ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧಿಕಾರದ ಸಭೆ ಬಹಿಷ್ಕರಿಸಿದ ಕಾಂಗ್ರೆಸ್‌ ಸಂಸದರು

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯಲ್ಲಿ ಆರ್‌ಎಸ್‌ಎಸ್ ನಿರ್ಣಯ ಉಲ್ಲೇಖಕ್ಕೆ ವಿರೋಧ
Last Updated 4 ಮಾರ್ಚ್ 2020, 20:01 IST
ಅಕ್ಷರ ಗಾತ್ರ

ನವದೆಹಲಿ: ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರಕ್ಕೆ ಸಲ್ಲಿಸಲಿರುವ ಮನವಿಯಲ್ಲಿ ಸಂಘ ಪರಿವಾರದ ನಿರ್ಣಯದ ಉಲ್ಲೇಖ ಇರುವುದನ್ನು ಖಂಡಿಸಿದ ಕಾಂಗ್ರೆಸ್‌ ಸಂಸದರು ಬುಧವಾರ ಇಲ್ಲಿ ಆಯೋಜಿಸಿದ್ದ ಸಭೆಯನ್ನು ಬಹಿಷ್ಕರಿಸಿದರು.

ಪ್ರಾಧಿಕಾರ ಸಿದ್ಧಪಡಿಸಿರುವ ಮನವಿಯ ಕಿರುಹೊತ್ತಗೆಯಲ್ಲಿ ಆರ್‌ಎಸ್‌ಎಸ್‌ನ ನಿರ್ಣಯ ಪ್ರಕಟವಾಗಿದ್ದನ್ನು ಗಮನಿಸಿದ ಕಾಂಗ್ರೆಸ್‌ನ ಆಸ್ಕರ್‌ ಫರ್ನಾಂಡಿಸ್‌, ರಾಜೀವಗೌಡ, ಬಿ.ಕೆ. ಹರಿಪ್ರಸಾದ್, ಎಲ್.ಹನುಮಂತಯ್ಯ, ಜಿ.ಸಿ. ಚಂದ್ರಶೇಖರ, ಡಿ.ಕೆ. ಸುರೇಶ ಹಾಗೂ ನಾಸಿರ್ ಹುಸೇನ್ ಸಭೆಯಿಂದ ಹೊರನಡೆದರು.

‘ಕನ್ನಡಕ್ಕಾಗಿ ದಶಕಗಳಿಂದ ಹೋರಾಟ ನಡೆಸಿರುವ ಅನೇಕ ಸಂಘಟನೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಪ್ರಸ್ತಾಪಿಸದ ಪ್ರಾಧಿಕಾರದ ನಿಲುವನ್ನು ಖಂಡಿಸಿ ಸಭಾತ್ಯಾಗ ಮಾಡಲಾಗಿದೆ’ ಎಂದು ಎಲ್‌.ಹನುಮಂತಯ್ಯ ಹೇಳಿದರು.

ಉಲ್ಲೇಖ ತಪ್ಪಲ್ಲ:ಕನ್ನಡನಾಡು, ನುಡಿ, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಕೋರಲಾಗಿದೆ. ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ದೊರೆಯಬೇಕು ಎಂಬ ಬೇಡಿಕೆ ಇರುವ ಆರ್‌ಎಸ್‌ಎಸ್‌ನ ನಿರ್ಣಯವನ್ನು ಉಲ್ಲೇಖಿಸಿದ್ದರಲ್ಲಿ ತಪ್ಪಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಭೆಯ ನಂತರ ಸ್ಪಷ್ಟಪಡಿಸಿದರು.

ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಸಂಘ ಪರಿವಾರದ ನಿಲುವನ್ನು ಬೆಂಬಲಿಸುತ್ತದೆ ಎಂಬ ಕಾರಣಕ್ಕೆ ಮಾತೃಭಾಷೆಗೆ ಒತ್ತು ನೀಡಿರುವ ಆರ್‌ಎಸ್‌ಎಸ್‌ ನಿರ್ಣಯವನ್ನು ಮನವಿಯ ಜೊತೆ ಸೇರಿಸಿರುವುದು ಸೂಕ್ತವಾಗಿದೆ ಎಂದು ಪ್ರಾಧಿಕಾರದ ನಿಯೋಗದಲ್ಲಿದ್ದ ಪ್ರಕಾಶ್‌ ಬೆಳವಾಡಿ ಹೇಳಿದರು.

ಸಭೆಯಲ್ಲಿ ಗುರುರಾಜ ಕರ್ಜಗಿ ಹಾಗೂ ರಾ.ನಂ. ಚಂದ್ರಶೇಖರ್‌, ಮಾಳವಿಕಾ ಅವಿನಾಶ್‌, ನಿರಂಜನಾರಾಧ್ಯ, ಸಿದ್ದಯ್ಯ, ಮುರುಳೀಧರ್‌,ಕೇಂದ್ರ ಸಚಿವರಾದ ಸದಾನಂದಗೌಡ, ಸುರೇಶ ಅಂಗಡಿ, ಸಂಸದರಾದ ಸುಮಲತಾ ಅಂಬರೀಷ್‌, ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು.

ಪ್ರಾಧಿಕಾರದ ನಿಯೋಗವು ನಂತರ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌, ಪ್ರಲ್ಹಾದ ಜೋಶಿ, ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT