ಕುಟುಂಬದ 11 ಮಂದಿ ನಿಗೂಢ ಸಾವು

7
ಕಣ್ಣು, ಕೈ, ಕಾಲು, ಬಾಯಿ ಕಟ್ಟಿದ್ದ ದೇಹಗಳು ಪತ್ತೆ– ತತ್ತರಿಸಿದ ಸ್ಥಳೀಯರು

ಕುಟುಂಬದ 11 ಮಂದಿ ನಿಗೂಢ ಸಾವು

Published:
Updated:
ಮೃತದೇಹಗಳನ್ನು ಆಂಬುಲೆನ್ಸ್ ಮೂಲಕ ಸಾಗಿಸಲಾಯಿತು –ಎಎಫ್‌ಪಿ ಚಿತ್ರ

ನವದೆಹಲಿ: ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿ ನಿಗೂಢವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಿಂದ ನೆರೆಹೊರೆಯವರು ತತ್ತರಿಸಿದ್ದಾರೆ.

‘ಮೃತರಲ್ಲಿ ಏಳು ಮಹಿಳೆಯರು, ನಾಲ್ವರು ಪುರುಷರು ಹಾಗೂ ಮೂವರು ಮಕ್ಕಳು ಇದ್ದಾರೆ. ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ
ನಡೆಸುತ್ತಿದ್ದೇವೆ’ ಎಂದು ಜಂಟಿ ಪೊಲೀಸ್ ಆಯುಕ್ತ ರಾಜೇಶ್ ಖುರಾನಾ ತಿಳಿಸಿದ್ದಾರೆ. 

‘ಕೆಲವು ದೇಹಗಳು ಮನೆಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದವು. ಇನ್ನು ಕೆಲವು ದೇಹಗಳು ಕಣ್ಣು, ಕೈ, ಕಾಲು ಕಟ್ಟಿ ಬಾಯಿ ಮುಚ್ಚಿದ ಸ್ಥಿತಿಯಲ್ಲಿ ನೆಲದ ಮೇಲೆ ಇದ್ದವು’ ಎಂದು ಅವರು ಹೇಳಿದ್ದಾರೆ.  ಈ ಕುಟುಂಬದವರು ಮೂಲತಃ ರಾಜಸ್ಥಾನದವರಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಕುಟುಂಬದ ಭೂಪಿಂದರ್ ಹಾಗೂ ಲಲಿತ್ ಸಿಂಗ್ ಮನೆಯಲ್ಲಿಯೇ ದಿನಸಿ ಅಂಗಡಿ ನಡೆಸುತ್ತಿದ್ದರು. 

‘ಭಾನುವಾರ ಬೆಳಿಗ್ಗೆ 7.30ರ ವೇಳೆಗೆ ಅಂಗಡಿಗೆ ಹಾಲು ಕೊಡಲು ವ್ಯಾನ್‌ ಬಂದಿತ್ತು. ಚಾಲಕ ಎಷ್ಟು ಕೂಗಿದರೂ ಯಾರೂ ಪ್ರತಿಕ್ರಿಯಿಸದಿದ್ದಾಗ ನೆರೆಹೊರೆಯವರು ಆಚೆ ಬಂದರು. ಸಾಮಾನ್ಯವಾಗಿ ಬೆಳಿಗ್ಗೆ 6 ಗಂಟೆಗೆ ಅಂಗಡಿ ತೆರೆದಿರುತ್ತಿತ್ತು. ಮನೆ ಬಾಗಿಲು ತೆರೆದೇ ಇದ್ದಿದ್ದರಿಂದ ನೆರೆಮನೆಯವರೊಬ್ಬರು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ’ ಎಂದು ಖುರಾನಾ ತಿಳಿಸಿದ್ದಾರೆ. 

ಮೃತರಲ್ಲಿ ನಾರಾಯಣ ದೇವಿ (75), ಅವರ ಪುತ್ರಿ ಪ್ರತಿಭಾ (57), ‍ಪುತ್ರರಾದ ಭಾವನೇಶ್‌ (50), ಲಲಿತ್‌ ಭಾಟಿಯಾ (45) ಭಾವನೇಶ್‌ ಅವರ ಪತ್ನಿ ಸವಿತಾ (48), ಮಕ್ಕಳಾದ ಮೀನು (23), ನಿಧಿ (25), ಧ್ರುವ್‌ (15), ಲಲಿತ್‌ ಅವರ ಪತ್ನಿ ಟೀನಾ (42), ಮಗ ಶಿವಂ (15), ಕಳೆದ ತಿಂಗಳು ನಿಶ್ಚಿತಾರ್ಥ ಆಗಿದ್ದ ಪ್ರತಿಭಾ ಅವರ ಪುತ್ರಿ ಪ್ರಿಯಾಂಕಾ (33) ಸೇರಿದ್ದಾರೆ. ಪತಿಯನ್ನು ಕಳೆದುಕೊಂಡಿದ್ದ ಪ್ರತಿಭಾ ಮಗಳೊಂದಿಗೆ ಅಣ್ಣಂದಿರ ಮನೆಯಲ್ಲಿ ನೆಲೆಸಿದ್ದರು.

‘ಯಾರೋ ನನ್ನ ಕುಟುಂದವರನ್ನು ಕೊಲೆ ಮಾಡಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಬೇಕು’ ಎಂದು ಪಾಣಿಪತ್‌ನಲ್ಲಿ ನೆಲೆಸಿರುವ ನಾರಾಯಣ ದೇವಿ ಅವರ ಮತ್ತೊಬ್ಬ ಪುತ್ರಿ ಸುಜಾತಾ ಆಗ್ರಹಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !