ಶುಕ್ರವಾರ, ಫೆಬ್ರವರಿ 26, 2021
30 °C
ಗುಜರಾತ್‌ನ ಗೋಹತ್ಯೆ ನಿಷೇಧ ಕಠಿಣ ಕಾನೂನು ಪ್ರಕಾರ ತೀರ್ಪು

ಕರು ಕದ್ದು ಬಿರಿಯಾನಿ ಮಾಡಿದವನಿಗೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಎರಡು ವರ್ಷದ ಕರುವನ್ನು ಕೊಂದು ಮಗಳ ಮದುವೆಗೆ ಬಿರಿಯಾನಿ ಮಾಡಿ ಬಡಿಸಿದ ಗುಜರಾತ್‌ನ ದೋರಜಿ ಎಂಬಲ್ಲಿನ ಸಲೀಂ ಕದರ್‌ ಮಕ್ರಾನಿ ಎಂಬ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯವೊಂದು ಹತ್ತು ವರ್ಷ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. 

ಗುಜರಾತ್‌ನಲ್ಲಿ ಗೋಹತ್ಯೆ ಕಾನೂನಿಗೆ ಇತ್ತೀಚೆಗೆ ತಿದ್ದುಪಡಿ ಮಾಡಲಾಗಿದೆ. ಅದಾದ ಬಳಿಕ ಈ ಕಾಯ್ದೆಯ ಅಡಿಯಲ್ಲಿ ಶಿಕ್ಷೆಗೆ ಒಳಗಾದ ಮೊದಲವ್ಯಕ್ತಿ ಸಲೀಂ. 

‘ದೂರುದಾರರ ಎರಡು ವರ್ಷದ ಕರುವನ್ನು ಕದ್ದು ಅದನ್ನು ಸಲೀಂ ಕೊಂದಿದ್ದಾನೆ ಎಂಬುದು ಸಾಬೀತಾಗಿದೆ. ಕರುವನ್ನು ಕೊಲ್ಲುವುದು ಹಿಂದೂ ಧರ್ಮೀಯರ ಭಾವನೆಗಳಿಗೆ ನೋವು ಉಂಟು ಮಾಡುತ್ತದೆ. ದನಗಳು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಈ ಎಲ್ಲವನ್ನು ಗಮನದಲ್ಲಿ ಇರಿಸಿಕೊಂಡು ಗೋಹತ್ಯೆಯ ವಿರುದ್ಧ ಕಠಿಣವಾದ ಕಾನೂನನ್ನು ಸರ್ಕಾರ ಜಾರಿಗೆ ತಂದಿದೆ’ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಎಚ್‌.ಎ. ದವೆ ಹೇಳಿದ್ದಾರೆ. 

ಸಲೀಂ ಬಡವ. ಮಗಳ ಮದುವೆಗೆ ಬಂದ ಅತಿಥಿಗಳಿಗೆ ಆಹಾರ ಕೊಡಲು ಆತನ ಬಳಿ ಹಣ ಇರಲಿಲ್ಲ ಎಂಬುದನ್ನೂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ. 

ಸತಾರ್‌ ಆದಂ ಕೊಲಿಯಾ ಎಂಬವರು ಈ ಜನವರಿಯಲ್ಲಿ ಸಲೀಂ ವಿರುದ್ಧ ದೂರು ಸಲ್ಲಿಸಿದ್ದರು. ‘ದನ ಮತ್ತು ಕರುವನ್ನು ಮನೆಯ ಹಿಂಭಾಗದಲ್ಲಿದ್ದ ಮರಕ್ಕೆ ಹೆಂಡತಿ ಕಟ್ಟಿ ಹಾಕಿದ್ದಳು. ಕೆಲವೇ ಹೊತ್ತಿನಲ್ಲಿ ಕರು ಕಾಣೆಯಾಗಿತ್ತು. ಕರುವಿನ ದೇಹದ ಭಾಗಗಳು ಗ್ರಾಮದ ಸ್ಮಶಾನದ ಬಳಿ ಬಳಿಕ ದೊರೆತಿದ್ದವು. ವಿಚಾರಿಸಿದಾಗ ಸಲೀಂ ಮನೆಯಲ್ಲಿ ಮದುವೆ ಇದ್ದದ್ದು ತಿಳಿಯಿತು. ಆದರೆ, ತಾನು ಕರುವನ್ನು ಕದ್ದಿಲ್ಲ ಎಂದು ಸಲೀಂ ಆರಂಭದಲ್ಲಿ ವಾದಿಸಿದ್ದ. ಬಳಿಕ, ಕದ್ದದ್ದು ಹೌದೆಂದು ಒಪ್ಪಿಕೊಂಡ’ ಎಂದು ದೂರಿನಲ್ಲಿ ಸತಾರ್‌ ಆರೋಪಿಸಿದ್ದರು. 

ದೂರು ದಾಖಲಾದ ಬಳಿಕ, ಸ್ಮಶಾನದಲ್ಲಿ ಸಿಕ್ಕ ಕರುವಿನ ದೇಹದ ಭಾಗಗಳು ಮತ್ತು ಸಲೀಂ ಮನೆಯಿಂದ ಜಪ್ತಿ ಮಾಡಲಾದ ಬಿರಿಯಾನಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಲಾಗಿತ್ತು. ಸ್ಮಶಾನದಲ್ಲಿ ಸಿಕ್ಕ ದೇಹದ ಭಾಗಗಳು ಒಂದು ಕರುವಿನದ್ದು ಎಂಬುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. 

ಬಿರಿಯಾನಿಯಲ್ಲಿದ್ದ ಮಾಂಸ ಮತ್ತು ಸ್ಮಶಾನದಲ್ಲಿ ಸಿಕ್ಕ ದೇಹದ ಭಾಗಗಳು ಒಂದೇ ಕರುವಿನದ್ದು ಎಂದು ಹೇಳುವುದು ಕಷ್ಟ. ಯಾಕೆಂದರೆ, ಮಾಂಸವನ್ನು ಬೇಯಿಸಿದ್ದರಿಂದ ರಕ್ತದ ಮಾದರಿ ಹೊಂದಾಣಿಕೆ ಆಗಿಲ್ಲ ಎಂದು ತಜ್ಞರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಕರುವನ್ನು ಹೇಗೆ ಕದಿಯಲಾಗಿತ್ತು ಎಂಬುದನ್ನು ಸಾಬೀತುಪಡಿಸುವಲ್ಲಿ ಪೊಲೀಸರು ಸಫಲರಾಗಿಲ್ಲ ಎಂದು ಸಲೀಂ ಪರ ವಕೀಲರು ವಾದಿಸಿದ್ದರು. ಈ ವಾದವನ್ನು ನ್ಯಾಯಾಲಯ ಮಾನ್ಯ ಮಾಡಲಿಲ್ಲ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು