ಭಾನುವಾರ, ಏಪ್ರಿಲ್ 5, 2020
19 °C

ಕೊರೊನಾ ಕಳವಳ | ಭಾರತದಲ್ಲಿ ಮತ್ತೊಂದು ಪ್ರಕರಣ ದೃಢ: ಹಲವು ಮಂದಿಯ ಮೇಲೆ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಲಖನೌ: ಜಗತ್ತಿನಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್‌ ಸೋಂಕು (ಕೋವಿಡ್‌19) ಭಾರತದಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ಮಂಗಳವಾರ ದೃಢಪಟ್ಟಿದೆ. 

‘ಸೋಂಕಿನ ಒಂದು ಪ್ರಕರಣ ಜೈಪುರ ದಲ್ಲಿ ಪತ್ತೆಯಾಗಿದೆ. ರೋಗಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಆ ವ್ಯಕ್ತಿಯ ಗುರುತು ಬಹಿರಂಗ ಮಾಡಲಾಗಿಲ್ಲ. ಹಾಗಿದ್ದರೂ ಅವರು ಇಟಲಿಯ ಪ್ರವಾಸಿ ಎಂದು ಮೂಲಗಳು ಹೇಳಿವೆ.

ಈ ರೋಗಿಯ ಜತೆಗೆ ಇದ್ದ ಇಟಲಿಯ 21 ಪ್ರವಾಸಿಗರು ಮತ್ತು ಮೂವರು ಭಾರತೀಯರನ್ನು (ಬಸ್‌ ಚಾಲಕ, ನಿರ್ವಾಹಕ, ಗೈಡ್‌) ಪ್ರತ್ಯೇಕಿಸಲಾದ ನಿಗಾ ಕೇಂದ್ರದಲ್ಲಿ ಇರಿಸಲಾಗಿದೆ. 

ಆಗ್ರಾದ ಎರಡು ಕುಟುಂಬಗಳ ಆರು ಮಂದಿಯಲ್ಲಿ ಸೋಂಕಿನ ಶಂಕೆ ಉಂಟಾಗಿದೆ. ಅವರಿಗೆ ಕೊರೊನಾ ಸೋಂಕು ಇದೆ ಎಂದು ಲಖನೌನ ಪ್ರಯೋಗಾಲಯದ ವರದಿ ಹೇಳಿದೆ. ಅದನ್ನು ದೃಢಪಡಿಸುವುದಕ್ಕಾಗಿ ಮಾದರಿ ಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸೋಂಕು ದೃಢಪಟ್ಟಿದ್ದ ದೆಹಲಿಯ ವ್ಯಕ್ತಿಯ ಜತೆ ಈ ಆರು ಮಂದಿ ಸಂಪರ್ಕದಲ್ಲಿದ್ದರು. 

ಈ ಎರಡು ಕುಟುಂಬಗಳು ಮತ್ತು ಅವರ ಒಬ್ಬ ಸಂಬಂಧಿಕ ಇತ್ತೀಚೆಗೆ ಇಟಲಿಗೆ ಹೋಗಿದ್ದರು. ಫೆ. 25ರಂದು ಅವರು ಹಿಂದಿರುಗಿದ್ದರು. ವಿಯೆನ್ನಾ ದಿಂದ ಏರ್‌ ಇಂಡಿಯಾ ವಿಮಾನದಲ್ಲಿ ಬಂದಿದ್ದ ದೆಹಲಿ ನಿವಾಸಿಯೊಬ್ಬರು ಫೆ. 25ರಂದು ಆಗ್ರಾದ ಈ ಕುಟುಂಬಕ್ಕೆ ಔತಣಕೂಟ ಏರ್ಪಡಿಸಿದ್ದರು. ದೆಹಲಿಯ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ, ಆಗ್ರಾದ ಎರಡೂ ಕುಟುಂಬಗಳ ಆರು ವ್ಯಕ್ತಿಗಳಲ್ಲಿ ಸೋಂಕಿನ ಶಂಕೆ ವ್ಯಕ್ತವಾಗಿದೆ. 

ಈಗ, ವಿಯೆನ್ನಾದಿಂದ ಬಂದ ವಿಮಾನದ ಸಿಬ್ಬಂದಿ ಮತ್ತು ಔತಣಕೂಟ ನಡೆದ ಹೋಟೆಲ್‌ನ ಸಿಬ್ಬಂದಿಯ ಮೇಲೆಯೂ ನಿಗಾ ಇರಿಸಲಾಗಿದೆ.

ರಾಜ್ಯದಲ್ಲಿ ಕಟ್ಟೆಚ್ಚರ
ಬೆಂಗಳೂರು: ದುಬೈನಿಂದ ಬಂದಿದ್ದ ನಗರದ ಟೆಕಿಯೊಬ್ಬರಲ್ಲಿ ಕೋವಿಡ್‌ ವೈರಸ್‌ ಸೋಮವಾರ ಪತ್ತೆಯಾಗಿದ್ದು, ರಾಜ್ಯದಲ್ಲೂ ವಿಮಾನ ನಿಲ್ದಾಣಗಳು, ಬಸ್‌ ನಿಲ್ದಾಣಗಳು ಸೇರಿದಂತೆ ವಿವಿಧೆಡೆ ಕಟ್ಟೆಚ್ಚರ ವಹಿಸಲಾಗಿದೆ.

ದುಬೈನಿಂದ ಫೆ.20ಕ್ಕೆ ವಾಪಸಾದ ಅವರು ಎರಡು ದಿನ ಬೆಂಗಳೂರಿನಲ್ಲಿ ಉಳಿದು, ಫೆ.22ಕ್ಕೆ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಹೈದರಾಬಾದ್‌ಗೆ ಪ್ರಯಾಣಿಸಿದ್ದರು. ಆದ್ದರಿಂದ ಅವರು ಕೆಲಸ ಮಾಡುತ್ತಿದ್ದ ಕಂಪನಿಯ 25 ಸಿಬ್ಬಂದಿಯನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಮನೆಯಲ್ಲಿಯೇ 28 ದಿನಗಳ ಕಾಲ ಅವರ ಮೇಲೆ ನಿಗಾ ಇರಿಸಲಾಗುತ್ತದೆ. ಅವರು ಕೆಲಸ ಮಾಡಿದ ಕಂಪನಿಗೆ ಬೀಗ ಹಾಕಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ.

ಸಚಿವರಾದ ಬಿ.ಶ್ರೀರಾಮುಲು ಹಾಗೂ ಡಾ.ಕೆ.ಸುಧಾಕರ್ ಅವರು ಅಧಿಕಾರಿಗಳ ಜತೆಗೆ ಮಂಗಳವಾರ ಸಭೆ ನಡೆಸಿ, ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿದರು.

ಸೋಂಕು ನಿರ್ವಹಣೆಗಾಗಿ
* ಚೀನಾ, ಸಿಂಗಪುರ, ಹಾಂಗ್‌ಕಾಂಗ್‌, ಥಾಯ್ಲೆಂಡ್‌, ದಕ್ಷಿಣ ಕೊರಿಯಾ, ಜಪಾನ್‌, ಇಂಡೊನೇಷ್ಯಾ, ಮಲೇಷ್ಯಾ, ನೇಪಾಳ, ವಿಯೆಟ್ನಾಂ, ಇರಾನ್‌ ಮತ್ತು ಇಟಲಿಯಿಂದ ಬರುವವರ ಆರೋಗ್ಯ ತಪಾಸಣೆ ಕಡ್ಡಾಯ
* ಚೀನಾ ಸೇರಿ ಐದು ದೇಶಗಳ ಜನರಿಗೆ ನೀಡಲಾಗಿದ್ದ ವೀಸಾಗಳ ಮೇಲೆ ನಿಷೇಧ ಹೇರಲಾಗಿತ್ತು
* ಈಗ, ದಕ್ಷಿಣ ಕೊರಿಯಾ, ಜಪಾನ್‌, ಇರಾನ್‌ ಮತ್ತು ಇಟಲಿಯ ಜನರಿಗೆ ನೀಡಲಾಗಿರುವ ವೀಸಾ ಮೇಲೂ ನಿಷೇಧ ವಿಸ್ತರಣೆ

ಜಾಗತಿಕ ಮಟ್ಟದಲ್ಲಿ ಸೋಂಕು
89,527: 
ಸೋಂಕು ಪೀಡಿತರು
3,100: ಸತ್ತವರ ಸಂಖ್ಯೆ
67: ಸೋಂಕು ಪತ್ತೆಯಾದ ದೇಶಗಳು

ನೋಯ್ಡಾ ಶಾಲೆಯಲ್ಲಿ ಆತಂಕ
ನೋಯ್ಡಾದ ಎರಡು ಖಾಸಗಿ ಶಾಲೆಗಳಿಗೆ ಕೆಲ ದಿನಗಳವರೆಗೆ ರಜೆ ನೀಡಲು ನಿರ್ಧರಿಸಲಾಗಿದೆ. ಈ ಶಾಲೆಯ ಒಬ್ಬ ವಿದ್ಯಾರ್ಥಿಯ ತಂದೆಯಲ್ಲಿ ಸೋಂಕು ದೃಢಪಟ್ಟ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಆ ವ್ಯಕ್ತಿಯ ಕುಟುಂಬವನ್ನು ಪ್ರತ್ಯೇಕಿಸಿದ ನಿಗಾ ಕೇಂದ್ರದಲ್ಲಿ ಇರಿಸಲಾಗಿದೆ.

ಔಷಧ ರಫ್ತು ಬಂದ್‌
ಪ್ಯಾರಸೆಟಮಾಲ್‌, ವಿಟಮಿನ್‌ ಬಿ1, ಬಿ12 ಸೇರಿ 26 ಔಷಧಗಳು ಮತ್ತು ಔಷಧ ಸಾಧನಗಳ ರಫ್ತನ್ನು ನಿಷೇಧಿಸಲಾಗಿದೆ. 

ಭಾರತವು ಭಾರಿ ಪ್ರಮಾಣದಲ್ಲಿ ಔಷಧ ಮತ್ತು ಔಷಧ ಸಾಧನಗಳ ರಫ್ತು ನಡೆಸುತ್ತಿಲ್ಲ. ಹಾಗಿದ್ದರೂ, ಭಾರತದಲ್ಲಿ ಔಷಧ ಮತ್ತು ಔಷಧ ತಯಾರಿಸಲು ಬೇಕಾದ ಕಚ್ಚಾ ವಸ್ತು ಕೊರತೆ ಎದುರಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ಭಾರತವು ವಾರ್ಷಿಕ ಸುಮಾರು ₹ 26 ಸಾವಿರ ಕೋಟಿ ಮೌಲ್ಯದ ಔಷಧ ಮತ್ತು ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ಶೇ 70ರಷ್ಟು ಚೀನಾದಿಂದ ಆಮದಾಗುತ್ತಿದೆ.

ಆರ್ಥಿಕ ಪರಿಣಾಮಗಳಿಗೆ ಮಿತಿ ವಿಧಿಸಲು ಕ್ರಮ
ಲಂಡನ್‌: ‘ಕೋವಿಡ್‌–19’ ವೈರಸ್‌ನಿಂದ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಮಿತಿ ವಿಧಿಸಲು ವಿಶ್ವ ಸಮುದಾಯ ಸಂಘಟಿತ ಪ್ರಯತ್ನ ಆರಂಭಿಸಿದೆ.

ಹಣಕಾಸು ಮಾರುಕಟ್ಟೆಗೆ ನಗದು ನೆರವು, ಬಡ್ಡಿ ದರ ಕಡಿತದಂತಹ ಉತ್ತೇಜನಾ ಕ್ರಮಗಳನ್ನು ಕೈಗೊಳ್ಳುವುದಾಗಿ  ಅಮೆರಿಕ, ಜಪಾನ್‌ ಮತ್ತು ಯುರೋಪ್‌ನ ಕೇಂದ್ರೀಯ ಬ್ಯಾಂಕ್‌ಗಳು ಪ್ರಕಟಿಸಿವೆ.

ಆರ್‌ಬಿಐ ಕ್ರಮ (ಮುಂಬೈ ವರದಿ): ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಹಣಕಾಸು ಮಾರುಕಟ್ಟೆಯು ಸುಸೂತ್ರವಾಗಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ ತಿಳಿಸಿದೆ.

**

ಕೋವಿಡ್‌ ಸಂಬಂಧಿ ಸಿದ್ಧತೆಗಳನ್ನು ಪರಿಶೀಲಿಸಿದ್ದೇನೆ. ವಿದೇಶದಿಂದ ಬರುವವರ ತಪಾಸಣೆ, ಅಗತ್ಯ ಚಿಕಿತ್ಸೆ ನೀಡಿಕೆಯಲ್ಲಿ ವಿವಿಧ ಸಚಿವಾಲಯಗಳು ಮತ್ತು ರಾಜ್ಯಗಳು ಜತೆಗೆ ಕೆಲಸ ಮಾಡುತ್ತಿವೆ.
–ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು