ಭಾನುವಾರ, ಜನವರಿ 26, 2020
28 °C

ನಿರ್ಭಯಾ ಪ್ರಕರಣ: ಮರಣದಂಡನೆಯ ಪ್ರಸ್ತುತ ಸ್ಥಿತಿ ವರದಿ ಕೇಳಿದ ದೆಹಲಿ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ನಿಗದಿಯಾಗಿರುವ ಮರಣದಂಡನೆ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ನೀಡುವಂತೆ ತಿಹಾರ್‌ ಜೈಲು ಅಧಿಕಾರಿಗಳಿಗೆ ದೆಹಲಿ ಕೋರ್ಟ್‌ ಗುರುವಾರ ನಿರ್ದೇಶಿಸಿದೆ. 
 
ಅಪರಾಧಿಗಳ ಮರಣದಂಡನೆಯ ಸ್ಥಿತಿಗತಿ ಬಗ್ಗೆ ಶುಕ್ರವಾರ ಸಮಗ್ರ ವರದಿ ನೀಡುವಂತೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸತೀಶ್‌ ಕುಮಾರ್‌ ಅರೋರ ಅವರು ತಿಳಿಸಿದರು. 

ಈ ಹಿಂದೆ ನಿಗದಿಯಾಗಿದ್ದಂತೆ ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಕೇಶ್‌ ಸಿಂಗ್, ಪವನ್ ಗುಪ್ತ, ವಿನಯ್ ಶರ್ಮಾ ಮತ್ತು ಅಕ್ಷಯ್ ಸಿಂಗ್‌ ಅವರಿಗೆ ಜ.22ರ ಬೆಳಿಗ್ಗೆ 7 ಗಂಟೆಗೆ ಮರಣದಂಡನೆ ಜಾರಿ ಮಾಡಬೇಕಿತ್ತು.

ಆದರೆ, ಅಪರಾಧಿ ಮುಕೇಶ್ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಹಿಂದೆ ಘೋಷಿಸಿದ್ದಂತೆ ಜ 22ರಂದು ಮರಣದಂಡನೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರ ಬುಧವಾರ ಹೇಳಿತ್ತು.

ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ್ದ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಮೇ 2017ರಲ್ಲಿ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಈ ತೀರ್ಪಿನ ಮರುಪರಿಶೀಲನೆ ಕೋರಿ ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು (ಮರುಪರಿಶೀಲನಾ ಅರ್ಜಿ) ಸುಪ್ರೀಂ ಕೋರ್ಟ್‌ ಮಂಗಳವಾರವಷ್ಟೇ (ಜ.14) ವಜಾ ಮಾಡಿತ್ತು.

ಕ್ಯುರೇಟಿವ್ ಅರ್ಜಿ ವಜಾಗೊಂಡ ತಕ್ಷಣ ಅಪರಾಧಿ ಮುಕೇಶ್ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ‘ರಾಷ್ಟ್ರಪತಿಗಳು ಇನ್ನೂ ಅರ್ಜಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ನನಗೆ ಡೆತ್ ವಾರಂಟ್ ಜಾರಿ ಮಾಡುವಂತಿಲ್ಲ’ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರು ಜಾರಿ ಮಾಡಿದ್ದ ಡೆತ್ ವಾರಂಟ್ ಅನ್ನೂ ಮುಕೇಶ್ ಪ್ರಶ್ನಿಸಿದ್ದ.

ಮುಕೇಶ್‌ ಪರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ವಕೀಲರಾದ ವೃಂದಾ ಗ್ರೋವರ್, ಒಂದು ವೇಳೆ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದರೂ ನನ್ನ ಕಕ್ಷಿದಾರನಿಗೆ ಮರಣದಂಡನೆ ಜಾರಿಗೆ 14 ದಿನಗಳ ಕಾಲಾವಕಾಶ ಕೊಡಬೇಕು ಎಂದು ಕೋರಿದ್ದರು.

ನಿರ್ಭಯಾ ಅಪರಾಧಿ ಮುಕೇಶ್‌ ಸಲ್ಲಿಸಿರುವ ಕ್ಷಮಾಧಾನ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ದೆಹಲಿ ಲೆಫ್ಟಿನೆಂಟ್‌ ಗೌವರ್ನರ್‌, ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಡಿಸೆಂಬರ್ 2012ರಲ್ಲಿ ಐವರು ಪುರುಷರು ಮತ್ತು ಒಬ್ಬ ಬಾಲಾಪರಾಧಿ ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತೆಯು ನಂತರದ ದಿನಗಳಲ್ಲಿ ಮೃತಪಟ್ಟಿದ್ದಳು. ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಒಬ್ಬ ಆರೋಪಿಯು ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ, ಬಾಲಾಪರಾಧಿಯನ್ನು ಸುಧಾರಣಾ ಗೃಹಕ್ಕೆ ಕಳುಹಿಸಲಾಗಿತ್ತು. ನಂತರದ ದಿನಗಳಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು