ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ದೆಹಲಿಯ ಕರೋಲ್‌ಬಾಗ್‌ ಹೋಟೆಲ್‌ನಲ್ಲಿ ಅಗ್ನಿ ದುರಂತ: 17 ಮಂದಿ ದುರ್ಮರಣ

ಪ್ರಧಾನಿ ಮೋದಿ ಸಂತಾಪ; ಮೃತ ಕುಟುಂಬದ ಸದಸ್ಯರಿಗೆ ₹ 5ಲಕ್ಷ ಪರಿಹಾರ
Last Updated 12 ಫೆಬ್ರುವರಿ 2019, 19:52 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಮಧ್ಯ ದೆಹಲಿಯ ಕರೋಲ್‌ಬಾಗ್‌ ಪ್ರದೇಶದಲ್ಲಿದ್ದ ನಾಲ್ಕು ಮಹಡಿಯ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅನಾಹುತಕ್ಕೆ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೀವ ಉಳಿಸಿಕೊಳ್ಳಲು ಮಗು ಸಹಿತ ಇಬ್ಬರು ಕಟ್ಟಡದಿಂದ ಜಿಗಿದು ಬಲಿಯಾಗಿದ್ದಾರೆ.

ರಾಜಧಾನಿಯ ಹೃದಯಭಾಗದಲ್ಲಿರುವ 45 ಕೊಠಡಿಗಳಿರುವ ’ಅರ್ಪಿತ್‌ ಪ್ಯಾಲೇಸ್‌ ಹೋಟೆಲ್‌‘ನ ಎರಡನೇ ಮಹಡಿಯಲ್ಲಿ ಮಂಗಳವಾರ ಬೆಳಿಗ್ಗೆ 3.30ರ ಸುಮಾರಿಗೆ ಬೆಂಕಿ ಕಾಣಿಸಕೊಂಡಿದೆ. ಈ ವೇಳೆ ಹೋಟೆಲ್‌ನಲ್ಲಿ ಗಾಢನಿದ್ರೆಯಲ್ಲಿದ್ದ 53 ಮಂದಿ ಪೈಕಿ 17 ಮಂದಿ ಸಾವನ್ನಪ್ಪಿದ್ದು, 35 ಮಂದಿ ಗಾಯಗೊಂಡಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ.

ಮೃತರ ಪೈಕಿ 13 ಮಂದಿಯ ಗುರುತು ಪತ್ತೆಹಚ್ಚಲಾಗಿದ್ದು, ಇದರಲ್ಲಿ ಮೂವರು ಕೇರಳ, ಮತ್ತಿಬ್ಬರು ಮ್ಯಾನ್ಮಾರ್‌ ದೇಶದವರು.

’ಬೆಳಿಗ್ಗೆ 4.35ರ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಲುಪಿದ್ದು, 24ಕ್ಕೂ ಅಧಿಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ‘ ಎಂದು ಡಿಸಿಪಿ ಮಧುರ್‌ ವರ್ಮಾ ತಿಳಿಸಿದ್ದಾರೆ.

ಮ್ಯಾಜಿಸ್ಟ್ರೇಟ್‌ ತನಿಖೆ

ಅಗ್ನಿದುರಂತದ ಕುರಿತಂತೆ ದೆಹಲಿ ಗೃಹ ಸಚಿವ ಸತ್ಯೇಂದರ್‌ ಜೈನ್‌ ಅವರು ಮ್ಯಾಜಿಸ್ಟಿರಿಯಲ್‌ ತನಿಖೆಗೆ ಆದೇಶ ನೀಡಿದ್ದಾರೆ. ಅಲ್ಲದೇ, ಐದು ಮಹಡಿಗಿಂತ ಹೆಚ್ಚಿರುವ ಎಲ್ಲ ಕಟ್ಟಡಗಳ ತಪಾಸಣೆ ನಡೆಸಿ, ಅಗ್ನಿಸುರಕ್ಷತೆ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತಂತೆ ವಾರದ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮದುವೆಗೆ ಬಂದವರು ಬೆಂದು ಹೋದರು: ಕೇರಳದ ಎರ್ನಾಕುಲಂ ಜಿಲ್ಲೆಯ 13 ಮಂದಿ ಗಾಜಿಯಾಬಾದ್‌ನಲ್ಲಿ ನಡೆಯಲಿರುವ ಮದುವೆಯೊಂದರಲ್ಲಿ ಭಾಗವಹಿಸಲು ಇದೇ ಹೋಟೆಲ್‌ನ ನಾಲ್ಕು ಕೊಠಡಿಯಲ್ಲಿ ತಂಗಿದ್ದರು. ಬೆಳಿಗ್ಗೆ ಮದುವೆಗೆ ಹೊರಡಲು ತಯಾರಿಯಲ್ಲಿದ್ದ ಸಂದರ್ಭದಲ್ಲೇ ದುರಂತ ಸಂಭವಿಸಿದ ಕಾರಣ, ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಉಳಿದ 10 ಮಂದಿ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT