ಶುಕ್ರವಾರ, ಫೆಬ್ರವರಿ 26, 2021
20 °C
ರಾಜ್ಯಗಳ ನಿರ್ಧಾರಕ್ಕೆ ಟೀಕೆ

ಊಳಿಗಮಾನ್ಯ ಮನಃಸ್ಥಿತಿ | ವಲಸಿಗರ ಕಳುಹಿಸಲು ಹಿಂದೇಟು: ಶ್ರಮಿಕ ರೈಲು ರದ್ದು ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ವಿವಿಧೆಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ಊರಿಗೆ ಹಿಂದಿರುಗಲು ವಿಶೇಷ ‘ಶ್ರಮಿಕ ರೈಲು’ಗಳು ಐದು ದಿನಗಳ ಹಿಂದೆ ಆರಂಭವಾಗಿದ್ದವು. ಇಂತಹ 137 ರೈಲುಗಳು ಕಾರ್ಮಿಕರನ್ನು ವಿವಿಧ ಊರುಗಳಿಗೆ ತಲುಪಿಸಿವೆ. ಆದರೆ, ಕಾರ್ಮಿಕರನ್ನು ಊರಿಗೆ ಕಳುಹಿಸುವ ವಿಚಾರದಲ್ಲಿ ರಾಜ್ಯಗಳಲ್ಲಿ ಮರು ಚಿಂತನೆ ಆರಂಭ ಆಗಿದೆ. 

ಬೇರೆ ಬೇರೆ ರಾಜ್ಯಗಳ ಕಾರ್ಮಿಕರನ್ನು ಕಳುಹಿಸುವುದು ಮತ್ತು ಬೇರೆ ರಾಜ್ಯಗಳಲ್ಲಿ ಇರುವ ತಮ್ಮವರನ್ನು ಕರೆಸಿಕೊಳ್ಳುವುದು ಬೇಡ ಎಂಬ ಚಿಂತನೆಯನ್ನು ರಾಜ್ಯ ಸರ್ಕಾರಗಳು ನಡೆಸುತ್ತಿವೆ.

ನಿರುದ್ಯೋಗ, ವಲಸೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸರ್ಕಾರಗಳು ಯೋಚಿಸಲು ಆರಂಭಿಸಿವೆ. ಹೀಗಾಗಿ ಶ್ರಮಿಕ ರೈಲುಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಬರುತ್ತಿವೆ.

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಿಯಲ್‌ ಎಸ್ಟೇಟ್‌ ಉದ್ಯಮದ ಪ್ರಮುಖರ ಜತೆಗೆ ಬುಧವಾರ ಸಭೆ ನಡೆಸಿದ್ದರು. ಅದರ ಬಳಿಕ ಅವರು ಶ್ರಮಿಕ ರೈಲುಗಳನ್ನು ರದ್ದುಪಡಿಸುವ ನಿರ್ಧಾರಕ್ಕೆ ಬಂದರು. 

ಹಿಂದಿರುಗಲು ಬಯಸಿರುವ ಕಾರ್ಮಿಕರ ಮನವೊಲಿಸಿ ಅವರು ಇಲ್ಲಿಯೇ ಉಳಿಯುವಂತೆ ಮಾಡುವ ಹೊಣೆಯನ್ನು ಸಚಿವರಿಗೆ ಹೊರಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಕಾರ್ಮಿಕರು ವದಂತಿಗಳಿಗೆ ಕಿವಿಗೊಡಬಾರದು. ಅನಗತ್ಯ ಪ್ರಯಾಣವನ್ನು ತಪ್ಪಿಸಿ ಎಂದು ಯಡಿಯೂರಪ್ಪ ಕರೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಸರ್ಕಾರಗಳು ಇಂತಹ ನಿರ್ಧಾರ ಕೈಗೊಳ್ಳುವುದು ‘ಅಮಾನವೀಯ’ ಎಂದು ಕೆಲವರು ಹೇಳಿದ್ದಾರೆ. ವಲಸೆ ಕಾರ್ಮಿಕರನ್ನು ‘ಜೀತ ಕಾರ್ಮಿಕರು’ ಎಂದು ಸರ್ಕಾರ ಭಾವಿಸಿದಂತಿದೆ ಎಂದು ಕೆಲವರು ಟೀಕಿಸಿದ್ದಾರೆ. 

ಸರ್ಕಾರವು ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿದು ಇಂತಹ ನಿರ್ಧಾರಕ್ಕೆ ಬಂದಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಅವರು ಸರ್ಕಾರಗಳ ಈ ಕ್ರಮವನ್ನು ಖಂಡಿಸಿದ್ದಾರೆ. ‘ಮೊದಲು ಕರ್ನಾಟಕ, ಈಗ ಗುಜರಾತ್‌. ವಲಸೆ ಕಾರ್ಮಿಕರು ತಮ್ಮ ಕುಟುಂಬವನ್ನು ಸೇರಿಕೊಳ್ಳುವುದನ್ನು ಸರ್ಕಾರ ತಡೆಯುವಂತೆ ಕೆಲವು ಉದ್ಯಮ ಲಾಬಿಗಳು ನೋಡಿಕೊಳ್ಳುತ್ತಿವೆ. ಇಷ್ಟಕ್ಕೆ ವಿರುದ್ಧವಾಗಿ ಅವರನ್ನು ಉಳಿಸಿಕೊಳ್ಳುವುದು ಮಾನವ ಹಕ್ಕುಗಳ ಉಲ್ಲಂಘನೆ. ಇದು ಊಳಿಗಮಾನ್ಯ ಮನಃಸ್ಥಿತಿ. ಬಡವರು ಎಂಬ ಕಾರಣಕ್ಕೆ ವಲಸಿಗರಿಗೆ ಆಯ್ಕೆ ಇಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ. 

ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪದಲ್ಲಿ 200ಕ್ಕೂ ಹೆಚ್ಚು ಕಾರ್ಮಿಕರನ್ನು ಗುಜರಾತ್‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

‘ಕಾರ್ಮಿಕರು ಹಿಂದಿರುಗುವ ರೈಲಿನ ವೆಚ್ಚವನ್ನು ಭರಿಸಲು ಕಾಂಗ್ರೆಸ್‌ ಪಕ್ಷ ಸಿದ್ಧವಿದೆ. ಹಾಗಿದ್ದರೂ ಈ ರೈಲುಗಳನ್ನು ತಡೆಯಲು ಬಿಜೆಪಿ ಆಡಳಿತದ ರಾಜ್ಯಗಳು ಯಾಕೆ ಪ್ರಯತ್ನಿಸುತ್ತಿವೆ? ಕಾಂಗ್ರೆಸ್‌ ಬಗ್ಗೆ ಬಿಜೆಪಿಗೆ ಇರುವ ರಾಜಕೀಯ ದ್ವೇಷಕ್ಕೆ ಬಡ ಕಾರ್ಮಿಕರು ಯಾಕೆ ಬೆಲೆ ತೆರಬೇಕು’ ಎಂದು ಪಟೇಲ್‌ ಕೇಳಿದ್ದಾರೆ.

ಆದರೆ, ಶ್ರಮಿಕ ರೈಲು ರದ್ದತಿ ಹಿಂದೆ ಇರುವುದು ರಾಜಕೀಯ ಕಾರಣ ಅಲ್ಲ, ಬದಲಿಗೆ ಆರ್ಥಿಕ ಕಾರಣ. ಹಲವು ರಾಜ್ಯಗಳಲ್ಲಿ ರಿಯಲ್‌ ಎಸ್ಟೇಟ್‌ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ವಲಸಿಗ ಕಾರ್ಮಿಕರೇ ದುಡಿಯುತ್ತಿದ್ದಾರೆ. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ಕೂಡ ವಲಸಿಗರನ್ನು ತಡೆಯಲು ಮುಂದಾಗಿವೆ. 

ಕಾರ್ಮಿಕರು ರಾಜ್ಯದಲ್ಲಿಯೇ ಉಳಿಯಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಕೋರಿದ್ದಾರೆ. 40 ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡುವುದಾಗಿ ತೆಲಂಗಾಣ ಸರ್ಕಾರ ಹಿಂದೆ ಹೇಳಿತ್ತು. 

ಕೇರಳದಿಂದ ಐದು ಶ್ರಮಿಕ ರೈಲುಗಳ ಬರವಿಗೆ ನೀಡಿದ್ದ ಅನುಮತಿಯನ್ನು ಬಿಹಾರ ಸರ್ಕಾರ ಮಂಗಳವಾರ ರದ್ದುಪಡಿಸಿದೆ. ಹೀಗಾಗಿ ಕೇರಳದ ವಿವಿಧ ರೈಲು ನಿಲ್ದಾಣಗಳಲ್ಲಿ ಸಾವಿರಾರು ವಲಸಿಗರು ಕಾಯುತ್ತಾ ಉಳಿದರು. 

ಮಹಾರಾಷ್ಟ್ರದಿಂದ ಸುಮಾರು 40 ಸಾವಿರ ಕಾರ್ಮಿಕರನ್ನು ತವರೂರಿಗೆ ಕಳುಹಿಸಲಾಗಿದೆ. ಇನ್ನು ಮುಂದೆ ಹೊಸ ರೈಲು ಓಡಿಸುವುದಿಲ್ಲ ಎಂದು ಮಹಾರಾಷ್ಟ್ರ ಸ್ಪಷ್ಟಪಡಿಸಿದೆ. ಮಹಾರಾಷ್ಟ್ರದಿಂದ ಕಾರ್ಮಿಕರನ್ನು ಹೊತ್ತು ತಂದ ಕೆಲವು ಬಸ್‌ಗಳನ್ನು ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ತಡೆದಿತ್ತು. 

ವಲಸೆ ಕಾರ್ಮಿಕರು ಹಿಂದಿರುಗಿದರೆ ದೊಡ್ಡ ನಗರಗಳಿರುವ ಹಲವು ರಾಜ್ಯಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ತೊಡಕಾಗುತ್ತದೆ ಎಂಬ ಭಾವನೆ ಇದೆ. ನಿರುದ್ಯೋಗದ ಕಾರಣದಿಂದ ಕಾರ್ಮಿಕರು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಅವರು ಹಿಂದಿರುಗಿದರೆ ನಿರುದ್ಯೋಗ ಸಮಸ್ಯೆ ಕಾಡಬಹುದು ಎಂಬ ಚಿಂತೆ ಈ ಕಾರ್ಮಿಕ ತವರು ರಾಜ್ಯಗಳದ್ದಾಗಿದೆ.

ಲಕ್ಷ ವಲಸಿಗರ ಸಂಚಾರ: ‘ಮೇ 1ರಿಂದ 6ರವರೆಗೆ 137 ಶ್ರಮಿಕ ವಿಶೇಷ ರೈಲುಗಳು, 1 ಲಕ್ಷಕ್ಕೂ ಹೆಚ್ಚು ವಲಸಿಗ ಕಾರ್ಮಿಕರನ್ನು ಅವರ ತವರೂರುಗಳಿಗೆ ತಲುಪಿಸಿವೆ ಎಂದು ರೈಲ್ವೆ ಇಲಾಖೆ ಬುಧವಾರ ತಿಳಿಸಿದೆ. ಪ್ರತಿ ಸಂಚಾರಕ್ಕೆ ರೈಲ್ವೆ ಇಲಾಖೆ ಸುಮಾರು ₹ 80 ಲಕ್ಷ ವೆಚ್ಚ ಮಾಡಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ವಲಸಿಗರ ಮಾಹಿತಿಯೇ ಇಲ್ಲ

ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರ ಬಗ್ಗೆ ಸಮೀಕ್ಷೆ ನಡೆಸಬೇಕು. ಮೂರೇ ದಿನದಲ್ಲಿ ಅದು ಪೂರ್ಣಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ಏಪ್ರಿಲ್‌ ಆರಂಭದಲ್ಲಿ ನೀಡಲಾಗಿತ್ತು. ಹಾಗಿದ್ದರೂ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ, ದೇಶದ ಮುಖ್ಯ ಕಾರ್ಮಿಕ ಆಯುಕ್ತರ (ಸಿಎಲ್‌ಸಿ) ಕಚೇರಿಯಲ್ಲಿ ಕಾರ್ಮಿಕರ ಬಗ್ಗೆ ಮಾಹಿತಿಯೇ ಇಲ್ಲ.

ಮುಖ್ಯ ಕಾರ್ಮಿಕ ಆಯುಕ್ತ ರಾಜನ್‌ ವರ್ಮಾ ಅವರು ದೇಶದ ವಿವಿಧೆಡೆ ಇರುವ 20 ಪ್ರಾದೇಶಿಕ ಕಚೇರಿಗಳಿಗೆ ಏಪ್ರಿಲ್‌ 8ರಂದು ಪತ್ರ ಬರೆದಿದ್ದರು. ವಲಸೆ ಕಾರ್ಮಿಕರಿಗಾಗಿ ಆರಂಭಿಸಿರುವ ಶಿಬಿರಗಳು, ವಲಸೆ ಕಾರ್ಮಿಕರ ಜಿಲ್ಲಾವಾರು ಮತ್ತು ರಾಜ್ಯವಾರು ಮಾಹಿತಿ ಸಂಗ್ರಹಿಸಬೇಕು, ದಿನನಿತ್ಯದ ಬೆಳವಣಿಗೆಗಳನ್ನು ಅದಕ್ಕೆ ಸೇರಿಸುತ್ತಲೇ ಇರಬೇಕು ಎಂದು ಈ ಪತ್ರದಲ್ಲಿ ಸೂಚಿಸಲಾಗಿತ್ತು. 

ಈ ಬಗೆಗಿನ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ಅವರು ಸಿಎಲ್‌ಸಿಯ ಮುಖ್ಯ ಮಾಹಿತಿ ಅಧಿಕಾರಿಯನ್ನು ಕೋರಿದ್ದರು. ‘ಈ ರೀತಿಯ ಯಾವುದೇ ಮಾಹಿತಿ ಸಾಂಖ್ಯಿಕ ವಿಭಾಗದಲ್ಲಿ ಇಲ್ಲ’ ಎಂದು ಸಿಎಲ್‌ಸಿ ಉತ್ತರಿಸಿದೆ.

ದೇಶದ ವಿವಿಧ ಭಾಗಗಳ ನಗರಗಳು ಮತ್ತು ಪಟ್ಟಣಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದರು. ಅವರಿಗೆ ಆದಾಯವಾಗಲಿ, ಕೆಲಸವಾಗಲಿ ಇರಲಿಲ್ಲ. ಲಾಕ್‌ಡೌನ್‌ನಿಂದಾಗಿ ಅವರೆಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದರು. ಅವರು ತಮ್ಮ ಊರುಗಳಿಗೆ ಮರಳಲು ತುದಿಗಾಲಲ್ಲಿ ನಿಂತಿದ್ದರು. ಇವರ ವೃತ್ತಿ ಏನು, ಅವರಲ್ಲಿ ಮಹಿಳೆಯರೆಷ್ಟು ಎಂಬ ಮಾಹಿತಿಯನ್ನು ಸಂಗ್ರಹಿಸಲು ಪತ್ರದಲ್ಲಿ ಕೋರಲಾಗಿತ್ತು. 

ಪ್ರಾದೇಶಿಕ ಕಚೇರಿಯಲ್ಲಿ ಇರುವ ಸಿಬ್ಬಂದಿಯ ಜತೆಗೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಮತ್ತು ಉದ್ಯೋಗಿಗಳ ರಾಜ್ಯ ವಿಮಾ ನಿಮಗದ (ಇಎಸ್‌ಐಸಿ) ಕಚೇರಿಯ ಸಿಬ್ಬಂದಿಯನ್ನೂ ಸಮೀಕ್ಷೆ ಬಳಸಿಕೊಳ್ಳಬಹುದು ಎಂದು ಮುಖ್ಯ ಆಯುಕ್ತರ ಪತ್ರದಲ್ಲಿ ಹೇಳಲಾಗಿತ್ತು. ಇದು ಸಮೀಕ್ಷೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸಿತ್ತು.

‘ಸಮೀಕ್ಷೆಯನ್ನು ಕೈಗೊಂಡಿದ್ದರೂ ಸಿಎಲ್‌ಸಿಯಲ್ಲಿ ಈ ಬಗೆಗಿನ ಯಾವುದೇ ಮಾಹಿತಿ ಇಲ್ಲ ಎಂಬುದು ಭಾರಿ ಅನುಮಾನ ಹುಟ್ಟಿಸುತ್ತದೆ. ಸಿಎಲ್‌ಸಿ ಅಥವಾ ಸರ್ಕಾರದ ಯಾವುದಾದರೂ ಪ್ರಾಧಿಕಾರದಲ್ಲಿ ಕಾರ್ಮಿಕರಿಗೆ ಸಂಬಂಧಿಸಿ ನಿಖರವಾದ ಯಾವುದೇ ಮಾಹಿತಿ ಇಲ್ಲವೇ? ಅಥವಾ, ಈ ಮಾಹಿತಿಯನ್ನು ಬಹಿರಂಗಪಡಿಸಲು ಹಿಂದೇಟು ಹಾಕುವುದರ ಹಿಂದೆ ಏನಾದರೂ ಕಾರಣ ಇದೆಯೇ’ ಎಂದು ನಾಯಕ್‌ ಪ್ರಶ್ನಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು