ಸೋಮವಾರ, ಮೇ 17, 2021
23 °C
ರಾಷ್ಟ್ರೀಯ ವಿಷಯಗಳಿಗೆ ಆದ್ಯತೆ ನೀಡಿದ್ದ ಬಿಜೆಪಿ ಅಧಿಕಾರದಿಂದ ಕೆಳಕ್ಕೆ

ಜಾರ್ಖಂಡ್‌ ವಿಧಾನಸಭಾ ಚುನಾವಣೆ: ಸ್ಥಳೀಯರ ನಿರ್ಲಕ್ಷ್ಯದಿಂದ ಬಿಜೆಪಿಗೆ ಸೋಲು

ಅಭಯ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ರಾಂಚಿ: ಅಯೋಧ್ಯೆ ರಾಮ ಮಂದಿರ, 370ನೇ ವಿಧಿ, ಪೌರತ್ವ (ತಿದ್ದುಪಡಿ) ಕಾಯ್ದೆ... ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಾಗಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಭಾಷಣಗಳಲ್ಲಿ ಕೇಳಿಬರುತ್ತಿದ್ದ ವಿಷಯಗಳಿವು.

ಆದರೆ ಉದ್ಯೋಗ ನಷ್ಟ, ನಿರುದ್ಯೋಗ, ಭೂ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪಗಳು ಸ್ಥಳೀಯ ಮಟ್ಟದಲ್ಲಿ ಚರ್ಚೆಯ ವಿಷಯಗಳಾಗಿದ್ದವು. ಇದನ್ನು ಅರಿತುಕೊಳ್ಳದೆ, ಭಾವನಾತ್ಮಕ ವಿಷಯಗಳತ್ತ ಗಮನ ಹರಿಸಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

‘370ನೇ ವಿಧಿ ಇಟ್ಟುಕೊಂಡು ನಾವು ಮಾಡುವುದೇನು? ಅದರಿಂದ ನಮಗೆ ನೌಕರಿ ಸಿಗುತ್ತಾ? ಜಾರ್ಖಂಡ್‌ನಲ್ಲಿ 700 ಕಾರ್ಖಾನೆಗಳು ಮುಚ್ಚಿರುವಾಗ, ಎಲ್ಲೋ ಮಂದಿರ ನಿರ್ಮಿಸುವುದರಿಂದ ನಮಗೇನು ಲಾಭ’ ಚುನಾವಣಾ ಸಂದರ್ಭದಲ್ಲಿ ಸಮೀಕ್ಷೆಗೆ ಹೋಗಿದ್ದ ‘ಪ್ರಜಾವಾಣಿ’ ಪ್ರತಿನಿಧಿಗೆ ಮತದಾರರೊಬ್ಬರು ಕೇಳಿದ್ದ ಪ್ರಶ್ನೆಗಳಿವು.

ಬಿಜೆಪಿ ಸರ್ಕಾರವು ಬುಡಕಟ್ಟು ಜನರ ಹಕ್ಕುಗಳಿಗೆ ಮಾರಕವಾಗುವ ನೀತಿಗಳನ್ನು ಜಾರಿಗೆ ತಂದಿತು. 2016ರಲ್ಲಿ ದಾಸ್ ಸರ್ಕಾರವು ಛೋಟಾನಾಗಪುರ ಮತ್ತು ಸಂತಾಲ್ ಟೆನೆನ್ಸಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಇರಿಸಿತು. ಬುಡಕಟ್ಟು ಪ್ರದೇಶದ ಜಮೀನನ್ನು ರಸ್ತೆ, ಕಾಲುವೆ, ಆಸ್ಪತ್ರೆ ಸೇರಿದಂತೆ ರಾಜ್ಯ ಸರ್ಕಾರದ ಯೋಜನೆಗಳಿಗೆ ಬಳಸುವ ಪ್ರಸ್ತಾವ ಈ ತಿದ್ದುಪಡಿಯಲ್ಲಿತ್ತು.

ಈ ಮಸೂದೆ ಅಂಗೀಕಾರವಾದರೂ, ರಾಜ್ಯಪಾಲರು ತಿರಸ್ಕರಿಸಿದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ತಮ್ಮ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯ ಬುಡಕಟ್ಟು ಜನರಲ್ಲಿ ಆವರಿಸಿತ್ತು. ಬುಡಕಟ್ಟು ಜನರ ಈ ಕಳವಳವನ್ನು ಚುನಾವಣೆವರೆಗೂ ಕಾಯ್ದುಕೊಳ್ಳುವಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್‌ ಸಫಲವಾದವು.

ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಸರಯೂ ರಾಯ್ ಅವರು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರವನ್ನೂ ಬರೆದಿದ್ದರು. ಇದನ್ನು ಮೋದಿ ಕಡೆಗಣಿಸಿದರು. ಈ ಚುನಾವಣೆಯಲ್ಲಿ ರಾಯ್ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು. ಭ್ರಷ್ಟಾಚಾರದ ಆರೋಪವನ್ನು ಕಡೆಗಣಿಸಿದ್ದು ಬಿಜೆಪಿ ಸೋಲಿಗೆ ಮತ್ತೊಂದು ಕಾರಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು