ಸೋಮವಾರ, ಜುಲೈ 26, 2021
22 °C

ಒತ್ತಡ ಹೇರಲು ಚೀನಾ ಕವಾಯತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಚೀನಾದ ಮಧ್ಯ ಪ್ರಾಂತ್ಯ ಹುಬೆಯಿಂದ ಭಾರತದ ಜತೆ ಗಡಿ ಸಂಘರ್ಷವಿರುವ ದೂರದ ವಾಯವ್ಯ ಗಡಿಗೆ ತ್ವರಿತವಾಗಿ ಸೈನಿಕರನ್ನು ಹೇಗೆ ಕಳುಹಿಸಬಹುದು ಎಂಬ ಕವಾಯತನ್ನು ಚೀನಾ ಸೇನೆಯು ನಡೆಸಿದೆ ಎನ್ನಲಾಗಿದೆ.

ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) ಸಾವಿರಾರು ಸೈನಿಕರನ್ನು ಹುಬೆಯಿಂದ ವಾಯವ್ಯ ‍ಪ್ರದೇಶದ ಸ್ಥಳವೊಂದಕ್ಕೆ ಕಳುಹಿಸಲಾಗಿದೆ. ಶಸ್ತ್ರಾಸ್ತ್ರ ವಾಹನಗಳು, ಸೇನೆಯ ಭಾರಿ ಸಲಕರಣೆಗಳು ಮತ್ತು ಇತರ ವಸ್ತುಗಳನ್ನು ಕೂಡ ಸಾಗಿಸಲಾಗಿದೆ. ಮೇ 14ರಂದು ಈ ಭಾರಿ ಕಾರ್ಯಾಚರಣೆ ನಡೆದಿದೆ. ಈ ಬಗ್ಗೆ, ಚೀನಾದ ಕಮ್ಯುನಿಸ್ಟ್‌ ಪಕ್ಷದ ಸ್ವಾಮ್ಯದ ‘ಗ್ಲೋಬಲ್‌ ಟೈಮ್ಸ್‌’ ಪತ್ರಿಕೆಯು ಭಾನುವಾರ ವರದಿ ಪ್ರಕಟಿಸಿದೆ. ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟು ತಲೆದೋರಿರುವ ಈ ಸಂದರ್ಭದಲ್ಲಿ ವರದಿ ಪ್ರಕಟವಾಗಿದೆ. 

ಕೆಲವೇ ತಾಸುಗಳಲ್ಲಿ ಈ ಕಾರ್ಯಾಚರಣೆ ಪೂರ್ಣಗೊಂಡಿತು. ಗಡಿ ಸಮಸ್ಯೆ ಉಂಟಾದರೆ ಸೇನೆಯು ಅಲ್ಲಿಗೆ ಎಷ್ಟು ವೇಗವಾಗಿ ತಲುಪಬಲ್ಲುದು ಎಂಬುದನ್ನು ಇದು ತೋರಿಸಿಕೊಟ್ಟಿದೆ. ನಾಗರಿಕ ವಿಮಾನಗಳು, ರೈಲು ಮತ್ತು ಇತರ ಸಾರಿಗೆ ವ್ಯವಸ್ಥೆಯನ್ನೂ ಬಳಸಿಕೊಂಡು ಸೈನಿಕರು ಗಡಿಯ ರಹಸ್ಯ ಸ್ಥಳಕ್ಕೆ ತಲುಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಅತ್ಯಂತ ದೂರದ, ದುರ್ಗಮವಾದ ಮತ್ತು ಪ್ರತಿಕೂಲ ಹವಾಮಾನದ ಸ್ಥಳಗಳಿಗೂ ಸೇನೆಯನ್ನು ಕಳುಹಿಸುವ ಶಕ್ತಿಯನ್ನು ಚೀನಾ ಹೊಂದಿದೆ ಎಂಬುದನ್ನು ಈ ಕಾರ್ಯಾಚರಣೆ ತೋರಿಸಿಕೊಟ್ಟಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. 

ಎಲ್‌ಎಸಿಯಲ್ಲಿ ಸಂಘರ್ಷ ಆರಂಭವಾದ ಬಳಿಕ ಅಲ್ಲಿಗೆ ಭಾರತೀಯ ಸೇನೆಯು ಹೆಚ್ಚುವರಿ ಯೋಧರನ್ನು ಕಳುಹಿಸಿತ್ತು. ಅಗತ್ಯ ಬಿದ್ದರೆ ಗಡಿಗೆ ದೊಡ್ಡ ಸಂಖ್ಯೆಯಲ್ಲಿ ಸೈನಿಕರು ಮತ್ತು ಸಲಕರಣೆಗಳನ್ನು ಅಲ್ಪ ಕಾಲದಲ್ಲಿ ಕಳುಹಿಸುವ ಸಾಮರ್ಥ್ಯ ತನಗೆ ಇದೆ ಎಂದು ತೋರಿಸಿ, ಭಾರತದ ಮೇಲೆ ಒತ್ತಡ ಹೇರುವುದು ಚೀನಾದ ಕಾರ್ಯತಂತ್ರ ಆಗಿರಬಹುದು ಎಂದು ಈ ಕಾರ್ಯಾಚರಣೆಯನ್ನು ವಿಶ್ಲೇಷಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು