ಭಾನುವಾರ, ಮೇ 16, 2021
22 °C

ಎನ್.ಡಿ. ತಿವಾರಿ ಅಂತ್ಯ ಸಂಸ್ಕಾರದ ವೇಳೆ ಯೋಗಿ ಆದಿತ್ಯನಾಥ 'ನಗು'; ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಎನ್.ಡಿ. ತಿವಾರಿ ಅವರ ಅಂತ್ಯ ಸಂಸ್ಕಾರದ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಚಿವರೊಂದಿಗೆ ಹರಟೆ ಹೊಡೆದು ನಗುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಶನಿವಾರ ಬೆಳಗ್ಗೆ ಎನ್.ಡಿ ತಿವಾರಿ ಅವರ ಮೃತದೇಹವನ್ನು ಲಖನೌಗೆ ತಂದಿದ್ದು, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.

ತಿವಾರಿ ಮೃತದೇಹದ ಪಕ್ಕ ಮೊದಲ ಸಾಲಿನಲ್ಲಿ ಯೋಗಿ ಆದಿತ್ಯನಾಥ ಮತ್ತು ಬಿಹಾರದ ರಾಜ್ಯಪಾಲ ಲಾಲ್‍ಜೀ ಟಂಡನ್ ಕುಳಿತಿದ್ದು, ಉತ್ತರ ಪ್ರದೇಶದ ಸಚಿವರುಗಳಾಗಿ ಮೊಹಸಿನ್ ರಾಜಾ ಮತ್ತು ಅಶುತೋಷ್ ಟಂಡನ್ ಹಿಂದಿನ ಸಾಲಿನಲ್ಲಿ ಕುಳಿತಿದ್ದರು. ಆದಿತ್ಯನಾಥ ಅವರು ಲಾಲ್ ಜೀ ಟಂಡನ್, ರಾಜಾ ಮತ್ತು ಟಂಡನ್ ಜತೆ ಏನೋ ಮಾತನಾಡುತ್ತಿದ್ದು, ಆ ಮಾತಿಗೆ ಎಲ್ಲರೂ ನಗುತ್ತಿರುವ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಜಿಶಾನ್ ಹೈದರ್, ಇದು ಫೋಟೊಗಳಿಗಾಗಿರುವ ಕಾರ್ಯಕ್ರಮ ಅಲ್ಲ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಅಟಲ್ ಬಿಹಾರಿ ವಾಜಪೇಯಿ ಅಥವಾ ಮಾಜಿ ಮುಖ್ಯಮಂತ್ರಿ ಎನ್.ಡಿ. ತಿವಾರಿ ಅವರ ಅಂತ್ಯಕ್ರಿಯೆಯೇ ಆಗಿರಲಿ ಬಿಜೆಪಿಗೆ ಅದೊಂದು ಕಾರ್ಯಕ್ರಮ ಅಷ್ಟೇ. ಮೃತದೇಹದ ಮುಂದೆ ಈ ರೀತಿ ನಗುವುದು ಅವರ ಸಂವೇದನಾ ರಹಿತ ವರ್ತನೆಯನ್ನು ತೋರಿಸುತ್ತದೆ ಎಂದಿದ್ದಾರೆ.

ಇದು ಬಿಜೆಪಿಯ ನಿಜವಾದ ಸ್ವಭಾವ. ಮೃತದೇಹದ ಮುಂದೆ ಕುಳಿತು ಸಚಿವರು ಜೋರಾಗಿ ನಗುತ್ತಿದ್ದಾರೆ. ಅವರು ಯಾವ ರೀತಿ ಸಂವೇದನಾರಹಿತರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಇಂಥಾ ಜನರು ಬದುಕು ಮತ್ತು ಮರಣಕ್ಕೆ ಬೆಲೆಯೇ ನೀಡುವುದಿಲ್ಲ. ಇದೆಲ್ಲಾ ಅವರಿಗೆ ರಾಜಕೀಯ ಎಂದು ಸಮಾಜವಾದಿ ಪಕ್ಷದ ವಕ್ತಾ ಅನುರಾಗ್ ಭಾದುರಿಯಾ ಟೀಕಿಸಿದ್ದಾರೆ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು