ಭಾನುವಾರ, ಜನವರಿ 19, 2020
20 °C
ದೆಹಲಿ ಹೊರವಲಯದಲ್ಲಿ ಸಂಭವಿಸಿದ ಬೆಂಕಿ ಅವಘಡ

ಹಸುಳೆ ಸೇರಿ 9 ಮಂದಿ ಸಾವು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ದೆಹಲಿ ಹೊರವಲಯದ ಕಿರಾರಿ ಪ್ರದೇಶದಲ್ಲಿ ಮೂರು ಅಂತಸ್ತಿನ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಆರು ತಿಂಗಳಿನ ಮಗು ಸಹಿತ ಮೂವರು ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಎಂಟು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ. ಬೆಳಗಿನ ಜಾವ 3.50ಕ್ಕೆ ಬೆಂಕಿ ಹತೋಟಿಗೆ ಬಂದಿದೆ. ಈ ಕಟ್ಟಡದ ನೆಲಮಾಳಿಗೆಯ ಗೋದಾಮಿನಲ್ಲಿದ್ದ ₹20 ಲಕ್ಷ ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿವೆ. ಕಟ್ಟಡದಲ್ಲಿ ಬೆಂಕಿ ನಂದಿಸಲು ಯಾವುದೇ ಸುರಕ್ಷತಾ ಸಾಧನಗಳಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಟ್ಟಡದ ಮಾಲೀಕ ರಾಮ್‌ ಚಂದ್ರ ಝಾ (65), ಸುದರಿಯಾ ದೇವಿ (58), ಸಂಜು ಝಾ (36), ಗುಡ್ಡನ್‌, ಉದಯ ಚೌಧರಿ (33) ಹಾಗೂ ಅವರ ಪತ್ನಿ ಮುಸ್ಕಾನ್‌ (26), ಅವರ ಮಕ್ಕಳಾದ ಅಂಜಲಿ (10), ಆದರ್ಶ (7), ಆರು ತಿಂಗಳಿನ ಮಗು ತುಳಸಿ ಮೃತಪಟ್ಟವರು.

ಈ ಅವಘಡದಲ್ಲಿ ಮೂವರನ್ನು ರಕ್ಷಿಸಲಾಗಿದೆ. ಪೂಜಾ (24) ಅವರ ಪುತ್ರಿಯರಾದ ಸೌಮ್ಯಾ (10) ಹಾಗೂ ಮೂರು ವರ್ಷದ ಆರಾಧ್ಯ ಅವರು ಪಕ್ಕದ ಕಟ್ಟಡಕ್ಕೆ ಜಿಗಿದಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ತಿಂಗಳು ದೆಹಲಿಯ ಅನಾಜ್‌ ಮಂಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 43 ಮಂದಿ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ. ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ತನಿಖೆಯಿಂದ ನಿಖರವಾದ ಕಾರಣ ಗೊತ್ತಾಗಲಿದೆ. ಎರಡನೇ ಮಹಡಿಯಲ್ಲಿ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು