ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘ ಪರಿವಾರಕ್ಕೆ ಅಯೋಧ್ಯೆಯೇ ಆದ್ಯತೆ

ಮಂದಿರ ವಿವಾದ ಆದ್ಯತೆ ಅಲ್ಲ ಎಂದು ಸುಪ್ರೀಂ: ಸುಗ್ರೀವಾಜ್ಞೆಗೆ ಹೆಚ್ಚಿದ ಒತ್ತಡ
Last Updated 29 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಒತ್ತಾಯ ಈಗ ಇನ್ನಷ್ಟು ಗಟ್ಟಿಯಾಗಿದೆ. ಸುಗ್ರೀವಾಜ್ಞೆ ಹೊರಡಿಸುವಂತೆ ಬಿಜೆಪಿ, ಸಂಘ ಪರಿವಾರದ ಹಲವು ಮುಖಂಡರು ಆಗ್ರಹಿಸಿದ್ದಾರೆ. ಈ ಆಗ್ರಹದಂತೆ ಸುಗ್ರೀವಾಜ್ಞೆ ಹೊರಡಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ಪಕ್ಷ ಸವಾಲೆಸೆದಿದೆ.

ಅಯೋಧ್ಯೆಯ ರಾಮಮಂದಿರ–ಬಾಬರಿ ಮಸೀದಿ ನಿವೇಶನ ವಿವಾದವು ತನ್ನ ಆದ್ಯತೆ ಅಲ್ಲ. 2019ರ ಜನವರಿ ಮೊದಲ ವಾರದಲ್ಲಿ ಸೂಕ್ತ ಪೀಠವು ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ಇದರೊಂದಿಗೆ ಅಯೋಧ್ಯೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

‘ನಮಗೆ ನಮ್ಮದೇ ಆದ ಆದ್ಯತೆಗಳಿವೆ. ವಿಚಾರಣೆ ಯಾವಾಗ ಆರಂಭಿಸಬೇಕು ಎಂಬುದನ್ನು ಜನವರಿಯಲ್ಲಿ ರಚಿಸಲಾಗುವ ಪೀಠವು ನಿರ್ಧರಿಸಲಿದೆ. ವಿಚಾರಣೆಯು ಜನವರಿ, ಮಾರ್ಚ್‌ ಅಥವಾ ಏಪ್ರಿಲ್‌ ಯಾವಾಗ ಆರಂಭ ಆಗಬಹುದು ಎಂಬುದು ನಮಗೆ ಗೊತ್ತಿಲ್ಲ’ ಎಂದು ಪೀಠವು ಸ್ಪಷ್ಟವಾಗಿ ಹೇಳಿದೆ.

ಅಯೋಧ್ಯೆ ವಿವಾದವನ್ನು ಮತಬ್ಯಾಂಕ್‌ ರಾಜಕಾರಣಕ್ಕೆ ತಳಕು ಹಾಕಬಾರದು ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆಯಾದರೂ ಅಯೋಧ್ಯೆ ವಿಚಾರ ತೀವ್ರ ರಾಜಕೀಯ ಲೆಕ್ಕಾಚಾರ ಮತ್ತು ಕಾನೂನು ಚರ್ಚೆಗೆ ವೇದಿಕೆಒದಗಿಸಿದೆ.

‘ಕಾಂಗ್ರೆಸ್‌ ಒತ್ತಡದಿಂದಾಗಿಯೇ ವಿಚಾರಣೆಯನ್ನು ವಿಳಂಬಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಕಪಿಲ್‌ ಸಿಬಲ್‌ ಮತ್ತು ಪ‍್ರಶಾಂತ್‌ ಭೂಷಣ್‌ ಅಂಥವರ ಒತ್ತಡ ಇದರ ಹಿಂದೆ ಕೆಲಸ ಮಾಡಿದೆ. ರಾಮ ಭಕ್ತರು ಇನ್ನೆಷ್ಟು ದಿನ ಕಾಯಬೇಕು? 2019ರಲ್ಲಿ ಕಾಂಗ್ರೆಸ್‌ಗೆ ಈ ವಿಚಾರ ಗೊತ್ತಾಗಲಿದೆ’ ಎಂದು ಬಿಜೆಪಿ ಮುಖಂಡ ವಿನಯ ಕಟಿಯಾರ್‌ ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್‌ನ ಆದ್ಯತೆ ಯಾವುದು ಎಂಬುದು ಆಶ್ಚರ್ಯ ಹುಟ್ಟಿಸಿದೆ. ರಾಮ ಮಂದಿರ ಬೇಗನೆ ನಿರ್ಮಾಣವಾಗಬೇಕು.
ಅದಕ್ಕೆ ಬೇಕಾದ ದಾರಿಯನ್ನು ಕೇಂದ್ರ ಸರ್ಕಾರ ಹುಡುಕಿಕೊಳ್ಳಬೇಕು’ಎಂದು ಬಿಜೆಪಿಯ ಸಂಜೀವಬಲ್ಯಾನ್‌ ಒತ್ತಾಯಿಸಿದ್ದಾರೆ. ರಾಮ ಮಂದಿರವು ಧರ್ಮ ಮತ್ತು ನಂಬಿಕೆಗೆ ಸಂಬಂಧಿಸಿದ ವಿಚಾರ. ಹಾಗಾಗಿ ಸುಗ್ರೀವಾಜ್ಞೆಯ ಮೂಲಕ ಮಂದಿರ ನಿರ್ಮಾಣವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಬಿಜೆಪಿಯ ಮಿತ್ರ ಪಕ್ಷ ಶಿವಸೇನಾದ ಮುಖಂಡ ಸಂಜಯ ರಾವುತ್‌ಹೇಳಿದ್ದಾರೆ.

ಪ್ರತಿ ಐದು ವರ್ಷಕ್ಕೆ ಒಮ್ಮೆ ಚುನಾವಣೆಗೆ ಮೊದಲು ಈ ವಿಚಾರವನ್ನು ಕೋಮು ಧ್ರುವೀಕರಣಕ್ಕೆ ಬಳಸಿಕೊಳ್ಳಲು ಬಿಜೆಪಿ ಪ್ರಯತ್ನಿಸುವುದು ಹೊಸದೇನೂ ಅಲ್ಲ ಎಂದು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

ಆತ್ಮಗೌರವ ಉಳಿಸಿಕೊಳ್ಳಲು ಮತ್ತು ಒಗ್ಗಟ್ಟು ಹಾಗೂ ವಿಶ್ವಾಸದ ವಾತಾವರಣಕ್ಕಾಗಿ ಕಾನೂನು ರೂಪಿಸಿ ರಾಮ ಮಂದಿರ ನಿರ್ಮಿಸುವುದು ಅಗತ್ಯ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಈ ತಿಂಗಳ ಆರಂಭದಲ್ಲಿಹೇಳಿದ್ದರು.

*ಅಯೋಧ್ಯೆ ನಿವೇಶನ ವಿವಾದದ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ 2010ರಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ

*ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದು 1994ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಎತ್ತಿ ಹಿಡಿದಿದೆ

*ಅಯೋಧ್ಯೆ ನಿವೇಶನ ವಿವಾದವನ್ನು ಪುರಾವೆಗಳ ಆಧಾರದಲ್ಲಿಯೇ ತೀರ್ಮಾನಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹೇಳಿದೆ

*ಮುಂದಿನ ಲೋಕಸಭಾ ಚುನಾವಣೆಗೆ ಮೊದಲು ಅಯೋಧ್ಯೆ ವಿವಾದ ತೀರ್ಮಾನ ಆಗದು ಎಂಬ ಸುಳಿವನ್ನು ಸುಪ್ರೀಂ ಕೋರ್ಟ್‌ನ ಸೋಮವಾರದ ನಿರ್ಧಾರ ಕೊಟ್ಟಿದೆ

*ಡಿಸೆಂಬರ್‌ ಎರಡನೇ ವಾರದಲ್ಲಿ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೇ ಕಾನೂನು ರೂಪಿಸಬೇಕು ಎಂದು ಸಂಘ ಪರಿವಾರದ ಸಂಘಟನೆಗಳು ಒತ್ತಾಯಿಸುತ್ತಿವೆ

‘ಕಾಯುತ್ತಲೇ ಇರಲಾಗದು’

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಿಂದೂಗಳು ಕಾಯುತ್ತಲೇ ಇರಲಾಗದು ಎಂಬ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ನಿಲುವನ್ನು ಸುಪ್ರೀಂ ಕೋರ್ಟ್‌ನ ನಿರ್ಧಾರ ಮತ್ತಷ್ಟು ಗಟ್ಟಿ ಗೊಳಿಸಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸರ್ಕಾರವು ಕಾನೂನು ತರಬೇಕು ಎಂದು ವಿಎಚ್‌ಪಿಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಅರ್ಜಿದಾರರು ಕಾಯಲು ಸಿದ್ಧ

ಅಯೋಧ್ಯೆ ವಿವಾದದಲ್ಲಿ ಮೇಲ್ಮನವಿ ಸಲ್ಲಿಸಿರುವ ಮುಖ್ಯ ಅರ್ಜಿದಾರರಾದ ನಿರ್ಮೋಹಿ ಅಖಾಡದ ಪ್ರತಿನಿಧಿ ಮಹಾಂತ ದಿನೇಂದ್ರ ದಾಸ,ರಾಮ ಲಲ್ಲಾ ವಿರಾಜಮಾನ್‌ ಪ್ರತಿನಿಧಿ ತ್ರಿಲೋಕಿನಾಥ ಪಾಂಡೆ ಮತ್ತು ಸುನ್ನಿ ವಕ್ಫ್‌ ಮಂಡಳಿಯ ಪ್ರತಿನಿಧಿ ಇಕ್ಬಾಲ್‌ ಅನ್ಸಾರಿ ಅವರು ನ್ಯಾಯಾಲಯದ ತೀರ್ಪಿಗೆ ಕಾಯಲು ಸಿದ್ಧ ಎಂದು ಹೇಳಿದ್ದಾರೆ.

ಅಯೋಧ್ಯೆಯ ನಿವೇಶನವು ನಿರ್ಮೋಹಿ ಅಖಾಡಕ್ಕೆ ಸೇರಿದ್ದು. ಹಾಗಾಗಿ ಈ ವಿಚಾರದಲ್ಲಿ ಸರ್ಕಾರವು ಕಾನೂನು ರೂಪಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೂರಕ್ಕೂ ಹೆಚ್ಚು ವರ್ಷದಿಂದ ಕಾಯ್ದಿದ್ದೇವೆ. ತೀರ್ಪು ಬರುವವರೆಗೆ ಕಾಯುತ್ತೇವೆ ಎಂದು ಪಾಂಡೆ ತಿಳಿಸಿದ್ದಾರೆ. ಆದರೆ, ಮಂದಿರ ನಿರ್ಮಾಣಕ್ಕೆ ಕಾನೂನು ರೂ‍ಪಿಸುವುದಕ್ಕೆ ತಮ್ಮ ಬೆಂಬಲ ಇದೆ ಎಂದಿದ್ದಾರೆ.

‘ಕಾನೂನು ರೂಪಿಸಬೇಕು ಎಂಬ ಬೇಡಿಕೆ ರಾಜಕೀಯ ತಂತ್ರ. ಪ್ರತಿ ಬಾರಿ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷವೊಂದು ಈ ವಿಚಾರವನ್ನು ಕೆದಕುತ್ತದೆ’ ಎಂದು ಅನ್ಸಾರಿ ಹೇಳಿದ್ದಾರೆ.

ಸುಗ್ರೀವಾಜ್ಞೆಗೆ ಸಮರ್ಥನೆಯೇ ಇಲ್ಲ

ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗ ಅದಕ್ಕೆ ಸಂಬಂಧಿಸಿ ಕಾನೂನು ಅಥವಾ ಸುಗ್ರೀವಾಜ್ಞೆ ತರುವುದು ವ್ಯಾಪಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಇಂತಹ ಕ್ರಮವನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ನ್ಯಾಯಾಲಯವು ತೀರ್ಪು ನೀಡುವ
ವರೆಗೆ ಕಾಯಲೇಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಹೇಳಿದ್ದಾರೆ.

ಸುಗ್ರೀವಾಜ್ಞೆ ತರಬೇಕು ಎಂಬ ವಾದವನ್ನು ಏಷ್ಯನ್‌ ಡೆವಲಪ್‌ಮೆಂಟ್ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ನ ಸ್ಥಾಪಕ ಸದಸ್ಯ ಶೈಬಾಲ್‌ ಗುಪ್ತಾ ಕೂಡ ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪು ಬರುವವರೆಗೆ ಈ ವಿಚಾರದಲ್ಲಿ ಏನನ್ನೂ ಮಾಡಬಾರದು ಎಂಬುದು ಅವರ ಅಭಿಪ್ರಾಯ. ನ್ಯಾಯಾಲಯದ ತೀರ್ಪಿಗೆ ನ್ಯಾಯಸಮ್ಮತತೆ ಇರುತ್ತದೆ. ಬಹುಮತ ಒಂದನ್ನೇ ಮಾನದಂಡವಾಗಿ ಇರಿಸಿಕೊಂಡು ತೀರ್ಮಾನ ತೆಗೆದುಕೊಳ್ಳಬಾರದು ಎಂದು ಅವರು ಹೇಳುತ್ತಾರೆ.

*ಯಾವುದಾದರೂ ವಿಚಾರಕ್ಕೆ ಪ್ರಧಾನಿ ಪ್ರತಿಕ್ರಿಯೆ ನೀಡುತ್ತಾರೆ ಎಂದಾದರೆ ಸುಗ್ರೀವಾಜ್ಞೆಗಾಗಿ ಇಡುವ ಬೇಡಿಕೆಗೂ ಪ್ರಧಾನಿಯೇ ಪ್ರತಿಕ್ರಿಯೆ ನೀಡಬೇಕು

–ಪಿ.ಚಿದಂಬರಂ, ಕಾಂಗ್ರೆಸ್‌ ಮುಖಂಡ

*ಅವರಿಗೆ ಧೈರ್ಯ ಇದ್ದರೆ ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ತರಲಿ. ಸುಗ್ರೀವಾಜ್ಞೆ ತರುತ್ತೇವೆ ಎಂದು ಅವರು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ತರುವುದಕ್ಕೆ ಅವರಿಗೆ ಏನು ಸಮಸ್ಯೆ?

–ಅಸಾದುದ್ದೀನ್‌ ಒವೈಸಿ, ಎಐಎಂಐಎಂ ನಾಯಕ

*ಅಯೋಧ್ಯೆ ವಿಚಾರವನ್ನು ನ್ಯಾಯಾಲಯವು ಬೇಗನೆ ತೀರ್ಮಾನಿಸುವುದಿಲ್ಲ ಎಂಬುದು ಆರ್‌ಎಸ್‌ಎಸ್‌ ನಿಲುವು. ಹಾಗಾಗಿ ರಾಮ ಮಂದಿರ ನಿರ್ಮಾಣ ಸಾಧ್ಯವಾಗುವಂತೆ ಕೇಂದ್ರ ಸರ್ಕಾರವು ಕಾನೂನು ರೂಪಿಸಬೇಕು

–ಅರುಣ್‌ ಕುಮಾರ್‌, ಆರ್‌ಎಸ್‌ಎಸ್‌ ಪ್ರಚಾರ ವಿಭಾಗದ ಉಸ್ತುವಾರಿ

*ಅಯೋಧ್ಯೆ ವಿಚಾರದಲ್ಲಿ ಕಾನೂನು ಅಥವಾ ಸುಗ್ರೀವಾಜ್ಞೆ ತರುವುದು ಅಸಾಂವಿಧಾನಿಕ ಮತ್ತು ಅಧಿಕಾರ ವಿಭಜನೆ ತತ್ವದ ಉಲ್ಲಂಘನೆ

–ವಿಕಾಸ್‌ ಸಿಂಗ್‌, ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT