ಭಾನುವಾರ, ಫೆಬ್ರವರಿ 16, 2020
22 °C
ವರನ ಅನುಪಸ್ಥಿತಿಯಲ್ಲಿ ಆರತಕ್ಷತೆ

ಕೊರೊನಾ ವೈರಸ್: ಚೀನಾದಿಂದ ಬಂದ ವರನ ಮದುವೆ ಮುಂದಕ್ಕೆ!

ಪಿಟಿಐ Updated:

ಅಕ್ಷರ ಗಾತ್ರ : | |

ತ್ರಿಶೂರ್ (ಕೇರಳ): ಚೀನಾದಿಂದ ಬಂದ ವರನ ಮದುವೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಒಂದು ವಾರ ಮುಂದೂಡಲಾಗಿದೆ.

ಕಾಡಂಗೋಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿರುವ ವರ 15 ದಿನಗಳ ಹಿಂದಷ್ಟೇ ಚೀನಾದಿಂದ ಬಂದಿದ್ದ. ಕೊರೊನಾ ವೈರಸ್‌ ಸೋಂಕು ಶಂಕೆಯ ಹಿನ್ನೆಲೆಯಲ್ಲಿ ಆತನಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸಿಸುವಂತೆ ಸೂಚಿಸಿ, ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿದ್ದರು.

‘ನಮಗೆ ಮದುವೆ ವಿಚಾರ ಫೆ.3ರಂದು ತಿಳಿಯಿತು. ಆರೋಗ್ಯ ನಿರೀಕ್ಷಕರು ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದರು. ನಾವು ಆರೋಗ್ಯ ಇಲಾಖೆಯ ಉಪನಿರ್ದೇಶಕರಿಗೆ ಪತ್ರವೊಂದನ್ನು ಕಳಿಸಿದೆವು. ಅಧಿಕಾರಿಗಳ ಮಧ್ಯಪ್ರವೇಶದ ನಂತರ ಕುಟುಂಬವು ಮದುವೆಯನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿತು’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮಾಹಿತಿ ನೀಡಿದರು.

ಚೀನಾದ ವುಹಾನ್ ನಗರದಿಂದ 1500 ಕಿ.ಮೀ. ದೂರವಿರುವ ಯಿವು ಎಂಬಲ್ಲಿ ಯುವಕ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಕೊಚ್ಚಿ ವಿಮಾನ ನಿಲ್ದಾಣಕ್ಕೆ ಜನವರಿ 19ಕ್ಕೆ ತಲುಪಿದ ನಂತರ ಸರ್ಕಾರ ರೂಪಿಸಿರುವ ನಿಯಮಗಳಂತೆ ಅಧಿಕಾರಿಗಳ ಮುಂದೆ ವರದಿ ಮಾಡಿಕೊಂಡಿದ್ದ. ಮನೆಯಲ್ಲಿಯೇ 28 ದಿನಗಳ ಕಾಲ ನಿಗಾವಣೆಯಲ್ಲಿರಬೇಕು ಎಂದು ಅಧಿಕಾರಿಗಳು ಆತನಿಗೆ ಸೂಚಿಸಿದ್ದರು.

ಮಗನ ಅನುಪಸ್ಥಿತಿಯಲ್ಲಿ ವರನ ತಾಯಿಯೇ ವಧುವಿಗೆ ಹಾರ ಹಾಕಿ ಛತ್ರಕ್ಕೆ ಕರೆತಂದರು. ಬಂದಿದ್ದ ಎಲ್ಲ ಅತಿಥಿಗಳಿಗೆ ಸಾಂಪ್ರದಾಯಿ ‘ಸದ್ಯ’ ಖಾದ್ಯ ಉಣಬಡಿಸಲಾಯಿತು. ಮದುವೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಕೊರೊನಾ ವೈರಸ್ ಸೋಂಕು ತೀವ್ರಗತಿಯಲ್ಲಿ ಹರಡಬಹುದು ಎಂಬ ಶಂಕೆಯಿಂದ ವೈರಸ್‌ ಸೋಂಕು ಕಾಣಿಸಿಕೊಂಡಿರುವ ಪ್ರದೇಶಗಳಿಂದ ಹಿಂದಿರುಗುವವರು ಮದುವೆ ಮತ್ತು ಇತರ ಸಮಾರಂಭಗಳನ್ನು ಮುಂದೂಡಬೇಕು ಎಂದು ಕೇರಳ ಸರ್ಕಾರ ಸೂಚಿಸಿದೆ.

ಈವರೆಗೆ ಚೀನಾದಲ್ಲಿ ಕೊರೊನಾ ಬಾಧೆಗೆ 490 ಮಂದಿ ಮೃತಪಟ್ಟಿದ್ದಾರೆ. ವುಹಾನ್ ವಿವಿಯಿಂದ ಹಿಂದಿರುಗಿದ್ದ ಮೂವರು ಕೇರಳ ಮೂಲದ ವಿದ್ಯಾರ್ಥಿಗಳಲ್ಲಿ ಶಂಕಿತ ಕೊರೊನಾ ವೈರಸ್‌ ಕುರುಹುಗಳು ಕಂಡುಬಂದಿದ್ದವು. ಕೇರಳದಲ್ಲಿ ಒಟ್ಟಾರೆ 2,321 ಮಂದಿ ಮನೆಗಳಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ನಿಗಾವಣೆಯಲ್ಲಿದ್ದಾರೆ. ಕೇರಳದ ವಿವಿಧೆಡೆ 100 ಪ್ರತ್ಯೇಕ ನಿಗಾ ಘಟಕಗಳನ್ನು ತೆರೆಯಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು