7
ತುರ್ತುಪರಿಸ್ಥಿತಿಯ 43ನೇ ವಾರ್ಷಿಕ ದಿನದಂದು ಕೇಂದ್ರ ಸಚಿವ ಜೇಟ್ಲಿ ಆರೋಪ

‘ಹಿಟ್ಲರ್‌ಗಿಂತ ಇಂದಿರಾ ಒಂದು ಹೆಜ್ಜೆ ಮುಂದೆ’

Published:
Updated:

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ಗೆ ಹೋಲಿಸಿರುವ ಕೇಂದ್ರ ಸಚಿವ ಅರುಣ್‌ ಜೇಟ್ಲಿ, ಈ ಇಬ್ಬರೂ ಪ್ರಜಾಪ್ರಭುತ್ವವನ್ನು ನಿರಂಕುಶಾಧಿಕಾರವನ್ನಾಗಿ ಪರಿವರ್ತಿಸಿದರು ಎಂದಿದ್ದಾರೆ. 

ತುರ್ತುಪರಿಸ್ಥಿತಿಯ ವಾರ್ಷಿಕ ದಿನದಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಜೇಟ್ಲಿ ಅವರು ಈ ಟೀಕೆಗೆ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಧ್ವನಿಗೂಡಿಸಿದ್ದಾರೆ. 

‘ದಿ ಎಮರ್ಜೆನ್ಸಿ ರಿವಿಸಿಟೆಡ್‌’ ಎಂಬ ಶೀರ್ಷಿಕೆಯಲ್ಲಿ ಮೂರು ಲೇಖನಗಳ ಸರಣಿಯ ಎರಡನೇ ಲೇಖನವನ್ನು ಜೇಟ್ಲಿ ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಹಿಟ್ಲರ್‌ಗಿಂತಲೂ ಒಂದು ಹೆಜ್ಜೆ ಮುಂದೆ ಹೋದ ಇಂದಿರಾ, ಭಾರತವನ್ನು ‘ವಂಶಾಡಳಿತದ ಪ್ರಜಾಪ್ರಭುತ್ವ’ವನ್ನಾಗಿ ಬದಲಾಯಿಸಿದರು ಎಂದು ಜೇಟ್ಲಿ ಟೀಕಿಸಿದ್ದಾರೆ. 

ನಾಲ್ಕು ದಶಕಗಳ ಹಿಂದೆ 1975ರ ಜೂನ್‌ 25ರಂದು ದೇಶದ ಮೇಲೆ ಹೇರಲಾದ ತುರ್ತುಸ್ಥಿತಿಗೆ 1933ರಲ್ಲಿ ನಾಝಿ ಜರ್ಮನಿಯಲ್ಲಿ ಏನಾಯಿತೋ ಅದು ಸ್ಫೂರ್ತಿಯೇ ಎಂದು ಅವರು ಪ್ರಶ್ನಿಸಿದ್ದಾರೆ. 

ಹಿಟ್ಲರ್‌ ಮಾಡದ ಹಲವು ಕೃತ್ಯಗಳನ್ನು ಇಂದಿರಾ ಎಸಗಿದ್ದಾರೆ. ಅವರು ಸಂಸತ್ತಿನ ಕಲಾಪವನ್ನು ಮಾಧ್ಯಮದಲ್ಲಿ ಪ್ರಕಟಿಸುವುದನ್ನು ನಿಷೇಧಿಸಿದರು. ಭಾರತ ಮತ್ತು ಜರ್ಮನಿಯಲ್ಲಿ ಹೇರಲಾಗಿದ್ದ ಮಾಧ್ಯಮ ನಿರ್ಬಂಧ ಒಂದೇ ರೀತಿಯದ್ದಾಗಿತ್ತು. ಒಂದೇ ಪಕ್ಷದ ವ್ಯವಸ್ಥೆ ಎರಡೂ ಕಡೆ ಅಸ್ತಿತ್ವದಲ್ಲಿತ್ತು ಎಂದು ಜೇಟ್ಲಿ ವಿವರಿಸಿದ್ದಾರೆ. 

‘ಹಿಟ್ಲರ್‌ 25 ಅಂಶಗಳ ಆರ್ಥಿಕ ಕಾರ್ಯಕ್ರಮವನ್ನು ಘೋಷಿಸಿದ್ದರು. ಇಂದಿರಾ ಅವರು 20 ಅಂಶಗಳ ಕಾರ್ಯಕ್ರಮ ಘೋಷಿಸಿದರು. ಕೊರತೆಯನ್ನು ನೀಗಿಸುವುದಕ್ಕಾಗಿ ಸಂಜಯ ಗಾಂಧಿ ಅವರು ಐದು ಅಂಶಗಳ ಮತ್ತೊಂದು ಕಾರ್ಯಕ್ರಮ ಪ್ರಕಟಿಸಿದರು. ಭಿನ್ನಮತ ಆಗ ಪಾಪವಾಗಿತ್ತು ಮತ್ತು ಭಟ್ಟಂಗಿತನವೇ ವ್ಯವಸ್ಥೆಯಾಗಿತ್ತು’ ಎಂದು ಜೇಟ್ಲಿ ಹೇಳಿದ್ದಾರೆ. 

ತನ್ನ ಎಲ್ಲ ಕ್ರಮಗಳು ಸಂವಿಧಾನದ ವ್ಯಾಪ್ತಿಯ ಒಳಗೇ ಇವೆ ಎಂದು ಹಿಟ್ಲರ್‌ ಹೇಳಿಕೊಳ್ಳುತ್ತಿದ್ದ. ಇಂದಿರಾ ಅವರೂ ಸಂವಿಧಾನದ 352ನೇ ವಿಧಿ ಅಡಿಯಲ್ಲಿ ತುರ್ತು ಸ್ಥಿತಿ ಹೇರಿದರು, 359ನೇ ವಿಧಿ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದರು ಮತ್ತು ದೇಶದಲ್ಲಿ ವಿರೋಧ ಪಕ್ಷಗಳು ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಹೇಳಿದ್ದರು ಎಂದು ಜೇಟ್ಲಿ ಬರೆದಿದ್ದಾರೆ. 

ಕಾನೂನುಬಾಹಿರವಾದ ಯಾವುದೇ ಆದೇಶವನ್ನು ಪಾಲಿಸದಂತೆ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಿದ್ದರು. ಹಾಗಾಗಿ, ಭಾರತವು ‘ಶಿಸ್ತಿನ ಪ್ರಜಾತಂತ್ರ’ವಾಯಿತು ಎಂದಿದ್ದಾರೆ.  

ಬಹುಮತಕ್ಕಾಗಿ ಸಂಸದರ ಬಂಧನ

‘ಹಿಟ್ಲರ್‌ನ ರೀತಿಯಲ್ಲಿಯೇ ಇಂದಿರಾ ಅವರೂ ಸಂಸದರನ್ನು ಬಂಧಿಸಿದ್ದರು. ಅವರ ಗೈರುಹಾಜರಿಯಿಂದಾಗಿ ಸದನದಲ್ಲಿ ಮೂರನೇ ಎರಡರಷ್ಟು ಬೆಂಬಲ ಪಡೆದರು. ಸಂವಿಧಾನ ತಿದ್ದುಪಡಿ ಮೂಲಕ ಅಪಾಯಕಾರಿ ಅಂಶಗಳನ್ನು ಹೊಂದಿದ್ದ ಹಲವು ಕಾನೂನುಗಳನ್ನು ಜಾರಿಗೆ ತಂದರು. 

‘ಸಂವಿಧಾನಕ್ಕೆ ಮಾಡಿದ 42ನೇ ತಿದ್ದುಪಡಿಯು ಹೈಕೋರ್ಟ್‌ಗಳ ಅಧಿಕಾರವನ್ನು ದುರ್ಬಲಗೊಳಿಸಿತು. ಹೈಕೋರ್ಟ್‌ಗಳ ಈ ಅಧಿಕಾರವೇ ಭಾರತದ ಸಂವಿಧಾನದ ಆತ್ಮ ಎಂದು ಅಂಬೇಡ್ಕರ್‌ ಹೇಳಿದ್ದರು. 368ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಸಂವಿಧಾನ ತಿದ್ದುಪಡಿಯನ್ನು ನ್ಯಾಯಾಂಗದ ಪರಿಶೀಲನೆಯಿಂದ ಹೊರಗೆ ಇರಿಸಿದರು’ ಎಂದು ಜೇಟ್ಲಿ ಬರೆದುಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !