ಸೋಮವಾರ, ಜೂನ್ 27, 2022
22 °C
ರಾಜ್ಯ ರಾಜಕೀಯ ಬೆಳವಣಿಗೆ

303 ಗೆದ್ದರೂ ಬಿಜೆಪಿ ಹೊಟ್ಟೆ ತುಂಬಿಲ್ಲ: ಲೋಕಸಭೆಯಲ್ಲಿ ಕಾಂಗ್ರೆಸ್‌ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗೆ ಬಿಜೆಪಿಯೇ ಕಾರಣ ಎಂದು ಲೋಕಸಭೆಯಲ್ಲಿ ದೂರಿದ ಕಾಂಗ್ರೆಸ್‌ ಸದಸ್ಯರು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಲೋಕಸಭೆ ಚುನಾವಣೆಯಲ್ಲಿ 303 ಕ್ಷೇತ್ರಗಳಲ್ಲಿ ಜಯಿಸಿದರೂ ನಿಮ್ಮ ಹೊಟ್ಟೆ ತುಂಬಿದಂತೆ ಕಾಣುತ್ತಿಲ್ಲ. ಅದಕ್ಕೆಂದೇ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನ ಶಾಸಕರನ್ನು ಸೆಳೆಯುತ್ತಿದ್ದೀರಿ’ ಎಂದು ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ಕೆಡವಲು ಬಿಜೆಪಿ ಹುನ್ನಾರ ನಡೆಸಿದೆ. ಕರ್ನಾಟಕದ ಆಡಳಿತಾರೂಢ ಪಕ್ಷಗಳ ಶಾಸಕರನ್ನು ಮುಂಬೈನ ಹೋಟೆಲ್‌ನಲ್ಲಿ ಅಕ್ರಮವಾಗಿ ಇರಿಸಲಾಗಿದೆ’ ಎಂದು ಅವರು ದೂರಿದರು.

‘ಕರ್ನಾಟಕದ ಬೆಳವಣಿಗೆಗೆ ನಾವು ಕಾರಣವಲ್ಲ. ನಿಮ್ಮಿಂದ ಬೇಸತ್ತು ಅವರು ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ನಮ್ಮ ಮನೆಯಲ್ಲಿರುವ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಕದ್ದೊಯ್ದರೆ ಅದಕ್ಕೆ ಮನೆಯವರನ್ನು ದೂಷಿಸುವುದು ಸರಿಯೇ, ಅದಕ್ಕೆ ಕಳ್ಳರೇ ಕಾರಣವಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಸಂಸದರೊಬ್ಬರ ಒಡೆತನದ ವಿಶೇಷ ವಿಮಾನದಲ್ಲೇ ಶಾಸಕರನ್ನು ಮುಂಬೈಗೆ ಕರೆದೊಯ್ಯಲಾಗಿದೆ. ಆದರೂ ಬಿಜೆಪಿ ಮುಖಂಡರು ಅದನ್ನು ನಿರಾಕರಿಸುತ್ತಿದ್ದಾರೆ. ಎಷ್ಟೇ ಸ್ಥಾನ ಜಯಿಸಿದರೂ ನಿಮಗೆ ಸಮಾಧಾನ ಆಗುತ್ತಿಲ್ಲ. ನಿಮ್ಮ ಹೊಟ್ಟೆ ಕಾಶ್ಮೀರಿ ಗೇಟ್‌ಗೆ ಸಮನಾಗಿದೆ (ಆಪ್‌ ಕಾ ಪೇಠ್‌ ಔರ್‌ ಕಾಶ್ಮೀರಿ ಗೇಟ್‌ ದೋನೊ ಬರಾಬರ್‌ ಹುವಾ ಹೈ) ಎಂದು ಅವರು ವ್ಯಂಗ್ಯವಾಡಿದರು.

ಈ ಸಂದರ್ಭ ಉತ್ತರ ನೀಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌, ‘ಕರ್ನಾಟಕದಲ್ಲಿನ ಬೆಳವಣಿಗೆಗಳಿಗೂ ನಮಗೂ ಸಂಬಂಧವಿಲ್ಲ. ನಾವು ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿಲ್ಲ. ಶಾಸಕರ ರಾಜೀನಾಮೆಗೂ ನಾವು ಪ್ರೇರಣೆ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ರಾಜೀನಾಮೆ ನೀಡುವ ಪ್ರವೃತ್ತಿಗೆ ನಾವು ಚಾಲನೆ ನೀಡಿಲ್ಲ. ಬದಲಿಗೆ, ನಿಮ್ಮ ನಾಯಕ ರಾಹುಲ್‌ ಗಾಂಧಿ ಅವರೇ ಅದನ್ನು ಆರಂಭಿಸಿದ್ದಾರೆ. ಈಗ ಇತರ ಮುಖಂಡರು ಮತ್ತು ಶಾಸಕರು ಅವರನ್ನು ಅನುಸರಿಸುತ್ತಿದ್ದಾರೆ ಅಷ್ಟೇ’ ಎಂದು ಅವರು ಮೂದಲಿಸಿದರು.

ಈ ಸಂದರ್ಭ ‘ಪ್ರಜಾತಂತ್ರ ಉಳಿಸಿ’ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಕಾಂಗ್ರೆಸ್ ಸದಸ್ಯರು, ‘ಬಿಜೆಪಿಯು ಕರ್ನಾಟಕದ ಸಮ್ಮಿಶ್ರ ಸರ್ಕಾರ ಕೆಡವಲು ಯತ್ನಿಸುತ್ತಿದೆ’ ಎಂಬ ಘೋಷಣೆ ಕೂಗಿ ಪ್ರತಿಭಟಿಸಿದರು.

ಬೆಳಿಗ್ಗೆ ಕಲಾಪ ಆರಂಭ ಆಗುತ್ತಿದ್ದಂತೆಯೇ ನಿಲುವಳಿ ಸೂಚನೆಗೆ ಮುಂದಾದ ಕೋಡಿಕುನಿಲ್‌ ಸುರೇಶ್‌ ಹಾಗೂ ಅಧೀರ್‌ ರಂಜನ್‌ ಚೌಧರಿ, ಕರ್ನಾಟಕದ ಬೆಳವಣಿಗೆಗಳ ಕುರಿತು ಚರ್ಚಿಸಲು ಅವಕಾಶ ಕೋರಿದರು. ಆದರೆ, ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದ ಸ್ಪೀಕರ್ ಓಂ ಬಿರ್ಲಾ, ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಕಲ್ಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು