ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯ ಬಯಲು ಶೌಚಮುಕ್ತ ಘೋಷಣೆ ನಂಬಲರ್ಹವಲ್ಲ: ಆರೋಗ್ಯ,ನೈರ್ಮಲ್ಯ ತಜ್ಞ ಡಾ.ಸುಮೇಧ್

ಸ್ವಚ್ಛ ಭಾರತ ಯೋಜನೆ ವಿಫಲವಾಗುವ ಸಾಧ್ಯತೆಯೇ ಹೆಚ್ಚು: ತಜ್ಞರ ಅಭಿಮತ
Last Updated 3 ಅಕ್ಟೋಬರ್ 2019, 14:25 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತವು ಬಯಲು ಶೌಚಮುಕ್ತ ದೇಶವಾಗಿದೆ ಎಂಬ ಸರ್ಕಾರದ ಘೋಷಣೆ ಮತ್ತು ಸರ್ಕಾರ ನೀಡುತ್ತಿರುವ ಅಂಕಿಅಂಶ ನಂಬಲರ್ಹವಲ್ಲ’ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ್ದೇ ಅಂಕಿಆಂಶಗಳ ಪ್ರಕಾರ ದೇಶದಾದ್ಯಂತ ಇನ್ನೂ ಲಕ್ಷಾಂತರ ಶೌಚಾಲಯಗಳ ನಿರ್ಮಾಣವಾಗಬೇಕಿದೆ

‘ಘೋಷಣೆಯೇ ಅವೈಜ್ಞಾನಿಕ’

‘2012ರಲ್ಲಿ ನಡೆಸಲಾಗಿದ್ದ ಸಮೀಕ್ಷೆಯ ವರದಿಯ ಆಧಾರದ ಮೇಲೆ, ಅಗತ್ಯವಿರುವ ಶೌಚಾಲಯಗಳ ಸಂಖ್ಯೆಯನ್ನು ಅಂದಾಜಿಸಲಾಗಿತ್ತು. ಆ ಅಂದಾಜಿಗೆ ಅನುಗುಣವಾಗಿಯೇ ಸ್ವಚ್ಛ ಭಾರತ ಯೋಜನೆ ಅಡಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.ಈ ದತ್ತಾಂಶಗಳು ತೀರಾ ಹಳತಾಗಿವೆ. ಸ್ವಚ್ಛ ಭಾರತ ಯೋಜನೆ ಜಾರಿಗೆ ತಂದದ್ದು 2014ರ ಅಕ್ಟೋಬರ್‌ನಲ್ಲಿ. 2012 ಮತ್ತು 2014ರ ಮಧ್ಯೆ ಪರಿಸ್ಥಿತಿ ತೀರಾ ಬದಲಾಗಿದೆ. ಹೀಗಾಗಿ 2012ರ ದತ್ತಾಂಶಗಳನ್ನು ಇಟ್ಟುಕೊಂಡೇ, ಗುರಿಯನ್ನು ತಲುಪಲಾಗಿದೆ ಎನ್ನುವುದು ವಾಸ್ತವಕ್ಕೆ ದೂರವಾದುದು’ ಎಂದು ಆರೋಗ್ಯ ಮತ್ತು ನೈರ್ಮಲ್ಯ ತಜ್ಞ ಡಾ.ಸುಮೇಧ್ ವಿವರಿಸಿದ್ದಾರೆ.

ಶೌಚಾಲಯ ನಿರ್ಮಿಸಿದರೆ ಸಾಕೇ?

‘ಸ್ವಚ್ಛ ಭಾರತ ಯೋಜನೆ ಅಡಿ ಸರ್ಕಾರವು ಶೌಚಾಲಯ ನಿರ್ಮಾಣಕ್ಕೆ ಮಾತ್ರ ಆದ್ಯತೆ ನೀಡುತ್ತಿದೆ. ಆದರೆ ಶೌಚಾಲಯ ಬಳಕೆಗೆ ಅಗತ್ಯವಾದ ನೀರಿನ ಲಭ್ಯತೆ ಮತ್ತು ಪೂರೈಕೆಯನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಬಯಲು ಶೌಚಕ್ಕೆ ಬೇಕಾಗುವ ನೀರಿಗಿಂತ ಅಧಿಕ ಪ್ರಮಾಣದ ನೀರು ಶೌಚಾಲಯಗಳ ಬಳಕೆಗೆ ಬೇಕು. ನೀರಿನ ಕೊರತೆಯ ಕಾರಣ ಜನರು ಶೌಚಾಲಯ ಬಳಕೆಯಿಂದ ದೂರ ಸರಿಯುತ್ತಿದ್ದಾರೆ’ ಎಂದು ಸೆಂಟರ್‌ ಫಾರ್ ಸೈನ್ಸ್‌ ಅಂಡ್‌ ಎನ್ವಿರಾನ್ಮೆಂಟ್‌ (ಸಿಎಸ್‌ಇ) ಸ್ವಯಂ ಸೇವಾ ಸಂಸ್ಥೆ ಹೇಳಿದೆ.

‘ಹರಿಯಾಣವನ್ನು 2017ರಲ್ಲೇ ಬಯಲು ಶೌಚಮುಕ್ತ ರಾಜ್ಯ ಎಂದು ಘೋಷಿಸಲಾಗಿದೆ. ಆದರೆ ಆ ರಾಜ್ಯದಲ್ಲಿ ಶೇ 30ಕ್ಕೂ ಹೆಚ್ಚು ಜನರು ಶೌಚಾಲಯಗಳನ್ನು ಬಳಸುತ್ತಿಲ್ಲ. ಬೇರೆ ರಾಜ್ಯಗಳಲ್ಲೂ ಲಕ್ಷಾಂತರ ಜನರು ಮತ್ತೆ ಬಯಲು ಶೌಚಕ್ಕೆ ಮರಳುತ್ತಿದ್ದಾರೆ. ಹೀಗಾಗಿ ದೀರ್ಘಾವಧಿಯಲ್ಲಿ ಈ ಯೋಜನೆ ವಿಫಲವಾಗುವ ಸಾಧ್ಯತೆಯೇ ಹೆಚ್ಚು’ ಎಂದುಸಿಎಸ್‌ಇ ಹೇಳಿದೆ.

ಶೌಚ ತ್ಯಾಜ್ಯ ವಿಲೇವಾರಿ ಹೇಗೆ?

‘ಸ್ವಚ್ಛ ಭಾರತ ಯೋಜನೆ ಅಡಿ ಕೇವಲ ಐದು ವರ್ಷಗಳಲ್ಲಿ 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಈ ಶೌಚಾಲಯಗಳ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ತೆಗೆದುಕೊಂಡಿಲ್ಲ’ ಎಂದು ಸಿಎಸ್‌ಇ ಹೇಳಿದೆ.

‘ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾದ ಶೌಚಾಲಯಗಳ ಜತೆಗೆ ‘ಸೆಪ್ಟಿಕ್‌ ಟ್ಯಾಂಕ್‌’ಗಳನ್ನು ನಿರ್ಮಿಸಲಾಗಿದೆ. ‘ಸೆಪ್ಟಿಕ್‌ ಟ್ಯಾಂಕ್‌’ಗಳ ನಿರ್ಮಾಣಕ್ಕೆ ಸರ್ಕಾರವು ಯಾವುದೇ ಮಾನದಂಡಗಳನ್ನು ರೂಪಿಸಿಲ್ಲ. ಉತ್ತರ ಭಾರತದ ರಾಜ್ಯಗಳಲ್ಲಿ ಹೀಗೆ ನಿರ್ಮಿಸಲಾದ ಸೆಪ್ಟಿಕ್‌ ಟ್ಯಾಂಕ್‌ಗಳಲ್ಲಿ ಶೇ 30ರಷ್ಟು ಟ್ಯಾಂಕ್‌ಗಳು ಅವೈಜ್ಞಾನಿಕವಾಗಿವೆ’ ಎಂದು ಸಿಎಸ್‌ಇಯು ತನ್ನ ಅಧ್ಯಯನ ವರದಿಯಲ್ಲಿ ವಿವರಿಸಿದೆ.

‘ಅವೈಜ್ಞಾನಿಕವಾಗಿ ನಿರ್ಮಿಸಲಾದ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವು ಗೊಬ್ಬರವಾಗುವುದಿಲ್ಲ. ಟ್ಯಾಂಕ್‌ ತುಂಬಿದಾಗ ಅದನ್ನು ತೆರವು ಮಾಡುವಾಗ ಸೋಂಕು ಹರಡುವ ಅಪಾಯವಿರುತ್ತದೆ. ಮತ್ತೆ ಆ ತ್ಯಾಜ್ಯವನ್ನು ಹೇಗೆ ಮತ್ತು ಎಲ್ಲಿ ವಿಲೇವಾರಿ ಮಾಡುವುದು ಎಂಬುದರ ಬಗ್ಗೆಯೂ ಯಾವುದೇ ಸ್ಪಷ್ಟ ನಿರ್ದೇಶನಗಳಿಲ್ಲ. ಹೀಗಾಗಿ ಈ ತ್ಯಾಜ್ಯದ ವಿಲೇವಾರಿಯು ಭಾರಿ ಸಮಸ್ಯೆಯಾಗಲಿದೆ’ ಎಂದು ಸಿಎಸ್‌ಇ ಕಳವಳ ವ್ಯಕ್ತಪಡಿಸಿದೆ.

ಮಾಹಿತಿಯಲ್ಲೇ ವ್ಯತ್ಯಾಸ

‘ಭಾರತವು ಬಯಲು ಶೌಚಮುಕ್ತ ದೇಶವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಘೋಷಿಸಿದ್ದರು.

ಆದರೆ, ‘ಪಶ್ಚಿಮ ಬಂಗಾಳದ 52 ಸ್ಥಳೀಯಾಡಳಿತ ಸಂಸ್ಥೆಗಳನ್ನು ಈವರೆಗೆ ಬಯಲು ಶೌಚಮುಕ್ತ ಎಂದು ಘೋಷಿಸಲಾಗಿಲ್ಲ’ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹರಿದೀಪ್‌ ಸಿಂಗ್ ಅವರೇ ಬುಧವಾರ ಹೇಳಿದ್ದರು.

ಸ್ವಚ್ಛ ಭಾರತ ಯೋಜನೆ ಅಡಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಲು ಸರ್ಕಾರವು ಸಹಾಯಧನ ಒದಗಿಸುತ್ತಿದೆ. ಅಗತ್ಯವಿರುವವರು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು. ಹೀಗೆ ಸಲ್ಲಿಸಲಾದ ಅರ್ಜಿಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತವಾಗಿವೆ. ಅಲ್ಲದೆ ಸಹಾಯಧನ ಮಂಜೂರಾಗಿದ್ದರಲ್ಲಿ ಇನ್ನೂ 10 ಲಕ್ಷಕ್ಕೂ ಹೆಚ್ಚು ಶೌಚಾಲಯಗಳು ನಿರ್ಮಾಣವಾಗಬೇಕಿದೆ. ಹೀಗಿದ್ದ ಮೇಲೆ ದೇಶವು ಬಯಲು ಶೌಚಮುಕ್ತ ಎಂದು ಘೋಷಿಸುವುದು ಹೇಗೆ ಸಾಧ್ಯ ಎಂದು ತಜ್ಞರು ಪ್ರಶ್ನಿಸಿದ್ದಾರೆ.

5.9 ಲಕ್ಷ :ಗ್ರಾಮಗಳನ್ನು ಸರ್ಕಾರವು ಬಯಲು ಶೌಚಮುಕ್ತ ಎಂದು ಘೋಷಿಸಿದೆ

5.7 ಲಕ್ಷ:ಗ್ರಾಮಗಳು ಬಯಲು ಶೌಚಮುಕ್ತವಾಗಿವೆ ಎಂಬುದನ್ನು ಸರ್ಕಾರ ದೃಢಪಡಿಸಿದೆ

20,901 :ಗ್ರಾಮಗಳು ನಿಜಕ್ಕೂ ಬಯಲು ಶೌಚಮುಕ್ತವಾಗಿವೇ ಎಂಬುದರ ಬಗ್ಗೆ ಮಾಹಿತಿ ಇಲ್ಲ

57.25 ಲಕ್ಷ:ನಗರ ಪ್ರದೇಶಗಳಲ್ಲಿ ಪ್ರತ್ಯೇಕ ಶೌಚಾಲಯಗಳ ನಿರ್ಮಾಣಕ್ಕೆ ಸಹಾಯಧನ ಪಡೆದವರು

56.10 ಲಕ್ಷ :ಸಹಾಯಧನ ಪಡೆದವರಲ್ಲಿ ಶೌಚಾಲಯ ನಿರ್ಮಿಸಿದವರು

1,15,604 :ಶೌಚಾಲಯಗಳು ಇನ್ನಷ್ಟೇ ನಿರ್ಮಾಣವಾಗಬೇಕಿದೆ

24.65 ಲಕ್ಷ :ಸಹಾಯಧನಕ್ಕಾಗಿ ಸಲ್ಲಿಕೆಯಾಗಿದ್ದರಲ್ಲಿ ತಿರಸ್ಕೃತವಾದ ಅರ್ಜಿಗಳು

ಆಧಾರ: ಪಿಟಿಐ, ಸ್ವಚ್ಛ ಭಾರತ ಅಭಿಯಾನದ ಜಾಲತಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT