ಬುಧವಾರ, ಜೂನ್ 3, 2020
27 °C

ಲಾಕ್‌ಡೌನ್‌ ವಿಸ್ತರಣೆಗೆ ರಾಜ್ಯ ಸರ್ಕಾರಗಳ ಮನವಿ: ಕೇಂದ್ರದ ನಿರ್ಧಾರ ಏನು?

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ನಿಂದ ಜನರ ಸಂಚಾರ ಕಡಿಮೆಯಾಗಿರುವುದರಿಂದ ದೆಹಲಿಯ ರಸ್ತೆಯ ಬದಿಯಲ್ಲಿ ಓಡಾಡುತ್ತಿರುವ ನವಿಲು–ಸಂಗ್ರಹ ಚಿತ್ರ

ನವದೆಹಲಿ: ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ದೇಶದಾದ್ಯಂತ ಏಪ್ರಿಲ್‌ 14ರ ವರೆಗೂ ವಿಧಿಸಲಾಗಿರುವ ಲಾಕ್‌ಡೌನ್‌ನ್ನು ಮುಂದುವರಿಸುವಂತೆ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಮನವಿ ಮಾಡಿವೆ. ರಾಜ್ಯ ಸರ್ಕಾರಗಳ ಮನವಿಯನ್ನು ಕೇಂದ್ರ ಪರಿಗಣಿಸುವ ಸಾಧ್ಯತೆ ಇರುವುದಾಗಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಕೇಂದ್ರ ಸರ್ಕಾರ ಈವರೆಗೂ ಯಾವುದೇ ಸೂಚನೆಗಳನ್ನೂ ನೀಡಿಲ್ಲ.

ಮಾರ್ಚ್‌ 24ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ ಘೋಷಿಸಿದ್ದು, 21 ದಿನಗಳ ವರೆಗೂ ದೇಶದಾದ್ಯಂತ ನಿರ್ಬಂಧ ವಿಧಿಸಲಾಗಿದೆ. ಲಾಕ್‌ಡೌನ್‌ ತೆರವುಗೊಳಿಸಿದರೆ ನಿಯಂತ್ರಣ ಸಾಧ್ಯವಾಗದೆ ಜೀವಗಳಿಗೆ ಎರವಾಗಬಹುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಸೋಮವಾರ ಆತಂಕ ವ್ಯಕ್ತಪಡಿಸಿದ್ದರು. ಲಾಕ್‌ಡೌನ್‌ ಅವಧಿ ಇನ್ನೂ ಎರಡು ವಾರ ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. 

ದೇಶದಾದ್ಯಂತ ಕೋವಿಡ್‌–19 ದೃಢಪಟ್ಟು ಚಿಕಿತ್ಸೆ ಪಡೆಯುತ್ತಿರುವವರು 3,981 ಮಂದಿ. ಸೋಂಕಿನಿಂದ 114 ಜನ ಸಾವಿಗೀಡಾಗಿದ್ದಾರೆ. 

'ಲಾಕ್‌ಡೌನ್‌ ಕಾರಣದಿಂದಾಗಿಯೇ ದೇಶ ಆದಷ್ಟು ಸುರಕ್ಷಿತವಾಗಿದ್ದು, ಇತರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಪ್ರಕರಣಗಳು ದಾಖಲಾಗಿವೆ. ಭಾರತದಂತಹ ರಾಷ್ಟ್ರಗಳು ಬಹಳಷ್ಟು ಎಚ್ಚರಿಕೆ ವಹಿಸಬೇಕಿದೆ, ಇನ್ನವಾದರೆ ಸೋಂಕು ಅನಿಯಂತ್ರಿತವಾಗುತ್ತದೆ. ಲಾಕ್‌ಡೌನ್‌ ಪಾಲಿಸುವುದನ್ನು ಹೊರತು ಪಡಿಸಿ ನಮಗೆ ಇನ್ನಾವುದೇ ಆಯ್ಕೆಗಳಿಲ್ಲ. ಇಟಲಿ, ಸ್ಪೇನ್‌ ಹಾಗೂ ಅಮೆರಿಕ ಕಂಡಿರುವಷ್ಟು ದೊಡ್ಡ ಮಟ್ಟದಲ್ಲಿ ಸಾವು ನಮ್ಮಲ್ಲಿ ಸಂಭವಿಸಿಲ್ಲ ಎಂಬುದು ಸಮಾಧಾನಕರ' ಎಂದು ಕೆ.ಸಿ.ಚಂದ್ರಶೇಖರ್‌ ಹೇಳಿದ್ದಾರೆ. 

ಕಳೆದ ವಾರ ಪ್ರಧಾನಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಮಾತುಕತೆ ನಡೆಸಿ, ಏಪ್ರಿಲ್‌ 14ರ ನಂತರದ ನಡೆಯ ಬಗ್ಗೆ ಹಾಗೂ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುವಂತೆ ಕೇಳಿದ್ದರು. 

ಪಂಜಾಬ್‌, ಹರಿಯಾಣ ಹಾಗೂ ಉತ್ತರ ಪ್ರದೇಶಗಳಲ್ಲಿ ಭಾಗಶಃ ಲಾಕ್‌ಡೌನ್‌ ಪರವಾಗಿ ಮನವಿ ಸಲ್ಲಿಸುವ ಸಾಧ್ಯತೆಗಳಿವೆ. ಗೋಧಿ ಬೆಳೆಯ ಸಾಗುವಳಿ ಸಮಯವಾದ್ದರಿಂದ ಹೆಚ್ಚು ಕಾರ್ಮಿಕರ ಅವಶ್ಯಕತೆ ಎದುರಾಗಲಿದ್ದು, ವಿವಿಧ ಸ್ಥಳಗಳಿಗೆ ಪ್ರಯಾಣಿಸುವುದೂ ಅವಶ್ಯವಾಗಲಿದೆ. ದೀರ್ಘಾವಧಿಯ ಹೋರಾಟಕ್ಕೆ ಜನರು ಸಿದ್ಧರಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡುವಾಗ ತಿಳಿಸಿದ್ದಾರೆ. ಹಂತ ಹಂತವಾಗಿ ಲಾಕ್‌ಡೌನ್‌ ತೆರವಿಗೆ ಒಳಗಾಗುವಂತೆ ಯೋಜನೆ ರೂಪಿಸಿಕೊಳ್ಳುವಂತೆ ಹೇಳಿದ್ದಾರೆ. 

ಲಾಕ್‌ಡೌನ್‌ ಅವಧಿಯ ಕೊನೆಯ ವಾರದಲ್ಲಿ ಕೊರೊನಾ ವೈರಸ್‌ ಸೋಂಕು ವ್ಯಾಪಿಸುತ್ತಿರುವುದಕ್ಕೆ ಸಂಬಂಧಿಸಿದ ಮಾಹಿತಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ನಿರ್ಣಾಯಕವಾಗಲಿದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಜನರು ಬದ್ಧರಾಗಿಬೇಕಾಗುತ್ತದೆ, ಏಪ್ರಿಲ್‌ 14ರ ನಂತರವೂ ಈಗ ನೀಡಿರುವಷ್ಟೇ ಸಹಕಾರವನ್ನು ಮುಂದುವರಿಸುವಂತೆ ಜನರಲ್ಲಿ ಕೇಳಿದ್ದಾರೆ. 

ಒಂದೇ ಬಾರಿಗೆ ಲಾಕ್‌ಡೌನ್‌ ತೆರವುಗೊಳಿಸುವುದು ಸಾಧ್ಯವಾಗುವುದಿಲ್ಲ. ಹಂತ ಹಂತವಾಗಿಯೇ ನಿರ್ಬಂಧ ಸಡಿಲಗೊಳಿಸಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೊಟ್‌ ಅಭಿಪ್ರಾಯ ಪಟ್ಟಿರುವುದಾಗಿ ಪಿಟಿಐ ವರದಿ ಮಾಡಿದೆ. ಇನ್ನೂ ದೇಶದಲ್ಲಿಯೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು, ಲಾಕ್‌ಡೌನ್‌ ಅವಧಿ ವಿಸ್ತರಣೆ ಅನಿವಾರ್ಯವಾಗಿದೆ. 

ಗುಂಪು ಗೂಡುವುದಕ್ಕೆ ದಾರಿ ಮಾಡಿಕೊಡಬಹುದಾದ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಧಾರ್ಮಿಕ ಚಟುವಟಿಕೆಗಳು, ಜೂನ್‌ ವರೆಗೂ ಕಾಲೇಜು ಮತ್ತು ಶಾಲೆಗಳ ಕಾರ್ಯಾಚರಣೆ ಸ್ಥಗಿತ, ಸರ್ಕಾರಿ ಇಲಾಖೆಗಳಲ್ಲಿ ವರ್ಗಾವಣೆ ಹಾಗೂ ಹುದ್ದೆಗಳ ನಿಗದಿಯನ್ನು 6 ತಿಂಗಳ ವರೆಗೆ ತಡೆಯುವುದು, ಪರಿಸ್ಥಿತಿ ಸುಧಾರಿಸುವವರೆಗೂ ಹೊಟೇಲ್‌, ಬಾರ್‌ಗಳು ಹಾಗೂ ರೆಸ್ಟೊರೆಂಟ್‌ಗಳನ್ನು ಮುಚ್ಚುವದು, ಮದುವೆ, ಅಂತ್ಯ ಸಂಸ್ಕಾರಗಳಲ್ಲಿ ಜನರ ಸೇರುವುದಕ್ಕೆ ನಿರ್ಬಂಧ ಹಾಗೂ ದೊಡ್ಡ ಸಭೆಗಳನ್ನು ನಡೆಸುವುದಕ್ಕೆ ಅವಕಾಶ ನೀಡದಿರುವ ಅಂಶಗಳನ್ನು ಲಾಕ್‌ಡೌನ್‌ ಒಳಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು