ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಭಾರತದಲ್ಲಿ 1,500 ದಾಟಿದ ಪ್ರಕರಣಗಳ ಸಂಖ್ಯೆ, ಸಾವಿನ ಸಂಖ್ಯೆ 47

Last Updated 31 ಮಾರ್ಚ್ 2020, 17:31 IST
ಅಕ್ಷರ ಗಾತ್ರ

ನವದೆಹಲಿ:ಕೊರೊನಾ ಸೋಂಕು ನಿಯಂತ್ರಣಕ್ಕಾಗಿ 21 ದಿನಗಳ ಲಾಕ್‌ಡೌನ್‌ನ 7ನೇ ದಿನವಾದ ಮಂಗಳವಾರ ದೇಶದಲ್ಲಿ ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ1,500 ದಾಟಿದ್ದು ಸಾವಿನ ಸಂಖ್ಯೆ 47 ಆಗಿದೆ.ಅಸ್ಸಾಂನಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಮೊದಲ ಪ್ರಕರಣ ವರದಿಯಾಗಿದ್ದು, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಮಧ್ಯ ಪ್ರದೇಶದಲ್ಲಿ ಸಾವಿನ ಪ್ರಕರಣಗಳು ವರದಿಯಾಗಿವೆ. ಜಗತ್ತಿನಾದ್ಯಂತ 8,00,000 ಮಂದಿಗೆ ಸೋಂಕು ತಗುಲಿದ್ದು, ಸುಮಾರು 40,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಸ್ಪೇನ್‌ನಲ್ಲಿ 849 ಮಂದಿ ಸಾವಿಗೀಡಾಗಿದ್ದಾರೆ. ರಷ್ಯಾದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ತಜ್ಞ ವೈದರೊಬ್ಬರಿಗೆ ಸೋಂಕು ತಗುಲಿದೆ.

ಮಹಾರಾಷ್ಟ್ರದಲ್ಲಿನ ಕೋವಿಡ್ ಪ್ರಕರಣಗಳ ಅಂಕಿ ಅಂಶ
ಕೋವಿಡ್-19 ಪ್ರಕರಣಗಳ ಸಂಖ್ಯೆ- 302
ಚಿಕಿತ್ಸೆ ಪಡೆದು ಮನೆಗೆ ಹೋದವರು- 39
ಇಲ್ಲಿಯವರೆಗೆ ಸಾವಿನ ಸಂಖ್ಯೆ-10
ಇವತ್ತು ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ
ಮುಂಬೈ ಮೆಟ್ರೊಪಾಲಿಟನ್ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 150 ದಾಟಿದೆ

ಕೇರಳದಲ್ಲಿ 7 ಹೊಸ ಪ್ರಕರಣ
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸೋಂಕು ಮತ್ತಷ್ಟು ವ್ಯಾಪಿಸದಂತೆ ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ.ಮಂಗಳವಾರ ತಿರುವನಂತಪುರಂನಲ್ಲಿ ಕೋವಿಡ್ ಬಾಧಿತ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 2ಕ್ಕೇರಿದೆ.ಅದೇ ವೇಳೆ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 4 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಇವತ್ತುಇಬ್ಬರಿಗೆ ಸೋಂಕು ತಗುಲಿರುವುದಾಗಿ ದೃಢಪಟ್ಟಿದ್ದು, ಸೋಂಕು ತಗುಲಿರುವ 99 ಮಂದಿಗೆ ಜಿಲ್ಲೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.9 ಮಂದಿಗೆ ಇತರ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಯಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ಕಾರ್ಯ ಯೋಜನೆಯನ್ನು ರೂಪಿಸಿದ್ದಾರೆ. ಇದರ ಪ್ರಕಾರ ರೋಗ ಲಕ್ಷಣ ಕಂಡು ಬರುವ ವ್ಯಕ್ತಿಗಳನ್ನು ಪಂಚಾಯತ್‌ಗಳು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಬೇಕಿದೆ.ಕಾಸರಗೋಡಿನ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಕೊರೊನಾ ಸೋಂಕು ಚಿಕಿತ್ಸೆ ಸೌಲಭ್ಯ ಒದಗಿಸಲು ಐಸಿಎಂಆರ್ ಈಗಾಗಲೇ ಅನುಮತಿ ನೀಡಿದೆ.ಏತನ್ಮಧ್ಯೆ, ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿರುವ ಕೇರಳದ ಜನರ ಮಾಹಿತಿಗಳನ್ನು ಕಲೆ ಹಾಕುವುದಾಗಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮುಂಬೈನಲ್ಲಿ 59 ಮಂದಿಗೆ ಸೋಂಕು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 302ಕ್ಕೇರಿದೆ.

ಅಸ್ಸಾಂನಲ್ಲಿ ಮೊದಲ ಪ್ರಕರಣ
ಅಸ್ಸಾಂನಲ್ಲಿ 52ರ ಹರೆಯದ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇಲ್ಲಿ ವರದಿಯಾಗಿರುವ ಮೊದಲ ಪ್ರಕರಣ ಇದಾಗಿದೆ. ಸೋಂಕು ಬಾಧಿತ ವ್ಯಕ್ತಿ ಸಿಲಾಚರ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಸ್ಸಾಂ ಸಚಿವ ಹಿಮಾಂತ ಬಿಸ್ವ ಸರ್ಮಾ ಹೇಳಿದ್ದಾರೆ.

ಜಾರ್ಖಂಡ್‍ನಲ್ಲಿ ಮಹಿಳೆಯೊಬ್ಬರಿಗೆ ಕೋವಿಡ್-19 ರೋಗ ತಗುಲಿದ್ದು, ರಾಜ್ಯದಲ್ಲಿ ವರದಿಯಾದ ಮೊದಲ ಪ್ರಕರಣ ಇದಾಗಿದೆ.

ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ
ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ 441 ಮಂದಿಗೆ ಕೋವಿಡ್-19 ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪೈಕಿ 24 ಮಂದಿಗೆ ಕೋವಿಡ್ ರೋಗ ಇರುವುದಾಗಿ ದೃಢಪಟ್ಟಿದೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 6 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ಹರ್ಯಾಣದ ಪಂಚಕುಲಾದಲ್ಲಿ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಕೋವಿಡ್ 19 ರೋಗ ತಗುಲಿದ್ದು ಅವರನ್ನು ಐಸೋಲೇಷನ್‌ನಲ್ಲಿರಿಸಲಾಗಿದೆ ಎಂದು ಪಂಚಕುಲದ ಪ್ರಧಾನ ವೈದ್ಯಾಧಿಕಾರಿ ಹೇಳಿದ್ದಾರೆ. ಹರ್ಯಾಣದಲ್ಲಿ ಸೋಂಕಿತರ ಸಂಖ್ಯೆ 22 ಆಗಿದೆ.

ಗುಜರಾತಿನಲ್ಲಿ 3 ಹೊಸ ಪ್ರಕರಣಗಳು ವರದಿಯಾಗಿದ್ದು ಪ್ರಕರಣಗಳ ಸಂಖ್ಯೆ 73ಕ್ಕೆ ತಲುಪಿದೆ.

ಉತ್ತರ ಪ್ರದೇಶದ ಬರೇಲಿಯಲ್ಲಿ 5 ಮಂದಿಗೆ ಸೋಂಕು ತಗುಲಿರುವುದಾಗಿ ದೃಢಪಟ್ಟಿದ್ದು ಇಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 100 ದಾಟಿದೆ.

ಪಂಜಾಬ್‌ನಲ್ಲಿ ಕೊರೊನಾ ಬಾಧಿತ 65 ರ ಹರೆಯದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 4ಕ್ಕೇರಿದೆ.

ಆಂಧ್ರ ಪ್ರದೇಶದಲ್ಲಿ 40ಕ್ಕೆ ತಲುಪಿದೆ ಸೋಂಕಿತರ ಸಂಖ್ಯೆ
ಕಳೆದ ರಾತ್ರಿ ಆಂಧ್ರ ಪ್ರದೇಶದಲ್ಲಿ ಕೋವಿಡ್ ಸೋಂಕು ತಗುಲಿರುವ ಹೊಸ 17 ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆ 40ಕ್ಕೇರಿದೆ.

ಮಧ್ಯಪ್ರದೇಶದಲ್ಲಿ 66 ಮಂದಿಗ ಸೋಂಕು
ಇಂದೋರ್‌ನಲ್ಲಿ 17 ಹೊಸ ಪ್ರಕರಣಗಳು ವರದಿಯಾಗಿದ್ದು ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 66ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಜಗತ್ತಿನಲ್ಲಿ ಕೋವಿಡ್ ಪ್ರಕರಣಗಳು

185 ರಾಷ್ಟ್ರಗಳಲ್ಲಿ ಕೋವಿಡ್ ವ್ಯಾಪಿಸಿದ್ದು ಇಲ್ಲಿಯವರೆಗೆ 790,640 ಮಂದಿಗೆ ಸೋಂಕು ತಗುಲಿದೆ. ರೋಗ ಬಾಧಿಸಿ ಸಾವಿಗೀಡಾದವರ ಸಂಖ್ಯೆಯೂ ಏರಿಕೆಯಾಗಿದ್ದು ಇಲ್ಲಿಯವರೆಗೆ 38,464 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಯುರೋಪ್ ಖಂಡದಲ್ಲಿ 27,740 ಮಂದಿ ಸಾವಿಗೀಡಾಗಿದ್ದಾರೆ.

ನೆದರ್ಲೆಂಡ್‌ನಲ್ಲಿ ಕೋವಿಡ್ ರೋಗಕ್ಕೆ ಬಲಿಯಾದವರ ಸಂಖ್ಯೆ 175ರಿಂದ 1,039ಕ್ಕೇರಿದೆ. ಇರಾನ್‌ನಲ್ಲಿ ಮಂಗಳವಾರ 141 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ 2,898 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಇಟಲಿಯಲ್ಲಿ ಇಲ್ಲಿಯವರೆಗೆ 105,792 ಪ್ರಕರಣಗಳು ವರದಿಯಾಗಿದ್ದು, 12, 428 ಮಂದಿ ಸಾವಿಗೀಡಾಗಿದ್ದಾರೆ.ಅದೇ ವೇಳೆ ಸ್ಪೇನ್‌ನಲ್ಲಿ ಪ್ರಕರಣಗಳ ಸಂಖ್ಯೆ 94, 417 ಮತ್ತು ಸಾವಿನ ಸಂಖ್ಯೆ 8,269ಕ್ಕೆ ತಲುಪಿದೆ. ಅಮೆರಿಕದಲ್ಲಿ ಇಲ್ಲಿಯವರೆಗೆ 175,669 ಪ್ರಕರಣಗಳು ವರದಿಯಾಗಿದ್ದು 3,424 ಮಂದಿ ಸಾವಿಗೀಡಾಗಿದ್ದಾರೆ. ಚೀನಾದಲ್ಲಿ ಪ್ರಕರಣಗಳ ಸಂಖ್ಯೆ 81, 518 ಮತ್ತು ಸಾವಿನ ಸಂಖ್ಯೆ 3,305. ಫ್ರಾನ್ಸ್‌ನಲ್ಲಿ ಪ್ರಕರಣಗಳ ಸಂಖ್ಯೆ 44,550, ಸಾವಿನ ಸಂಖ್ಯೆ 3,024 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT