ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಎಸ್‌ಆರ್‌ಸಿ ಕಚೇರಿ ಅಮರಾವತಿಗೆ: ಆಂಧ್ರ ವಿಧಾನಸಭೆ ಜಯದ ನಿರೀಕ್ಷೆಯಲ್ಲಿ ಜಗನ್‌

Last Updated 15 ಮೇ 2019, 3:38 IST
ಅಕ್ಷರ ಗಾತ್ರ

ಅಮರಾವತಿ: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸದಿಂದ, ಪಕ್ಷದ ಪ್ರಧಾನ ಕಚೇರಿಯನ್ನು ಹೈದರಾಬಾದ್‌ನಿಂದ ಅಮರಾವತಿಗೆ ಸ್ಥಳಾಂತರಿಸುವ ಕೆಲಸವನ್ನು ವೈಎಸ್‌ಆರ್‌ ಕಾಂಗ್ರೆಸ್‌ ಆರಂಭಿಸಿದೆ.

ಪ್ರಸಕ್ತ ಹೈದರಾಬಾದ್‌ನ ‘ಲೋಟಸ್‌ ಪಾಂಡ್‌’ನಲ್ಲಿರುವ ಪಕ್ಷದ ಕಚೇರಿಯನ್ನು ಅಮರಾವತಿಯಲ್ಲಿ ವೈ.ಎಸ್‌. ಜಗನ್‌ಮೋಹನ್‌ ಅವರು ಸುಮಾರು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮನೆಯ ಆವರಣಕ್ಕೆಸ್ಥಳಾಂತರಿಸಲಾಗುತ್ತಿದೆ. ‘ಮೇ 22ರಿಂದ ಪಕ್ಷವು ಪೂರ್ಣಪ್ರಮಾಣದಲ್ಲಿ ಇಲ್ಲಿಂದಲೇ ಕಾರ್ಯನಿರ್ವಹಿಸಲಿದೆ’ ಎಂದು ಮೂಲಗಳು ತಿಳಿಸಿವೆ.

ಇಲ್ಲಿನ ನದಿ ದಂಡೆಯಲ್ಲಿರುವ ತಾಡೆಪಲ್ಲಿ ಗ್ರಾಮದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಜಗನ್‌ ಅವರು ನಿರ್ಮಿಸಿರುವ ಭವ್ಯವಾದ ಮನೆಯ ಗೃಹಪ್ರವೇಶ ಸಮಾರಂಭವು ಫೆಬ್ರುವರಿಯಲ್ಲಿ ನಡೆದಿತ್ತು. ಆದರೆ ಜಗನ್‌ ಅವರು ಇಲ್ಲಿ ಉಳಿದುಕೊಂಡಿರಲಿಲ್ಲ. ಬದಲಿಗೆ ಹೈದರಾಬಾದ್‌ನಲ್ಲಿ ಇದ್ದುಕೊಂಡೇ ಕೆಲಸಕಾರ್ಯಗಳನ್ನು ಮಾಡುತ್ತಿದ್ದರು. ಚುನಾವಣೆಯ ಫಲಿತಾಂಶದ ದಿನವಾದ ಮೇ 23ರಂದು ಅವರು ತಮ್ಮ ಹೊಸ ಮನೆಯಲ್ಲಿ ಇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣೆಯಲ್ಲಿ ಜಗನ್‌ ಅವರು ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸದಲ್ಲಿರುವ ಪಕ್ಷದ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಪಕ್ಷದ ಕೇಂದ್ರಕಚೇರಿಯ ಪೀಠೋಪಕರಣ ಹಾಗೂ ಇತರ ವಸ್ತುಗಳ ಸ್ಥಳಾಂತರ ಕಾರ್ಯವನ್ನು ಆರಂಭಿಸಿದ್ದಾರೆ. ‘ಪಕ್ಷವು ರಾಜ್ಯದಲ್ಲಿ ಕನಿಷ್ಠ 120 ವಿಧಾನಸಭಾ ಕ್ಷೇತ್ರಗಳಲ್ಲಿಗೆಲುವು ಸಾಧಿಸಲಿದೆ ಮತ್ತು ಜಗನ್‌ ಅವರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಅದಾದ ಬಳಿಕ ಅವರು ತಾಡೆಪಲ್ಲಿಯಲ್ಲಿರುವ ತಮ್ಮ ಹೊಸ ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಅಲ್ಲಿಯೇ ಪಕ್ಷದ ಕಚೇರಿಯೂ ಇದ್ದರೆ ಅನುಕೂಲವಾಗುತ್ತದೆ, ಪ್ರಧಾನ ಕಚೇರಿ ಸ್ಥಳಾಂತರಗೊಂಡರೂ, ಹೈದರಾಬಾದ್‌ನಲ್ಲಿರುವ ಈಗಿನ ಕಚೇರಿಯನ್ನು ಮುಚ್ಚುವುದಿಲ್ಲ. ಕಡಿಮೆ ಸಿಬ್ಬಂದಿಯೊಂದಿಗೆ ಅದು ಕೆಲಸ ಮಾಡಲಿದೆ’ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಆಂಧ್ರದ ಮುಖ್ಯಮಂತ್ರಿ, ತೆಲುಗುದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರೂ ಈಚೆಗೆ ನದಿ ದಂಡೆಯಉಂದವಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಅಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿ ಟಿಡಿಪಿಯ ಆಂಧ್ರಪ್ರದೇಶ ಘಟಕಕ್ಕಾಗಿ ಹೈಟೆಕ್‌ ಸೌಲಭ್ಯಗಳಿರುವ ಭವ್ಯವಾದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ನಾಯ್ಡು ಅವರ ಕುಟುಂಬ ಇನ್ನೂ ಹೈದರಾಬಾದ್‌ನಲ್ಲಿ ನೆಲೆಸಿದ್ದು, ಅವರು ಆಗಾಗ ಅಲ್ಲಿಗೆ ಭೇಟಿನೀಡುತ್ತಾರೆ.

ಅಮರಾವತಿಯಲ್ಲಿ ಪಕ್ಷದ ಕಚೇರಿಯನ್ನು ಆರಂಭಿಸಿರುವ ‘ಜನಸೇನಾ’ ನಾಯಕ ಪವನ್‌ ಕಲ್ಯಾಣ್‌ ಅವರೂ ಇಲ್ಲಿಗೆ ಸಮೀಪದ ಗುಂಟೂರು ಜಿಲ್ಲೆಯಲ್ಲಿ, ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಸಮೀಪದಲ್ಲಿ ಮನೆ ಮತ್ತು ಕಚೇರಿ ನಿರ್ಮಿಸಲು ಮುಂದಾಗಿದ್ದು, ಇತ್ತೀಚೆಗಷ್ಟೇ ಶಿಲಾನ್ಯಾಸ ನಡೆಸಿದ್ದಾರೆ. ರಾಜ್ಯ ವಿಭಜನೆಯಾದ ನಂತರ ಹೊಸ ರಾಜಧಾನಿಯಲ್ಲಿ ಮನೆ ಮತ್ತು ಕಚೇರಿಗಳನ್ನು ಮಾಡಿದ ರಾಜಕಾರಣಿಗಳಲ್ಲಿ ಪವನ್‌ ಕಲ್ಯಾಣ್‌ ಮೊದಲಿಗರು. ಈಗ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಅಮರಾವತಿಯಲ್ಲಿಯೇ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT