ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಂಗೆ ಮತಾಂತರಗೊಳ್ಳಲು ದಲಿತರ ನಿರ್ಧಾರ

Last Updated 26 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚೆನ್ನೈ:ಕೊಯಮತ್ತೂರು ಬಳಿಯ ಮೆಟ್ಟುಪಾಳಯಂ ಸಮೀಪದ ನಡೂರ್‌ ಗ್ರಾಮದಲ್ಲಿ ದಲಿತ ಕುಟುಂಬಗಳನ್ನು ದೂರವಿಡುವ ಉದ್ದೇಶದಿಂದ ನಿರ್ಮಿಸಿದ್ದ ‘ಅಸ್ಪೃಶ್ಯ ಗೋಡೆ’ ಕುಸಿದು 17 ಮಂದಿ ದಲಿತರು ಮೃತಪಟ್ಟು ಒಂದು ತಿಂಗಳು ಸಮೀಪಿಸಿದರೂ ಕ್ರಮಕೈಗೊಳ್ಳುವಲ್ಲಿ ಸರ್ಕಾರ ನಿರಾಸಕ್ತಿ ತೋರಿಸಿದೆ ಎಂದು ಆರೋಪಿಸಿ, ಕ್ರಮಕ್ಕೆ ಹೋರಾಟ ಮಾಡಿದ್ದ ಸಂಘಟನೆಯ 100ಕ್ಕೂ ಹೆಚ್ಚು ಸದಸ್ಯರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದಾರೆ.

‘ಡಿಸೆಂಬರ್‌ 2 ರಂದು ಗೋಡೆ ಕುಸಿತ ನಡೆದಿತ್ತು. ಇದರಲ್ಲಿ ಮೃತಪಟ್ಟವರ ಸಂಬಂಧಿಕರು ಸೇರಿ 100 ಮಂದಿ ಮೊದಲ ಹಂತದಲ್ಲಿ ಜನವರಿ 5 ರಂದು ಇಸ್ಲಾಂಗೆ ಮತಾಂತರಗೊಳ್ಳಲಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಇವರೆಲ್ಲರೂ ಇಸ್ಲಾಂಗೆ ಸೇರಲು ಇಚ್ಛೆ ವ್ಯಕ್ತಪಡಿಸಿದ್ದರು’ ಎಂದು ತಮಿಳು ಪುಲಿಗಲ್‌ ಕಚ್ಚಿ (ಟಿಪಿಕೆ) ದಲಿತ ಸಂಘಟನೆಯ ವಕ್ತಾರ ಎಂ.ಮುತ್ತುಕುಮಾರ್‌ ಹೇಳಿದ್ದಾರೆ.

‘ಮತಾಂತರಗೊಳ್ಳುವ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಪೊಲೀಸರು ಜನರ ಮನವೊಲಿಸಲು ಮುಂದಾಗಿದ್ದಾರೆ. ಆದರೆ, ಕನಿಷ್ಠ 100 ಮಂದಿಯಾದರೂ ಇಸ್ಲಾಂಗೆ ಮತಾಂತರಗೊಳ್ಳಲಿದ್ದಾರೆ. ತಮ್ಮ ಸಮುದಾಯಕ್ಕೆ ಅಂಟಿಕೊಂಡಿರುವ ಕಳಂಕದಿಂದಾಗಿ ದಲಿತರು ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಮುಂದಾಗಿದ್ದಾರೆ’ ಎಂದು ಮುತ್ತುಕುಮಾರ್‌ ತಿಳಿಸಿದ್ದಾರೆ.

ನಡೂರ್‌ ಗ್ರಾಮದಲ್ಲಿ ಶಿವಸುಬ್ರಮಣಿಯನ್‌ ಎಂಬುವರು ದಲಿತರನ್ನು ದೂರವಿಡುವ ಉದ್ದೇಶದಿಂದಲೇ 15 ಅಡಿ ಎತ್ತರದ ಗೋಡೆ ನಿರ್ಮಿಸಿದ್ದರು. ಈ ಗೋಡೆ ಕುಸಿದಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿ 17 ಮಂದಿ ಮೃತಪಟ್ಟಿದ್ದರು. ಶಿವಸುಬ್ರಮಣಿಯನ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿತ್ತು. ಈಗ ಅವರಿಗೆ ಮದ್ರಾಸ್‌ ಹೈಕೋರ್ಟ್‌ ಜಾಮೀನು ನೀಡಿದೆ. ಆದರೆ, ಈ ಘಟನೆ ಖಂಡಿಸಿ ಹೋರಾಟ ನಡೆಸಿದ್ದ ಟಿಪಿಕೆ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದು, ಇನ್ನೂ ಬಿಡುಗಡೆ ಮಾಡಿಲ್ಲ.

‘ಮತಾಂತರಗೊಳ್ಳುವಂತೆ ಯಾರನ್ನೂ ಒತ್ತಾಯಿಸಿಲ್ಲ. ಅವರೇ ಸ್ವಇಚ್ಛೆಯಿಂದ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂವಿಧಾನದಲ್ಲೂ ಇದಕ್ಕೆ ಅವಕಾಶ ಇದೆ. ಬಲವಂತದಿಂದ ಮತಾಂತರ ಮಾಡಿದರೆ ತಪ್ಪು’ ಎಂದು ಟಿಪಿಕೆ ಪ್ರಧಾನ ಕಾರ್ಯದರ್ಶಿ ಎಂ. ಇಳವೆನಿಲ್‌ ಹೇಳಿದ್ದಾರೆ.

‘ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಬೇಕು. ಆದರೆ, ಈ ಅಡಿಯಲ್ಲಿ ಪ್ರಕರಣ ದಾಖಲಾಗದಿದ್ದರೆ ದಲಿತರಾಗಿಯೇ ನಾವೇಕೆ ಮುಂದುವರಿಯಬೇಕು’ ಎಂದು ಮುತ್ತುಕುಮಾರ್‌ ಪ್ರಶ್ನಿಸುತ್ತಾರೆ.

‘ಈ ಘಟನೆ ಕುರಿತು ಎಸ್‌ಸಿ/ಎಸ್‌ಟಿ ರಾಷ್ಟ್ರೀಯ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು. ದಲಿತರ ಈ ನಿರ್ಧಾರವನ್ನು ಎಐಎಡಿಎಂಕೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ದಲಿತರ ಹಿತಾಸಕ್ತಿ ಕಾಪಾಡುವಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆದರೆ, ಸರ್ಕಾರವು ಬಹಿರಂಗವಾಗಿಯೇ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ’ ಎಂದು ಸಂಸದ ಡಿ.ರವಿಕುಮಾರ್‌ ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT