ಸೋಮವಾರ, ಫೆಬ್ರವರಿ 17, 2020
17 °C

Explainer | ‘ಶತ್ರು’ ಸೊತ್ತು ಮಾರಾಟಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಷೇರು ಮಾರಾಟದಿಂದ ಲಕ್ಷಾಂತರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರವು ತನ್ನ ಸ್ವಾಧೀನದಲ್ಲಿರುವ ‘ಶತ್ರುವಿನ ಸೊತ್ತು’ಗಳನ್ನು ಮಾರಾಟ ಮಾಡುವ ಮೂಲಕ ಕನಿಷ್ಠ ಒಂದು ಲಕ್ಷ ಕೋಟಿ ರೂಪಾಯಿ ಸಂಗ್ರಹಿಸುವ ಯೋಜನೆಯನ್ನೂ ರೂಪಿಸಿದೆ. ಇದಕ್ಕೆ ಅನುವಾಗುವಂತೆ 1968ರ ಶತ್ರುವಿನ ಸೊತ್ತು ಕಾಯ್ದೆಗೆ 2016ರಲ್ಲಿ ತಿದ್ದುಪಡಿ ಮಾಡಲಾಗಿದೆ. ಕೇಂದ್ರದ ಗೃಹ ಸಚಿವಾಲಯ ಈ ಕುರಿತು ಎರಡು ಸಮಿತಿಗಳನ್ನು ರಚಿಸಿದೆ

ಯಾವುದು ಶತ್ರುವಿನ ಸೊತ್ತು?

ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಭಾರತವು ಒಟ್ಟು ಮೂರು ಯುದ್ಧಗಳನ್ನು ನಡೆಸಿದೆ. ಯುದ್ಧ ನಡೆದ ನಂತರ ಭಾರತದಲ್ಲಿದ್ದ ಅನೇಕ ಮಂದಿ ತಮ್ಮ ಆಸ್ತಿಗಳನ್ನು ಬಿಟ್ಟು ಈ ಎರಡರಲ್ಲಿ ಒಂದು ರಾಷ್ಟ್ರಕ್ಕೆ ವಲಸೆ ಹೋಗಿದ್ದರು. ಅಂಥವರಿಗೆ ಸೇರಿದ್ದ ಭಾರತದಲ್ಲಿರುವ ಸೊತ್ತನ್ನು ‘ಶತ್ರುವಿನ ಸೊತ್ತು’ (Enemy Property) ಎಂದು ಪರಿಗಣಿಸಲಾಗುತ್ತದೆ.

1968ರಲ್ಲಿ ಭಾರತದಲ್ಲಿ ಇಂಥ ಒಂದು ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಕಾಯ್ದೆಯ ಪ್ರಕಾರ, ಹೀಗೆ ದೇಶಬಿಟ್ಟು ಹೋದವರನ್ನು ಶತ್ರುಗಳು ಎಂದು ಪರಿಗಣಿಸಲಾಗಿದ್ದು, ಅವರ ಆಸ್ತಿಯ ಮೇಲೆ ಅವರ ಕುಟುಂಬದವರಿಗೂ ಹಕ್ಕು ಇರುವುದಿಲ್ಲ. ಬದಲಿಗೆ ಅದು ಸರ್ಕಾರದ ಸ್ವಾಧೀನಕ್ಕೆ ಹೋಗುತ್ತದೆ.

1962ರಲ್ಲಿ ಚೀನಾ– ಭಾರತ ಯುದ್ಧ ಆರಂಭವಾಗುತ್ತಿದ್ದಂತೆಯೇ ಒಂದು ನಿಯಮಾವಳಿಯನ್ನು ರೂಪಿಸಿ, ಭಾರತದಲ್ಲಿದ್ದ, ಚೀನೀ ಪ್ರಜೆಗಳಿಗೆ ಸೇರಿದ್ದ ಎಲ್ಲಾ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. 1965ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧ ಆರಂಭವಾದಾಗಲೂ ಇಂಥದ್ದೇ ಕ್ರಮವನ್ನು ಕೈಗೊಳ್ಳಲಾಯಿತು. ಯುದ್ಧವಾದ ನಂತರ ಆ ನಿಯಮಾವಳಿಗಳನ್ನು ರದ್ದುಪಡಿಸಲಾಗಿತ್ತು.

1968ರಲ್ಲಿ ಇಂಥ ಆಸ್ತಿಗಳನ್ನು ಕುರಿತ ಸ್ಪಷ್ಟ ಕಾಯ್ದೆಯನ್ನು ರೂಪಿಸಲಾಯಿತು. ಅದರ ಪ್ರಕಾರ, ಭಾರತದ ಮೇಲೆ ದಾಳಿ ನಡೆಸುವ, ‘ಶತ್ರುರಾಷ್ಟ್ರ’ ಎಂದು ಸರ್ಕಾರವು ಪರಿಗಣಿಸಿದ ದೇಶದ ಪ್ರಜೆಗಳಿಗೆ ಸೇರಿದ, ಸೊತ್ತುಗಳನ್ನೆಲ್ಲಾ ‘ಶತ್ರುವಿನ ಸೊತ್ತು’ ಎಂದು ಪರಿಗಣಿಸಲಾಯಿತು. ಇದು ಜಮೀನಿಗೆ ಮಾತ್ರ ಸೀಮಿತವಾಗಿಲ್ಲ. ಶತ್ರು ಎನಿಸಿಕೊಂಡವರು ವಿವಿಧ ಕಂಪನಿಗಳಲ್ಲಿ ಹೊಂದಿರುವ ಷೇರುಗಳು, ಅವರಿಗೆ ಸೇರಿದ್ದ ಆಭರಣ ಮತ್ತಿತರ ಸೊತ್ತುಗಳಿಗೂ ಅನ್ವಯವಾಗುತ್ತದೆ.

ಆರಂಭ ಯಾವಾಗ?

ಶತ್ರು ರಾಷ್ಟ್ರಕ್ಕೆ ಸೇರಿದ ಪ್ರಜೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕುವ ಪದ್ಧತಿ ಆರಂಭವಾದದ್ದು ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ. ತಮ್ಮ ನೆಲವನ್ನು ಶತ್ರುಗಳು ಬಳಸುವುದನ್ನು ತಡೆಯಲು ಮೊದಲ ಮತ್ತು ಎರಡನೇ ಮಹಾಯುದ್ಧದ ಸಂದರ್ಭಗಳಲ್ಲಿ ಅನೇಕ ರಾಷ್ಟ್ರಗಳು ಇಂಥ ಕ್ರಮ ಕೈಗೊಂಡಿದ್ದವು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್‌, ಯುದ್ಧದಲ್ಲಿ ಭಾಗಿಯಾದ ಶತ್ರುರಾಷ್ಟ್ರಗಳ ಪ್ರಜೆಗಳು ಹಾಗೂ ತಮ್ಮದೇ ಆಡಳಿತದಲ್ಲಿರುವ ರಾಷ್ಟ್ರಗಳ ಪ್ರಜೆಗಳು ಎಂದು ಎರಡು ರೀತಿಯ ಶತ್ರುಗಳನ್ನು ಗುರುತಿಸಿ, ಅವರಿಗೆ ಸೇರಿದ್ದ ಆಸ್ತಿಗಳನ್ನು ವಶಪಡಿಸಿಕೊಂಡಿತ್ತು. ಆದರೆ ಯುದ್ಧಾನಂತರ ಶೇ 90ರಷ್ಟು ಆಸ್ತಿಗಳನ್ನು ಮರಳಿಸಲಾಗಿತ್ತು.

ಸೈಫ್‌ ಆಸ್ತಿ ‘ಶತ್ರು’ವಿನದ್ದು?

ಭೋಪಾಲ್‌ನ ಮಾಜಿ ನವಾಬರಿಗೆ ಸೇರಿದ್ದ, ಪ್ರಸಕ್ತ ಬಾಲಿವುಡ್‌ ನಟ, ಈಗಿನ ನವಾಬ ಸೈಫ್‌ ಅಲಿ ಖಾನ್‌ ಅವರಿಗೆ ಸೇರಿದ ಆಸ್ತಿಯನ್ನೂ 2015ರಲ್ಲಿ ‘ಶತ್ರುವಿನ ಸೊತ್ತು’ಗಳ ಪಟ್ಟಿಗೆ ಸೇರಿಸಲಾಗಿದೆ.

ಭೋಪಾಲ್‌ನ ನವಾಬರಾಗಿದ್ದ ಹಮೀದುಲ್ಲಾ ಖಾನ್‌ ಅವರ ಪುತ್ರಿ ಅಬೀದಾ ಸುಲ್ತಾನ್‌ ಅವರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. 1960ರ ದಶಕದವರೆಗೂ ಬದುಕಿದ್ದ ಹಮೀದುಲ್ಲಾ ಅವರು ತಮ್ಮ ಇನ್ನೊಬ್ಬ ಪುತ್ರಿ, ಮನ್ಸೂರ್‌ ಅಲಿ ಖಾನ್‌ ಪಟೌಡಿ ಅವರ ತಾಯಿ ಸಜೀದಾ ಸುಲ್ತಾನಾ ಅವರನ್ನು ತಮ್ಮ ಆಸ್ತಿಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಕಾಯ್ದೆಯ ತಿದ್ದುಪಡಿಯ ಬಳಿಕ ಸರ್ಕಾರವು ಈ ಹಸ್ತಾಂತರವನ್ನೂ ರದ್ದುಪಡಿಸಿ, ಅವರ ಆಸ್ತಿಯನ್ನು ‘ಶತ್ರುವಿನ ಸೊತ್ತು’ ಎಂದಿತು.

ಸರ್ಕಾರದ ಈ ಧೋರಣೆಯನ್ನು ವಿರೋಧಿಸಿ ಸೈಫ್‌ ಅಲಿ ಖಾನ್‌ ಅವರು 2015ರಲ್ಲಿ ಕೋರ್ಟ್‌ ಮೆಟ್ಟಿಲೇರಿದ್ದು, ಸೊತ್ತು ವಶಪಡಿಸಿಕೊಳ್ಳುವುದಕ್ಕೆ ತಡೆಯಾಜ್ಞೆ ನೀಡಲಾಗಿದೆ.

ತಿದ್ದುಪಡಿಯಿಂದ ಸಮಸ್ಯೆ?

ಮೂಲ ‘ಶತ್ರು ಆಸ್ತಿ ಕಾಯ್ದೆ’ಯಲ್ಲಿ ‘ಶತ್ರು’ ಎಂಬ ಪದವನ್ನು ‘ಶತ್ರುತ್ವ ಸಾಧಿಸುವ ರಾಷ್ಟ್ರದ ವ್ಯಕ್ತಿ ಅಥವಾ ಸಂಸ್ಥೆ’ ಎಂದು ವ್ಯಾಖ್ಯಾನಿಸಲಾಗಿತ್ತು. ‘ಭಾರತೀಯ ಪ್ರಜೆ’ಯನ್ನು ಅದು ಒಳಗೊಂಡಿರಲಿಲ್ಲ. ಶತ್ರು ಎನಿಸಿಕೊಂಡ ವ್ಯಕ್ತಿಯು ಸತ್ತ ಬಳಿಕ ಅವರ ಸೊತ್ತು ಭಾರತೀಯ ಪ್ರಜೆಯಾಗಿರುವ ಅವರ ಕುಟುಂಬದವರ ಕೈಸೇರಿದರೆ ಅದನ್ನು ‘ಶತ್ರುವಿನ ಸೊತ್ತು’ ಎಂದು ಪರಿಗಣಿಸುವಂತಿರಲಿಲ್ಲ.

1947ರಲ್ಲಿ ದೇಶ ವಿಭಜನೆಯಾದಾಗ ನೂರಾರು ಕುಟುಂಬಗಳು ಪಾಕಿಸ್ತಾನಕ್ಕೆ ವಲಸೆ ಹೋಗಿವೆ. ಇದನ್ನು ಹಿನ್ನೆಲೆಯಲ್ಲಿಟ್ಟು ನೋಡಿದರೆ ಇದರ ಔಚಿತ್ಯ ಏನೆಂಬುದು ಸ್ಪಷ್ಟವಾಗುತ್ತದೆ. ಹೀಗೆ ವಲಸೆ ಹೋದ ಅನೇಕರು ತಮ್ಮ ಆಸ್ತಿಪಾಸ್ತಿಗಳನ್ನು ತಮ್ಮ ಕುಟುಂಬದವರು ಅಥವಾ ಸಂಬಂಧಿಕರಿಗೆ ಒಪ್ಪಿಸಿ ಹೋಗಿದ್ದಾರೆ. ಅದನ್ನು ಅವರು ಅನುಭವಿಸುತ್ತಾ ಬಂದಿದ್ದಾರೆ.

ಆದರೆ 2016ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಹೊಸ ಕಾಯ್ದೆಯಲ್ಲಿ ‘ಭಾರತೀಯ ಪ್ರಜೆಗೆ ಅನ್ವಯವಾಗುವುದಿಲ್ಲ’ ಎಂಬ ಸಾಲುಗಳನ್ನು ತೆಗೆದುಹಾಕಲಾಗಿದೆ. ಅಷ್ಟೇ ಅಲ್ಲ, ಕಾಯ್ದೆಯನ್ನು ಪೂರ್ವಾನ್ವಯವಾಗುವಂತೆ ಜಾರಿ ಮಾಡಲಾಗಿದೆ. ಆದ್ದರಿಂದ ಹಿಂದೆ ಇಂಥ ಆಸ್ತಿಗಳು ಮಾರಾಟವಾಗಿದ್ದರೆ ಆ ಎಲ್ಲಾ ವ್ಯವಹಾರಗಳು ರದ್ದಾಗುತ್ತವೆ.

ಪುರಸಭೆಗೆ ತೆರಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ 1960ರಲ್ಲಿ ಮನೆಯೊಂದನ್ನು ಹರಾಜು ಹಾಕಲಾಗಿತ್ತು. ಕಾಯ್ದೆಯ ತಿದ್ದುಪಡಿಯ ನಂತರ ಆ ಆಸ್ತಿಯು ಶತ್ರುವಿನ ಸೊತ್ತು ಎನಿಸಿಕೊಂಡಿದ್ದು, ಕೇಂದ್ರ ಸರ್ಕಾರ ಸ್ವಾಧೀನಪಡಿಸಿಕೊಂಡ ಪ್ರಕರಣವೊಂದು ಮೂರು ವರ್ಷಗಳ ಹಿಂದೆ ವರದಿಯಾಗಿತ್ತು.

‘ಹೊಸ ಕಾಯ್ದೆಯ ಪ್ರಕಾರ, ಭಾರತದಲ್ಲೇ ಹುಟ್ಟಿ, ಇಲ್ಲಿಯ ಪ್ರಜೆಯಾಗಿದ್ದು, ಭಾರತದ್ದೇ ಪಾಸ್‌ಪೋರ್ಟ್‌ ಹೊಂದಿರುವ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು ಸಹ ಅವರ ಪೂರ್ವಜರ ಕಾರಣದಿಂದಾಗಿ ಈಗ ‘ಶತ್ರು’ ಎನಿಸಿಕೊಳ್ಳಬೇಕಾಗುತ್ತದೆ’ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಪೂರ್ವಜರಿಂದ ಬಳುವಳಿಯಾಗಿ ಬಂದ ಸೊತ್ತನ್ನು ದಶಕಗಳಿಂದ ಅನುಭವಿಸುತ್ತಿರುವವರೂ ಈಗ ಅಂಥವುಗಳನ್ನು ಕಳೆದುಕೊಳ್ಳುವ ಭೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ತಿದ್ದುಪಡಿ ಕಾಯ್ದೆ ಜಾರಿ ಮಾಡಿದ ಕಾರಣಗಳು

* ‘ಶತ್ರು’ ಪದದ ವ್ಯಾಖ್ಯಾನ ಬದಲಾವಣೆ ಉದ್ದೇಶ

* ಶತ್ರುವಿನ ಸೊತ್ತಿನ ಮೇಲ್ವಿಚಾರಕನ ಅಧಿ ಕಾರಗಳ ಬಗ್ಗೆ ಕಾಯ್ದೆಯಲ್ಲಿ ಸ್ಪಷ್ಟತೆ ಇರಲಿಲ್ಲ

* ಈ ವಿಷಯದಲ್ಲಿ ಸಿವಿಲ್ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದನ್ನು ತಡೆಯುವ ಉದ್ದೇಶ

* ಶತ್ರುವಿನ ಸೊತ್ತುಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ ನೀಡುವುದು

 ***

* 2010ರಲ್ಲಿ ಯುಪಿಎ ನೇತೃತ್ವದ ಸರ್ಕಾರವು ಶತ್ರು ಸೊತ್ತು ಕಾಯ್ದೆಯನ್ನು ಪೂರ್ವಾನ್ವಯವಾಗುವಂತೆ ಜಾರಿಮಾಡುವ ಸುಗ್ರೀವಾಜ್ಞೆ ತಂದು, ಮೆಹಮೂದಾಬಾದ್‌ನ ಕೆಲವು ಸೊತ್ತುಗಳನ್ನು ವಶಪಡಿಸಿಕೊಂಡಿತು

* ಯುಪಿಎ ಸರ್ಕಾರವು ಆ ಸುಗ್ರೀವಾಜ್ಞೆಯನ್ನು ಕಾನೂನಾಗಿ ಪರಿವರ್ತಿಸಲಿಲ್ಲ. ಆ ನಂತರ ಬಂದ ಎನ್‌ಡಿಎ ನೇತೃತ್ವದ ಸರ್ಕಾರವು ಅದೇ ಸುಗ್ರೀವಾಜ್ಞೆಯನ್ನು ನಾಲ್ಕುಬಾರಿ ಜಾರಿ ಮಾಡಿ, ಕೊನೆಗೆ ಕಾಯ್ದೆಗೆ ತಿದ್ದುಪಡಿ ತಂದಿತು.

* ಪ್ರತಿ ಬಾರಿ ಸುಗ್ರೀವಾಜ್ಞೆ ಜಾರಿ ಮಾಡಿದಾಗಲೂ ಶತ್ರು ಸೊತ್ತುಗಳ ಸಂಖ್ಯೆ ಹೆಚ್ಚಿದೆ. 2010ರಲ್ಲಿ 2,111ರಷ್ಟಿದ್ದ ಸಂಖ್ಯೆಯು 2014ರಲ್ಲಿ 12,090ಕ್ಕೆ ಹಾಗೂ 2015ರಲ್ಲಿ 14,759ಕ್ಕೆ ಏರಿದೆ. ಪ್ರಸಕ್ತ ಒಟ್ಟು 15,143 ಸೊತ್ತುಗಳ ಪಟ್ಟಿಯನ್ನು ಸರ್ಕಾರವು ತಯಾರಿಸಿದೆ.

* ಈ ಸೊತ್ತುಗಳನ್ನು ಬಳಸಿದ್ದಕ್ಕಾಗಿ ಬಾಡಿಗೆ ನೀಡುವಂತೆ ಮಾಲೀಕರಿಗೆ/ಸ್ವಾಧೀನ ಇರಿಸಿಕೊಂಡಿರುವವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

* ಪಾಕಿಸ್ತಾನದಲ್ಲೂ ಭಾರತೀಯ ಪ್ರಜೆಗಳಿಗೆ ಸೇರಿದ್ದ ಇಂಥ ಸೊತ್ತುಗಳಿದ್ದವು. ಅಲ್ಲಿನ ಸರ್ಕಾರವು ಈಗಾಗಲೇ ಅವುಗಳನ್ನು ವಿಲೇವಾರಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು