ಬುಧವಾರ, ಜೂಲೈ 8, 2020
27 °C

ಸಮೀಪಿಸುತ್ತಿದೆ ಅಂಫಾನ್ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ 3 ಲಕ್ಷ ಮಂದಿ ಸ್ಥಳಾಂತರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಈಚಿನ ವರ್ಷಗಳಲ್ಲಿ ಅತ್ಯಂತ ಕೆಟ್ಟ ಚಂಡಮಾರುತ ಎಂದು ಹೇಳಲಾದ ಅಂಫಾನ್ ಚಂಡಮಾರುತವು ಪಶ್ಚಿಮ ಬಂಗಾಳ ಕರಾವಳಿಯನ್ನು ಸಮೀಪಿಸುತ್ತಿದೆ. ನಿನ್ನೆಯಷ್ಟೇ ಅಂಫಾನ್ ಚಂಡಮಾರುತದ ಸ್ಥಿತಿಯನ್ನು 'ಸೂಪರ್‌ ಚಂಡಮಾರುತ'ದಿಂದ 'ಅತಿ ಗಂಭೀರ ಚಂಡಮಾರುತ' ಸ್ಥಿತಿಗೆ ಹವಾಮಾನ ಇಲಾಖೆ ಇಳಿಸಿತ್ತು.

ಚಂಡಮಾರುತದ ಮೋಡಗಳಿಂದಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಭಾರಿ ಮಳೆ ಆರಂಭವಾಗಿದ್ದು, ಬಿರುಗಾಳಿ ಬೀಸುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಚಂಡಮಾರುತವು ತೀರಕ್ಕೆ ಅಪ್ಪಳಿಸಿದಾಗ ಭಾರೀ ಹಾನಿ ಸಂಭವಿಸಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ನಡುವಣ ಪ್ರದೇಶದಲ್ಲಿ ಚಂಡಮಾರುತವು ತೀರವನ್ನು ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದೆ. ಈ ವೇಳೆ ಗಂಟೆಗೆ 185 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತದ ಮಾಹಿತಿ ಸಂಗ್ರಹ ವೈಜ್ಞಾನಿಕವಾಗಿ ಆರಂಭವಾದ ನಂತರ ಹಿಂದೂ ಮಹಾಸಾಗರದ ಈಶಾನ್ಯ ಭಾಗದಲ್ಲಿ ರೂಪುಗೊಂಡ ಮೊದಲ 'ಸೂಪರ್ ಸೈಕ್ಲೋನ್' ಇದು. ಬಂಗಾಳ ಕೊಲ್ಲಿಯಲ್ಲಿ ನೌಕಾಪಡೆಯು ಕಟ್ಟೆಚ್ಚರ ಸ್ಥಿತಿಯಲ್ಲಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಕೋವಿಡ್‌ ಸೋಂಕು ವ್ಯಾಪಕವಾಗಿ ಇರುವ ಸಂದರ್ಭದಲ್ಲೇ ಚಂಡಮಾರುತ ಬಂದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಶಿಬಿರಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆಯನ್ನು ನಿರ್ವಹಿಸಲು ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ. ಸುಮಾರು 10 ಲಕ್ಷ ಮಂದಿಯನ್ನು ಸ್ಥಳಾಂತರಿಸಲು ಒಡಿಶಾ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ಏನಿದು ಅಂಫಾನ್

ಅಂಫಾನ್ ಎಂಬ ಪದವು ಅಂ-ಪನ್ ಎಂಬ ಪದದಿಂದ ನಿಷ್ಪನ್ನಗೊಂಡಿದೆ. ಈ ಹೆಸರನ್ನು ಥಾಯ್ಲೆಂಡ್ 2004ರಲ್ಲಿ ನೀಡಿತು. ವಿಶಾಖಪಟ್ಟಣದಲ್ಲಿರುವ ಡಾಪ್ಲಾರ್ ಹವಾಮಾನ ರಾಡಾರ್ ಮೂಲಕ ಈ ಮಾರುತದ ಮೇಲೆ ನಿರಂತರ ನಿಗಾ ಇರಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.