ಶುಕ್ರವಾರ, ಜನವರಿ 24, 2020
16 °C
ವಿಶ್ವನಾಥ ದೇವಸ್ಥಾನ–ಜ್ಞಾನವಾಪಿ ಮಸೀದಿಯ ವಿವಾದಿತ ಜಾಗದಲ್ಲಿ ಜ್ಯೋತಿರ್ಲಿಂಗ: ಅರ್ಜಿದಾರರ ಪ್ರತಿಪಾದನೆ

ಜ್ಯೋತಿರ್ಲಿಂಗ ಪತ್ತೆಗಾಗಿ ಕಾಶಿಯಲ್ಲಿ ಉತ್ಖನನಕ್ಕೆ ಕೋರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ತೀರ್ಪು ಹೊರಬಿದ್ದ ಬಳಿಕ ಕಾಶಿ ವಿಶ್ವನಾಥ ದೇವಸ್ಥಾನ–ಜ್ಞಾನವಾಪಿ ಮಸೀದಿ ವಿವಾದಕ್ಕೆ ಜೀವ ಬಂದಿದೆ. 

ಕಾಶಿ ವಿಶ್ವನಾಥ ದೇವಸ್ಥಾನ–ಜ್ಞಾನವಾಪಿ ಮಸೀದಿ ಆವರಣದಲ್ಲಿ ಪುರಾತತ್ವ ಇಲಾಖೆಯಿಂದ ಉತ್ಖನನ ನಡೆಸಬೇಕು ಎಂದು ಕೋರಿ ಇಲ್ಲಿನ ಸ್ಥಳೀಯ ಕೋರ್ಟ್‌ನಲ್ಲಿ ಅರ್ಜಿಸಲ್ಲಿಕೆಯಾಗಿದ್ದು, ಜನವರಿ 9ರಂದು ವಿಚಾರಣೆ ಆರಂಭವಾಗುವ ಸಾಧ್ಯತೆಯಿದೆ.

‘ವಿವಾದಿತ ಜಾಗದಲ್ಲಿ ವಿಶ್ವೇಶ್ವರನಾಥನ ಶಿವಲಿಂಗವಿದ್ದು, ಇದು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದು’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಉತ್ಖನನ ನಡೆಸಿದರೆ ಜನರಿಗೆ ಸತ್ಯ ತಿಳಿಯಲಿದೆ. ಹೀಗಾಗಿ ಪುರಾತತ್ವ ಇಲಾಖೆಗೆ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. 

ಮೊಘಲ್ ದೊರೆ ಔರಂಗಜೇಬನು 1669ರಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಜ್ಞಾನವಾಪಿ ಮಸೀದಿ ನಿರ್ಮಿಸಿದ್ದ ಎನ್ನಲಾಗಿದೆ. ಹಿಂದೂ ದೇವಸ್ಥಾನವನ್ನು ಕೆಡವಿದ ಬಳಿಕ ಮಸೀದಿ ನಿರ್ಮಿಸಲಾಯಿತು ಎಂಬ ಆರೋಪವಿದೆ. ವಿಶ್ವನಾಥ ದೇವಸ್ಥಾನದ ಮೂಲ ಜ್ಯೋತಿರ್ಲಿಂಗವು ದೇಗುಲ ಧ್ವಂಸಗೊಂಡ ಜಾಗದಲ್ಲಿ ಇದೆ ಎನ್ನುತ್ತಾರೆ ಸ್ವಾಮೀಜಿಯೊಬ್ಬರು. 

ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಮಥುರಾದ ಶ್ರೀಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ಜಾಗಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಇತ್ತೀಚೆಗೆ ಒತ್ತಾಯಿಸಿದ್ದರು. ಎರಡೂ ಕ್ಷೇತ್ರಗಳು ಹಿಂದೂಗಳಿಗೆ ಪವಿತ್ರ ಜಾಗಗಳು ಎಂದು ಅವರು ಪ್ರತಿಪಾದಿಸಿದ್ದರು. 

ಸಂತರ ರಾಷ್ಟ್ರಮಟ್ಟದ ಸಂಘಟನೆ ಅಖಿಲ ಭಾರತ ಅಖಾಡ ಪರಿಷತ್ (ಎಐಎಪಿ) ಕೂಡ ಈ ಸಂಬಂಧ ಅಭಿಯಾನ ಶುರು ಮಾಡುವುದಾಗಿ ತಿಳಿಸಿತ್ತು.

ಹಳೆಯ ಪ್ರಕರಣ

ವಿವಾದಿತ ನಿವೇಶನದ ಒಡೆತನ ನೀಡುವಂತೆ ಕೋರಿ 1991ರಲ್ಲಿ ವಾರಾಣಸಿ ನ್ಯಾಯಾಲಯದಲ್ಲಿ ಹಿಂದೂಗಳು ಅರ್ಜಿ ಸಲ್ಲಿಸಿದ್ದರು. ಮುಸ್ಲಿಮರು ಇದರಲ್ಲಿ ಕಕ್ಷಿದಾರರು. ಈ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ತಡೆ ತೆರವಾಗಿದ್ದು, ವಿಚಾರಣೆ ಪುನರಾರಂಭವಾಗಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು