ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರಿಂದ 29 ಲಕ್ಷ ಕೋವಿಡ್–19 ಪ್ರಕರಣ ತಪ್ಪಿಸಿದೆ ಲಾಕ್‌ಡೌನ್‌: ಕೇಂದ್ರ

37000ದಿಂದ 78000 ಜೀವಗಳನ್ನು ರಕ್ಷಿಸಿದೆ ಎಂದ ಸರ್ಕಾರ
Last Updated 22 ಮೇ 2020, 14:31 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ನಿಂದಾಗಿ 14ರಿಂದ 29 ಲಕ್ಷ ಜನರಿಗೆ ಕೊರೊನಾ ತಗುಲುವುದು ತಪ್ಪಿದೆ. 37 ಸಾವಿರದಿಂದ 78 ಸಾವಿರ ಜನರ ಜೀವ ಉಳಿಸಿದೆ ಎಂದು ವಿವಿಧ ಅಧ್ಯಯನ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ಹೇಳಿದೆ. ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ಲಾಕ್‌ಡೌನ್ ಮಹತ್ವದ ಪಾತ್ರ ವಹಿಸಿದೆ ಎಂದೂ ಪ್ರತಿಪಾದಿಸಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಾಕ್‌ಡೌನ್‌ ಎಂಬುದು ಸರ್ಕಾರದ ಸಮಯೋಚಿತ, ಶ್ರೇಣೀಕೃತ ಮತ್ತು ಪೂರ್ವಭಾವಿ ನಿರ್ಧಾರವಾಗಿದೆ. ಸರ್ಕಾರದ ಒಟ್ಟಾರೆ ಕಾರ್ಯಸೂಚಿಯ ಭಾಗವಾಗಿದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿ.ಕೆ.ಪೌರ್ ಹೇಳಿದ್ದಾರೆ.

ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮಾರ್ಚ್‌ 25ರಿಂದ ದೇಶದಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಸದ್ಯ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದು, ಕಂಟೈನ್‌ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಹಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.

ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿ ಪ್ರವೀಣ ಶ್ರೀವಾಸ್ತವ ಅವರು ಕೊರೊನಾ ಪ್ರಕರಣಗಳು, ಅದರಿಂದ ಸಂಭವಿಸುವ ಸಾವು ಹಾಗೂ ಲಾಕ್‌ಡೌನ್‌ನ ಪರಿಣಾಮದ ಅಂದಾಜು ಲೆಕ್ಕಾಚಾರವನ್ನು ವಿವಿಧ ಮಾಡೆಲ್‌ಗಳ ಆಧಾರದಲ್ಲಿ ವಿವರಿಸಿದ್ದಾರೆ.

ಬಾಸ್ಟನ್ ಕನ್ಸಲ್ಟಿಂಗ್‌ ಗ್ರೂಪ್‌ ಮಾಡೆಲ್ ಪ್ರಕಾರ, ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ 1.2 ಲಕ್ಷದಿಂದ 2.1 ಲಕ್ಷ ಜೀವಗಳನ್ನು ಉಳಿಸಲಾಗಿದೆ. 36 ಲಕ್ಷದಿಂದ 70 ಲಕ್ಷ ಜನರಿಗೆ ಕೊರೊನಾ ತಗುಲುವುದು ತಪ್ಪಿದೆ. ‘ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ‘ ಪ್ರಕಾರ ಲಾಕ್‌ಡೌನ್‌ನಿಂದಾಗಿ ದೇಶದಾದ್ಯಂತ 78,000 ಜನರಿಗೆ ಕೊರೊನಾದಿಂದ ರಕ್ಷಣೆ ದೊರೆತಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

ನಿವೃತ್ತ ವಿಜ್ಞಾನಿಗಳೂ ಸೇರಿದಂತೆ ಕೆಲವು ತಜ್ಞರ ಪ್ರಕಾರ, 15.9 ಲಕ್ಷ ಜನರಿಗೆ ಕೊರೊನಾ ತಗುಲುವುದು ಮತ್ತು 51,000 ಜನ ಸಾವಿಗೀಡಾಗುವುದನ್ನು ಲಾಕ್‌ಡೌನ್‌ ತಪ್ಪಿಸಿದೆ ಎಂದೂ ಅವರು ತಿಳಿಸಿದ್ದಾರೆ.

ಸಾಂಖ್ಯಿಕ ಇಲಾಖೆ ಮತ್ತು ಸಾಂಖ್ಯಿಕ ಸಂಸ್ಥೆಯು ಜಂಟಿಯಾಗಿ ನಡೆಸಿದ ಸಮೀಕ್ಷೆಗಳಲ್ಲಿ, 20 ಲಕ್ಷ ಮಂದಿಗೆ ಕೊರೊನಾ ತಗುಲದಂತೆ ತಡೆಯಲು ಮತ್ತು 54,000 ಸಾವು ತಪ್ಪಿಸಲು ಲಾಕ್‌ಡೌನ್ ನೆರವಾಗಿದೆ ಎಂಬುದು ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT