುವ ಸಲುವಾಗಿ ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ವೈದ್ಯಕೀಯ ಸಮೀಕ್ಷೆಗಳನ್ನು ಪ್ರಾರಂಭಿಸಲಾಗಿದೆ. 242 ಕಂಟೈನ್‌ಮೆಂಟ್‌ ವಲಯಗಳಲ್ಲಿ ಒಟ್ಟು 2.30 ಲಕ್ಷ ಜನಸಂಖ್ಯೆಯಿದ್ದು, ಅವರಲ್ಲಿ 1.77 ಲಕ್ಷ ಜನರ ಸಮೀಕ್ಷೆಯನ್ನು ಈಗಾಗಲೇ ನಡೆಸಲಾಗಿದೆ. ಉಳಿದವರನ್ನು ಜೂನ್‌ 20ರೊಳಗೆ ಸಮೀಕ್ಷೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು