ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಒಳಹೊರಗೆ ಚುನಾವಣಾ ಬಾಂಡ್‌ ಪ್ರತಿಧ್ವನಿ

ರಾಜ್ಯಸಭೆಯಲ್ಲಿ ಚರ್ಚೆಗೆ ಆಗ್ರಹ l ಸ್ಪೀಕರ್ ವಿರುದ್ಧ ವಾಗ್ದಾಳಿ l ಯೋಜನೆಯ ಸಮಗ್ರ ಮಾಹಿತಿಗಾಗಿ ಒತ್ತಾಯ
Last Updated 22 ನವೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ:ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಗದ್ದಲವು ಸಂಸತ್ತಿನ ಒಳಗೆ ಮತ್ತು ಹೊರಗೆ ಶುಕ್ರವಾರ ಪ್ರತಿಧ್ವನಿಸಿದೆ. ಚುನಾವಣಾ ಬಾಂಡ್‌ ಯೋಜನೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಪನೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಚುನಾವಣಾ ಬಾಂಡ್‌ ಮೂಲಕ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಲಾಗಿದೆ ಎಂದು ಆಪಾದಿಸಲಾಗಿದೆ.

ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ. ಚುನಾವಣಾ ಬಾಂಡ್‌ ‘ಪ್ರಜಾಪ್ರಭುತ್ವಕ್ಕೆ ಬೆದರಿಕೆ’ ಎಂದು ಈ ಪಕ್ಷಗಳು ಆರೋಪಿಸಿವೆ.

‘ಬಾಂಡ್‌ ವಿಚಾರವಾಗಿ ಚರ್ಚೆ ನಡೆಯಬೇಕು, ಸರ್ಕಾರ ಸಮಗ್ರ ಮಾಹಿತಿಯನ್ನು ಒದಗಿಸಬೇಕು’ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧಪಕ್ಷಗಳು ಒತ್ತಾಯಿಸಿದವು. ಆದರೆ ಸಭಾಪತಿ ವೆಂಕಯ್ಯ ನಾಯ್ಡು ಅವರು ಚರ್ಚೆಗೆ ಅವಕಾಶ ನೀಡಲಿಲ್ಲ.

ಬಾಂಡ್‌ ಅತ್ಯಂತ ಪ್ರಮುಖ ವಿಚಾರ. ಉಳಿದೆಲ್ಲಾ ವಿಚಾರಗಳನ್ನು ಬದಿಗಿಟ್ಟು ಮೊದಲು ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕು ಎಂದು ವಿರೋಧಪಕ್ಷಗಳು ನಿಯಮ 267ರ ಅಡಿಯಲ್ಲಿ ನೋಟಿಸ್‌ಗಳನ್ನು ನೀಡಿದ್ದವು. ಆದರೆ ಸಭಾಪತಿ ಅವನ್ನು ಮಾನ್ಯ ಮಾಡಲಿಲ್ಲ.

‘ಬಾಂಡ್‌ ವಿಚಾರವಾಗಿ ಚರ್ಚೆ ನಡೆಯಬೇಕು ಎಂಬುದು ನನಗೆ ಮನವರಿಕೆಯಾಗಿದೆ. ಆದರೆ ಇತರ ವಿಚಾರಗಳನ್ನು ಬದಿಗಿಟ್ಟು ಈ ಬಗ್ಗೆಯೇ ಚರ್ಚೆ ನಡೆಸಬೇಕಾದಷ್ಟು ಪ್ರಮುಖ ವಿಚಾರ ಅದು ಎಂದು ನನಗನ್ನಿಸುವುದಿಲ್ಲ. ನಿಯಮ 267ರ ಅಡಿ ಅನೇಕ
ಸದಸ್ಯರು ನೋಟಿಸ್‌ಗಳನ್ನು ನೀಡುತ್ತಲೇ ಇರುತ್ತಾರೆ. ಅವುಗಳನ್ನೆಲ್ಲಾ ಪರಿಗಣಿಸಿದರೆ ಸದನದಲ್ಲಿ ನಿಯಮಪ್ರಕಾರ ಕಲಾಪ ನಡೆಸಲು ಸಾಧ್ಯವಾಗಲಾರದು. ಆದ್ದರಿಂದ ಬೇರೆ ಯಾವುದಾದರೂ ನಿಯಮದಡಿ ಸದಸ್ಯರು ಚರ್ಚೆಗೆ ಅವಕಾಶ ಕೋರಬಹುದು’ ಎಂದರು.

’ದೇಶದ್ರೋಹಿ ಸಂಸ್ಥೆಯಿಂದ ಬಿಜೆಪಿಗೆ ದೇಣಿಗೆ‘

‘ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಸಂಸ್ಥೆಯೊಂದರಿಂದ ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ ₹ 10 ಕೋಟಿ ಸಂದಾಯವಾಗಿದೆ’ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದ್ದು, ಇದರ ಆಧಾರದಲ್ಲಿ ವಿರೋಧ ಪಕ್ಷಗಳು ಬಿಜೆಪಿ ಮೇಲೆ ವಾಗ್ದಾಳಿ ಆರಂಭಿಸಿವೆ.

ಆರ್‌ಕೆಡಬ್ಲ್ಯು ಡೆಲವಪರ್ಸ್‌ ಎಂಬ ಕಂಪನಿಯಿಂದ 2014–15ರಲ್ಲಿ ₹10 ಕೋಟಿ ದೇಣಿಗೆ ಪಡೆದಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕಪತ್ರದಲ್ಲಿ ಬಿಜೆಪಿ ಹೇಳಿದೆ. 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟದ ಆರೋಪಿ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸಹಚರ ಇಕ್ಬಾಲ್‌ ಮೆಮನ್‌ನಿಂದ ಆಸ್ತಿ ಖರೀದಿಸಿದ ಕಾರಣಕ್ಕೆ ಈ ಕಂಪನಿಯು ವಿಚಾರಣೆ ಎದುರಿಸುತ್ತಿದೆ ಎಂದುಆನ್‌ಲೈನ್‌ ಸುದ್ದಿ ಪೋರ್ಟಲ್‌ ‘ದಿ ವೈರ್‌’ ಹೇಳಿದೆ.

ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ, ‘ಇದು ದೇಶದ್ರೋಹದ ಕೃತ್ಯ. ದಾವೂದ್‌ನ ಸಹಾಯಕನಿಂದ ಆಸ್ತಿ ಖರೀದಿಸಿರುವ ಸಂಸ್ಥೆಯಿಂದ ದೇಣಿಗೆ ಸಂಗ್ರಹಿಸಿದ್ದು ದೇಶದ್ರೋಹವಲ್ಲವೇ ಅಮಿತ್‌ ಶಾ? ಭಯೋತ್ಪಾದನೆ ಜೊತೆ ನಂಟು ಹೊಂದಿದ ಸಂಸ್ಥೆಗಳಿಂದ ಬಿಜೆಪಿ ಹಣ ಪಡೆದಿದ್ದೇಕೆ ಎಂಬುದನ್ನು ಪ್ರಧಾನಿ, ಗೃಹಸಚಿವರು ಜನರಿಗೆ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ನಾಯಕರ ಪ್ರತಿಕ್ರಿಯೆ

ಚುನಾವಣಾ ಬಾಂಡ್‌ಗಳೆಂದರೆ ಕಾನೂನುಬದ್ಧವಾದ ರಾಜಕೀಯ ಭ್ರಷ್ಟಾಚಾರ. ಶಾಸಕ, ಸಂಸದರ ಖರೀದಿಗೆ ಈ ಹಣ ಬಳಕೆಯಾಗುತ್ತಿದೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಅವಧಿ ಮುಗಿದ ಬಾಂಡ್‌ಗಳನ್ನು ನಗದೀಕರಿಸಿ ಎಂದು ಸರ್ಕಾರವು ಎಸ್‌ಬಿಐಗೆ ಆದೇಶ ನೀಡಿದೆ ಎಂದು ಮಾಧ್ಯಮಗಳು ಹೇಳುತ್ತಿವೆ ಎಂದುಕಾಂಗ್ರೆಸ್‌ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT