ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒಗೆ ವಿಜ್ಞಾನಿಗಳ ನೇಮಕ: ಪ್ರಸ್ತಾಪ ನಿರ್ಲಕ್ಷ್ಯಿಸಿದ ಕೇಂದ್ರ ಸರ್ಕಾರ

Last Updated 16 ಫೆಬ್ರುವರಿ 2020, 22:17 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಪ್ರಮುಖ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಂಶೋಧನಾ ಕಾರ್ಯ ಕೈಗೊಳ್ಳಲು ಮಾನವ ಸಂಪನ್ಮೂಲದ ಕೊರತೆ ಎದುರಿಸುತ್ತಿದೆ.

ಹೊಸದಾಗಿ 436 ವಿಜ್ಞಾನಿಗಳನ್ನು ನೇಮಿಸಲು ಕೋರಿದ್ದ ಪ್ರಸ್ತಾವ 16 ತಿಂಗಳಿನಿಂದಲೂ ಕೇಂದ್ರ ಸರ್ಕಾರದ ಮುಂದಿದೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಡಿಆರ್‌ಡಿಒ ವ್ಯಾಪ್ತಿಯಲ್ಲಿ 52 ಪ್ರಯೋಗಾಲಯಗಳಿವೆ. ಹೊಸ ಕ್ಷಿಪಣಿಗಳು, ದೂರನಿಯಂತ್ರಿತ ದಾಳಿಗೆ ನೆರವಾಗುವ ಡ್ರೋನ್‌ ಅಭಿವೃದ್ಧಿ ಸೇರಿ ವಿವಿಧ ಹೊಣೆಯನ್ನು ಕೇಂದ್ರ ನೀಡಿದೆ. ಆದರೆ, ಅಗತ್ಯ ಮಾನವಸಂಪನ್ಮೂಲ ಒದಗಿಸಲು ಮುಂದಾಗಿಲ್ಲ.

ಡಿಆರ್‌ಡಿಒದಲ್ಲಿ ವಿಜ್ಞಾನಿಗಳ ಸದ್ಯ ಮಂಜೂರಾದ ಹುದ್ದೆಗಳ ಸಂಖ್ಯೆ 7,353. ಹಾಲಿ ಇರುವ ವಿಜ್ಞಾನಿಗಳು 7,107. ಸದ್ಯ ಒಪ್ಪಿರುವ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಲಭ್ಯವಿರುವ ವಿಜ್ಞಾನಿಗಳ ಬಲ ಸಾಕು.

ಇದರ ಹೊರತಾಗಿ ಡಿಆರ್‌ಡಿಒ ಯೋಜನಾ ಮಂಡಳಿ 2010ರ ಏಪ್ರಿಲ್‌ನಲ್ಲಿ ಹೆಚ್ಚುವರಿಯಾಗಿ 4,966 ವಿಜ್ಞಾನಿಗಳ ನೇಮಕಕ್ಕೆ ಪ್ರಸ್ತಾವ ಕಳುಹಿಸಿತ್ತು. ಕೇಂದ್ರದ ಹಣಕಾಸು ಸಚಿವಾಲಯ ಈ ಸಂಖ್ಯೆಯನ್ನು 1,316ಕ್ಕೆ ಇಳಿಸಿತ್ತು. ವೆಚ್ಚ ನಿರ್ವಹಣೆಯ ಇಲಾಖೆಯು ಸಂಖ್ಯೆಯನ್ನು 436 ವಿಜ್ಞಾನಿಗಳನ್ನು ನೇಮಿಸಬಹುದು ಎಂದು ಸಮ್ಮತಿಸಿತು. ಇದನ್ನು ಕೇಂದ್ರದ ಸಮ್ಮತಿಗೆ ಕಳುಹಿಸಲಾಗಿದೆ. ಭದ್ರತೆ ಕುರಿತ ಸಂಪುಟ ಸಮಿತಿ ಎದುರು ಈ ಪ್ರಸ್ತಾಪ ಇನ್ನೂ ಚರ್ಚೆಗೇ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಡಿಆರ್‌ಡಿಒ ವಕ್ತಾರರು ಪ್ರತಿಕ್ರಿಯೆಗೆ ಸಿಗಲಿಲ್ಲ. 9ನೇ ಯೋಜನಾ ಅವಧಿಯಿಂದ (₹13,866 ಕೋಟಿ), 13ನೇ ಯೋಜನಾ ಅವಧಿಯವರೆಗೂ (₹ 90,000 ಕೋಟಿ) ಯೋಜನಾ ಅಂದಾಜು ಆರು ಪಟ್ಟು ಹೆಚ್ಚಾದರೂ, ಸಿಬ್ಬಂದಿ ಗಾತ್ರ ಬದಲಾವಣೆಯಾಗಿಲ್ಲ ಎಂದೂ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT