ಕಲ್ಲಿದ್ದಲು ಹಗರಣ: ಎಚ್‌.ಸಿ. ಗುಪ್ತಾಗೆ 3 ವರ್ಷ ಜೈಲು

7
ಇತರ ಇಬ್ಬರಿಗೂ ಶಿಕ್ಷೆ

ಕಲ್ಲಿದ್ದಲು ಹಗರಣ: ಎಚ್‌.ಸಿ. ಗುಪ್ತಾಗೆ 3 ವರ್ಷ ಜೈಲು

Published:
Updated:
Deccan Herald

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್‌.ಸಿ. ಗುಪ್ತಾ ಅವರಿಗೆ ದೆಹಲಿ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇತರ ಅಧಿಕಾರಿಗಳಾದ ಕೆ.ಎಸ್‌. ಕ್ರೊಫಾ ಮತ್ತು ಕೆ.ಸಿ ಸಮ್ರಿಯಾ ಅವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಮೂವರಿಗೂ ತಲಾ ₹ 50 ಸಾವಿರ ದಂಡ ವಿಧಿಸಲಾಗಿದೆ. ಜೈಲು ಶಿಕ್ಷೆ ನಾಲ್ಕು ವರ್ಷಗಳಿಗಿಂತ ಕಡಿಮೆ ಇದ್ದ ಕಾರಣ ಮೂವರಿಗೆ ಜಾಮೀನು ದೊರೆತಿದೆ.

ಇದೇ ಪ್ರಕರಣದಲ್ಲಿ ತಪ್ಪಿತಸ್ಥರಾದ ವಿಕಾಸ್‌ ಮೆಟಲ್ಸ್‌ ಆ್ಯಂಡ್‌ ಪವರ್‌ ಲಿಮಿಟೆಡ್‌ನ (ವಿಎಂಪಿಎಲ್‌) ವ್ಯವಸ್ಥಾಪಕ ನಿರ್ದೇಶಕ ವಿಕಾಸ್‌ ಪಾಟ್ನಿ ಮತ್ತು ಅಧಿಕಾರಿ ಆನಂದ್‌ ಮಲ್ಲಿಕ್‌ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಪಾಟ್ನಿ ಅವರಿಗೆ ₹25 ಲಕ್ಷ ಹಾಗೂ ಮಲ್ಲಿಕ್‌ ಅವರಿಗೆ ₹2 ಲಕ್ಷ ದಂಡ ವಿಧಿಸಲಾಗಿದೆ. ವಿಎಂಪಿಎಲ್‌ ಕಂಪನಿಗೂ ₹1 ಲಕ್ಷ ದಂಡ ವಿಧಿಸಲಾಗಿದೆ. ವಿಶೇಷ ನ್ಯಾಯಾಧೀಶ ಭರತ್‌ ಪ್ರಸಾರ್‌ ಈ ತೀರ್ಪು ನೀಡಿದರು.

ಪಶ್ಚಿಮ ಬಂಗಾಳದ ಮೊಯಿರಾ ಮತ್ತು ಮಧುಜೊರೆ ಕಲ್ಲಿದ್ದಲು ನಿಕ್ಷೇಪಗಳನ್ನು ವಿಎಂಪಿಎಲ್‌ಗೆ ಹಂಚಿಕೆ ಮಾಡುವಲ್ಲಿ ಅವ್ಯವಹಾರ ನಡೆದಿತ್ತು ಎಂದು ಆರೋಪಿಸಲಾಗಿತ್ತು. 2012ರ ಸೆಪ್ಟೆಂಬರ್‌ನಲ್ಲಿ ಸಿಬಿಐ ಈ ಬಗ್ಗೆ ಎಫ್‌ಐಆರ್‌ ದಾಖಲಿಸಿತ್ತು. ಐವರು ತಪ್ಪಿತಸ್ಥರಿಗೂ ಏಳು ವರ್ಷ ಜೈಲು ಶಿಕ್ಷೆ ವಿಧಿಸಬೇಕು ಮತ್ತು ಖಾಸಗಿ ಕಂಪನಿಗೆ ಅತಿ ಹೆಚ್ಚು ದಂಡ ವಿಧಿಸಬೇಕು ಎಂದು ಸಿಬಿಐ ಕೋರಿತ್ತು.

ನ್ಯಾಯಾಲಯ ನವೆಂಬರ್‌ 30ರಂದು ಎಚ್‌.ಸಿ. ಗುಪ್ತಾ, ಕಲ್ಲಿದ್ದಲು ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಕ್ರೊಫಾ, ಅಂದಿನ ನಿರ್ದೇಶಕ ಸಮ್ರಿಯಾ ಹಾಗೂ ಪಾಟ್ನಿ ಮತ್ತು ಮಲ್ಲಿಕ್‌ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಜತೆಗೆ ವಿಎಂಪಿಎಲ್‌ ಕಂಪನಿ ಸಹ ದೋಷಿ ಎಂದು ತಿಳಿಸಿತ್ತು.

40 ಪ್ರಕರಣ

ಯುಪಿಎ–1 ಮತ್ತು ಯುಪಿಎ–2 ಸರ್ಕಾರದ ಅವಧಿಯಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ 40 ಪ್ರಕರಣಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !