ಬರ: ಸಮರ್ಪಕ ಪರಿಹಾರಕ್ಕೆ ಮನವಿ

ಮಂಗಳವಾರ, ಮಾರ್ಚ್ 26, 2019
26 °C
ಪ್ರಧಾನಿ ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಬರ: ಸಮರ್ಪಕ ಪರಿಹಾರಕ್ಕೆ ಮನವಿ

Published:
Updated:
Prajavani

ನವದೆಹಲಿ: ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆ ಸುರಿಯದೇ ಕರ್ನಾಟಕದಲ್ಲಿ ಬರಗಾಲ ಆವರಿಸಿ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅಡಿ ಪೂರ್ಣ ಪ್ರಮಾಣದ ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಆಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಅವರ ನಿವಾಸದಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಈ ಕುರಿತ ಮನವಿ ಸಲ್ಲಿಸಿದರು.

ಮುಂಗಾರು ಹಂಗಾಮಿನಲ್ಲಿ ಬರದಿಂದ ನಷ್ಟ ಉಂಟಾಗಿದ್ದಕ್ಕೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ₹ 2,434 ಕೋಟಿ ನಷ್ಟ ಪರಿಹಾರ ಕೋರಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಕೇವಲ ₹ 949.49 ಕೋಟಿ ಮಂಜೂರು ಮಾಡಿದೆ. ಬರ ನಿರ್ವಹಣೆಗೆ ಅನುವಾಗುವಂತೆ ಇನ್ನೂ ಹೆಚ್ಚಿನ ಪರಿಹಾರವನ್ನು ತಕ್ಷಣ ಮಂಜೂರು ಮಾಡಬೇಕು ಎಂದು ಅವರು ಕೋರಿದರು.

ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಒಟ್ಟು ₹ 32,335 ಕೋಟಿ ನಷ್ಟ ಉಂಟಾಗಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಪ್ರಧಾನಿಯವರಿಗೆ ವಿವರಿಸಿದರು.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಬಾಕಿ ಇರುವ ₹ 1,351 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆಯೂ ಅವರು ಆಗ್ರಹಿಸಿದರು.

ನ್ಯಾಯಮೂರ್ತಿಗೆ ಆಹ್ವಾನ

ನಂತರ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರನ್ನು ಭೇಟಿ ಮಾಡಿದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಹಾಸನದಲ್ಲಿ ನಿರ್ಮಿಸಲಾಗಿರುವ ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡ ಉದ್ಘಾಟನೆಗೆ ಆಹ್ವಾನ ನೀಡಿದರು.

ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್ ನಜೀರ್ ಹಾಗೂ ಮೋಹನ ಶಾಂತನಗೌಡರ್ ಅವರನ್ನೂ ಇದೇ ವೇಳೆ ಉಭಯ ಮುಖಂಡರು ಭೇಟಿ ಮಾಡಿ ಚರ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !