ಗುರುವಾರ , ಮೇ 19, 2022
24 °C
ರಾಜ್ಯದಲ್ಲಿ ಮತ್ತೆ ಹಿಡಿತ ಸಾಧನೆಗೆ ಕಾಂಗ್ರೆಸ್‌ ಶತಪ್ರಯತ್ನ * ಎರಡೂ ಪಕ್ಷಗಳಿಂದ ಪ್ರಬಲ ಪೈಪೋಟಿ ನಿರೀಕ್ಷೆ

ಬಿಜೆಪಿಗೆ ರಾಜಸ್ಥಾನ ಉಳಿಸಿಕೊಳ್ಳುವ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ: ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಮೇಲುಗೈ ಸಾಧಿಸಲು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಈ ಬಾರಿ ಸಾಕಷ್ಟು ಬೆವರು ಸುರಿಸಿವೆ. ಕಳೆದೊಂದು ವಾರದಲ್ಲಿ ಎರಡೂ ಪಕ್ಷಗಳ ಘಟಾನುಘಟಿಗಳು ರಾಜ್ಯಕ್ಕೆ ಬಂದು ಪ್ರಚಾರ ನಡೆಸಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 25 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಈ ಬಾರಿ ಎಲ್ಲ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಸವಾಲಾಗಿದ್ದರೆ, ರಾಜ್ಯದಲ್ಲಿ ಮತ್ತೆ ತನ್ನ ಶಕ್ತಿಯನ್ನು ವರ್ಧಿಸಿಕೊಳ್ಳುವುದು ಕಾಂಗ್ರೆಸ್‌ ಮುಂದಿರುವ ಸವಾಲಾಗಿದೆ.

ರಾಜ್ಯದ 12 ಕ್ಷೇತ್ರಗಳಲ್ಲಿ ಸೋಮವಾರ ಚುನಾವಣೆ ನಡೆಯಲಿದ್ದು, ಕೇಂದ್ರ ಸಚಿವ ರಾಜ್ಯವರ್ಧನ ರಾಥೋಡ್‌, ಕಾಂಗ್ರೆಸ್‌ನ ಶಾಸಕಿ, ಒಲಿಂಪಿಕ್‌ ಕ್ರೀಡಾಪಟು ಕೃಷ್ಣಾ ಪೂನಿಯಾ (ಇಬ್ಬರೂ ಜೈಪುರ ಗ್ರಾಮೀಣ ಕ್ಷೇತ್ರ), ಕೇಂದ್ರ ಸಚಿವ ಅರ್ಜುನ್‌ರಾಂ ಮೇಘವಾಲ್‌ (ಬಿಕನೇರ್‌) ಅವರು ಕಣದಲ್ಲಿರುವ ಪ್ರಮುಖರು. ಮೇಘವಾಲ್‌ ಅವರು ಇಲ್ಲಿ ಅವರ ಸಂಬಂಧಿಯೇ ಆಗಿರುವ ಮದನಗೋಪಾಲ್‌ ಮೇಘವಾಲ್‌ ಅವರನ್ನು ಎದುರಿಸುತ್ತಿದ್ದಾರೆ. ಒಟ್ಟಾರೆ 134 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜೈಪುರ, ಕರೌಲಿ, ಸಿಕ್ರ ಹಾಗೂ ಬಿಕನೇರ್‌ಗಳಲ್ಲಿ ಪ್ರಚಾರ ರ್‍ಯಾಲಿಗಳನ್ನು ನಡೆಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಗೃಹಸಚಿವ ರಾಜನಾಥ್‌ ಸಿಂಗ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೂ ಇಲ್ಲಿ ಪ್ರಚಾರ ರ್‍ಯಾಲಿಗಳನ್ನು ನಡೆಸಿದ್ದಾರೆ.

ಬಿಜೆಪಿಯು ರಾಷ್ಟ್ರೀಯತೆ, ಬಾಲಾಕೋಟ್‌ ದಾಳಿ, ಉಗ್ರ ಮಸೂದ್‌ ಅಜರ್‌ನನ್ನು ವಿಶ್ವ ಸಂಸ್ಥೆಯು ಜಾಗತಿಕ ಉಗ್ರ ಎಂದು ಘೋಷಿಸಿರುವುದೇ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದೆ. ಕಾಂಗ್ರೆಸ್‌, ತಾನು ಇತ್ತೀಚೆಗೆ ಘೋಷಿಸಿರುವ ಬಡವರಿಗೆ ಆದಾಯ ಖಾತರಿ ನೀಡುವ  ‘ನ್ಯಾಯ್‌’ ಯೋಜನೆಯನ್ನು ನೆಚ್ಚಿಕೊಂಡಿದೆ.

ರಾಹುಲ್‌ ಗಾಂಧಿ ಅವರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೊಟ್‌ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಚಿನ್‌ ಪೈಲಟ್‌ ಜೊತೆಗೂಡಿ ರಾಜ್ಯದ ವಿವಿಧೆಡೆ ರ್‍ಯಾಲಿಗಳನ್ನು ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು