ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂಸಾತ್ಮಕ ಸಸ್ಯಾಹಾರ’ಕ್ಕೆ ಗಾಂಧೀಜಿ ವಿರೋಧಿ

‘ಗಾಂಧೀಸ್ ಸರ್ಚ್ ಫಾರ್ ದಿ ಪರ್ಫೆಕ್ಟ್ ಡಯಟ್’ ಕೃತಿಯಲ್ಲಿ ಉಲ್ಲೇಖ
Last Updated 3 ಜೂನ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಹಿಂಸಾತ್ಮಕ ಸಸ್ಯಾಹಾರ ಪದ್ಧತಿ’ಗೆ ಮಹಾತ್ಮ ಗಾಂಧಿ ವಿರೋಧಿಯಾಗಿದ್ದರು. ಹಿಂದು ಅಥವಾ ಮುಸ್ಲಿಮರನ್ನು ಮಾಂಸಾಹಾರ ಸೇವನೆಯಿಂದ ತಡೆದಿದ್ದಾಗಿ ಹೇಳಿಕೊಂಡಿದ್ದ ಕಾರ್ಯಕರ್ತರನ್ನು ಅವರು ಸಾರ್ವಜನಿಕವಾಗಿ ಖಂಡಿಸಿದ್ದರು–ಎನ್ನುವ ಅಂಶವನ್ನು ‘ಗಾಂಧೀಸ್ ಸರ್ಚ್ ಫಾರ್ ದಿ ಪರ್ಫೆಕ್ಟ್ ಡಯಟ್’ ಪುಸ್ತಕ ಬಹಿರಂಗಪಡಿಸಿದೆ.

‘ಮಾಂಸ ಮತ್ತು ಮೀನು ಸೇವನೆಗೆ ಬಲವಂತವಾಗಿ ನಿರ್ಬಂಧ ಹೇರುತ್ತಿದ್ದ ಗುಂಪೊಂದನ್ನು ಟೀಕಿಸಿದ್ದ ಗಾಂಧೀಜಿ, ಅಂತಹವರು ‘ಅತಿಯಾದ ಹೊಟ್ಟೆಕಿಚ್ಚಿನ ಸಸ್ಯಾಹಾರಿಗಳು’ ಎಂದು ಭಾವಿಸುತ್ತಿದ್ದರು’ ಎನ್ನುವುದಾಗಿ ಪುಸ್ತಕದಲ್ಲಿ ಹೇಳಲಾಗಿದೆ.

‘ಗೋವುಗಳ ರಕ್ಷಣೆಗೆ ಹಿಂಸಾಮಾರ್ಗ ಅನುಸರಿಸುವುದನ್ನು ವಿರೋಧಿಸುತ್ತಿದ್ದ ಗಾಂಧೀಜಿ, ಅದೇ ರೀತಿಮುಸ್ಲಿಮರು ಕ್ರೂರಿಗಳು ಎಂದು ತೋರಿಸಲು ಗೋರಕ್ಷಣೆಯನ್ನು
ಬಳಸಿಕೊಳ್ಳುವುದಕ್ಕೂವಿರೋಧಿಸುತ್ತಿದ್ದರು. ಗೋಹತ್ಯೆ ಕುರಿತು ವಿರೋಧವಿದ್ದರೂ ಅವರು ಮಾಂಸಾಹಾರಿಗಳ ಜತೆ ಮುಕ್ತವಾಗಿ ಬೆರೆಯುತ್ತಿದ್ದರು’ ಎಂದು ಅಮೆರಿಕದ ಇತಿಹಾಸ ತಜ್ಞ ನಿಕೊ ಸ್ಲೇಟ್ ಅವರು ರಚಿಸಿರುವ ಈ ಕೃತಿಯಲ್ಲಿ ಹೇಳಲಾಗಿದೆ.

‘ಗೋಮಾಂಸ ಸೇವನೆಗೆ ಮಹಾತ್ಮ ಗಾಂಧೀಜಿ ಅವರ ವಿರೋಧ ಇತ್ತು. ಆದರೆ ಜನರು ತಮ್ಮ ಇಷ್ಟದ ಆಹಾರ ಸೇವಿಸದಂತೆ ತಡೆಯುವುದು ‘ಹಿಂಸೆ’ಗಿಂತ ಕಡಿಮೆ ಏನಲ್ಲ ಎನ್ನುವ ಭಾವನೆ ಅವರಲ್ಲಿತ್ತು’ ಎಂದು ಪುಸ್ತಕದಲ್ಲಿ ಸ್ಲೇಟ್ ಬರೆದಿದ್ದಾರೆ.

ಅಹಿಂಸೆ ಮನುಷ್ಯರಿಗೂ ಅನ್ವಯ:‘ನಾನು ಕಟ್ಟಾ ಸಸ್ಯಾಹಾರಿ ಹಾಗೂ ಆಹಾರ ಸುಧಾರಕ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಅಹಿಂಸೆ ಎನ್ನುವುದು ಪ್ರಾಣಿಗಳಿಗೆ ಅನ್ವಯವಾದಷ್ಟೇ ಮನುಷ್ಯರಿಗೂ ಅನ್ವಯಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿಲ್ಲ. ಮಾಂಸಾಹಾರಿಗಳ ಜತೆ
ನಾನು ಮುಕ್ತವಾಗಿ ಬೆರೆಯುತ್ತೇನೆ’ ಎಂಬ ಗಾಂಧೀಜಿ ಮಾತುಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

‘ವ್ಯಕ್ತಿ ತಾನು ಇಷ್ಟಪಡುವ ಆಹಾರ ತಿನ್ನುವುದನ್ನು ತಡೆಯುವುದು ಅಹಿಂಸೆಯಲ್ಲ, ಅದು ಹಿಂಸೆ. ಗೋರಕ್ಷಣೆಗಾಗಿ ಮುಸ್ಲಿಂ ಸೋದರರನ್ನು ಹತ್ಯೆ ಮಾಡುವುದು ಸಹ ಅದೇ ರೀತಿ’ ಎಂದು ಗಾಂಧಿ ಹೇಳಿದ್ದರು.

‘ಸ್ವಾತಂತ್ರ್ಯಾನಂತರದಭಾರತದಲ್ಲಿ ‘ವಿಭಜನೆ ಸೃಷ್ಟಿಸುವ ವಿಷಯಗಳಲ್ಲಿ’ ಗೋಹತ್ಯೆ ಸಹ ಒಂದು. 2015ರಲ್ಲಿ ಗೋಹತ್ಯೆ ಮಾಡಿದ್ದಾರೆ ಎನ್ನುವ ಶಂಕೆ ಮೇಲೆ ದಾದ್ರಿಯಲ್ಲಿ 52 ವರ್ಷದ ಮೊಹಮ್ಮದ್ ಅಖ್ಲಾಕ್ ಮೇಲೆ ಗುಂಪುದಾಳಿ ನಡೆಸಿ ಹತ್ಯೆ ಮಾಡಲಾಯಿತು. ಇದಾದ ಬಳಿಕ ಈ ವಿಷಯ ಪುನಃ ಮುನ್ನೆಲೆಗೆ
ಬಂದಿತು’ ಎಂದು ಸ್ಲೇಟ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಈ ಘಟನೆ ನಂತರ ಗೋವುಗಳ ಕಳ್ಳಸಾಗಾಣಿಕೆ ಹಾಗೂ ಹತ್ಯೆ ವದಂತಿಯಿಂದಾಗಿ ಹಲವಾರು ಗುಂಪುದಾಳಿ ಪ್ರಕರಣಗಳು ನಡೆದವು. 2017ರಲ್ಲಿ ಅಲ್ವಾರ್‌ನಲ್ಲಿ 55 ವರ್ಷದ ಪೆಹ್ಲು ಖಾನ್ ಎನ್ನುವವರನ್ನು 200 ಮಂದಿ ಗೋರಕ್ಷಕರ ಗುಂಪು ಹತ್ಯೆ ಮಾಡಿತು ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

‘ನೈತಿಕತೆ ಪ್ರಶ್ನಿಸುತ್ತಿದ್ದರು’

‘ಗಾಂಧೀಜಿ ಸಹಿಷ್ಣುತೆಗೆ ಬದ್ಧರಾಗಿದ್ದರೂ ಸಹ, ತಮ್ಮ ಮಾಂಸಾಹಾರಿ ಸ್ನೇಹಿತರ ಆಹಾರ ಪದ್ಧತಿಯ ನೈತಿಕತೆಯನ್ನು ಪ್ರಶ್ನಿಸುವುದರಿಂದ ಹಿಂದೆಸರಿಯಲಿಲ್ಲ. ಗೋವುಗಳಿಗೆ ಕಾಳಜಿ ತೋರುವುದರಿಂದ ಇಡೀ ಪ್ರಾಣಿಸಂಕುಲದ ಕುರಿತು ಸಹಾನುಭೂತಿ ಹೊಂದಲು ಪ್ರೇರಣೆ ನೀಡಬಹುದು ಎಂದು ಅವರು ಭಾವಿಸಿದ್ದರು. ಮಾಂಸಾಹಾರಿಗಳ ನಿಲುವು ಬದಲಿಸಲು ಕರುಣೆ ಮತ್ತು ಸತ್ಯಾಗ್ರಹದ ಮಾರ್ಗವನ್ನು ಅವರು ಪ್ರತಿಪಾದಿಸುತ್ತಿದ್ದರು’ ಎಂದು ಕೃತಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT