ಗುರುವಾರ , ಜುಲೈ 16, 2020
24 °C
ಬಿಸಿಗಾಳಿಗೆ ತತ್ತರಿಸಿದ ಉತ್ತರ ಭಾರತ

ದೆಹಲಿಯಲ್ಲಿ 47 ಡಿಗ್ರಿ ಸೆಲ್ಸಿಯಸ್‌ ತಾಪಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ಜನರು ತತ್ತರಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೇ ತಿಂಗಳ ಅತ್ಯಧಿಕ ತಾಪಮಾನವು 18 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಿದೆ.

ದೆಹಲಿಯ ಪಾಲಂ‌ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ವಾರದಿಂದ 42ರಿಂದ 46 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದ್ದ ತಾಪಮಾನ, ಬುಧವಾರ 47.6ಡಿಗ್ರಿ ಸೆಲ್ಸಿಯಸ್‌ ತಲುಪಿದೆ. 2002ರ ಮೇ ಅಂತ್ಯದಲ್ಲಿ ಇಷ್ಟು ಪ್ರಮಾಣದ ಗರಿಷ್ಠ ತಾಪಮಾನ ದಾಖಲಾಗಿತ್ತು.

ಕಡು ಬೇಸಿಗೆಯ ತಾಪದಿಂದಾಗಿ ಸಾರ್ವಜನಿಕರು ಮನೆಗಳಿಂದ ಹೊರ ಬರುವುದಕ್ಕೇ ಆಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಸಂಕಷ್ಟಕ್ಕೆ ಈಡುಮಾಡಿದೆ.

ರಾಜಸ್ಥಾನದ ಕೆಲವೆಡೆ ಬುಧವಾರದಂದು ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್‌ ಕಂಡುಬಂದಿದ್ದರೆ, ಉತ್ತರ ಪ್ರದೇಶ, ಪಂಜಾಬ್‌, ಹರಿಯಾಣ, ರಾಜಸ್ಥಾನದ ಉತ್ತರ ಭಾಗ, ಮಧ್ಯಪ್ರದೇಶ, ಗುಜರಾತ್‌, ವಿದರ್ಭ, ಛತ್ತೀಸ್‌ಗಢ, ಬಿಹಾರ ರಾಜ್ಯಗಳಲ್ಲೂ ಬಿಸಿ ಗಾಳಿ ಬೀಸುತ್ತಿದೆ.

ಬಿಸಿ ಗಾಳಿ ಬೀಸುತ್ತಿರುವುದರಿಂದ ಜನರು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಮನೆಗಳಿಂದ ಹೊರಬರಬಾರದು ಎಂದು ಎಚ್ಚರಿಸಿರುವ ಭಾರತೀಯ ಹವಾಮಾನ ಇಲಾಖೆ, ಮುಂದಿನ ಶನಿವಾರ ಮತ್ತು ಭಾನುವಾರದಂದು ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಬಿಸಿಲಿನ ತಾಪ ಕಡಿಮೆ ಆಗಲಿದೆ. ಮತ್ತೆ ಜೂನ್‌ನಲ್ಲಿ ಯಥಾ ರೀತಿ ಬಿಸಿಲು ಹೆಚ್ಚಲಿದೆ ಎಂದು ಹೇಳಿದೆ.

ಕೊರೊನಾ ಸೋಂಕು ತಡೆಯಲು ಘೋಷಿಸಲಾಗಿದ್ದ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರಿಂದ ಹರ್ಷಚಿತ್ತರರಾಗಿ, ಮನೆಗಳಿಂದ ಹೊರಹೋಗಿ ಮತ್ತೆ ಕೆಲಸ– ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದುಕೊಂಡಿದ್ದ ಜನತೆಗೆ ಬಿಸಿಲಿನ ತಾಪ ಆಸ್ಪದ ನೀಡದಂತೆ ತಡೆದಿದೆ.

ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕೊರೊನಾ ಸೋಂಕು ಪೀಡಿತ ಬಡವರು ಹಾಗೂ ಲಾಕ್‌ಡೌನ್‌ನಿಂದಾಗಿ ರಾಜ್ಯ ಸರ್ಕಾರ ಆರಂಭಿಸಿರುವ ಆಶ್ರಯ ತಾಣಗಳಲ್ಲಿ ಆಸರೆ ಪಡೆದಿರುವ ವಲಸೆ ಕಾರ್ಮಿಕರು ಬಿಸಿಲಿನ ತಾಪದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು