ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಫಾ ಸೋಂಕು: ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ

ರಾಯಚೂರಿನ ರಿಮ್ಸ್ ಹಾಗೂ ನವೋದಯ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ಆರಂಭ
Last Updated 25 ಮೇ 2018, 5:18 IST
ಅಕ್ಷರ ಗಾತ್ರ

ರಾಯಚೂರು: ‘ಜಿಲ್ಲೆಯಲ್ಲಿ ನಿಫಾ ವೈರಸ್‌ ಪ್ರಕರಣ ಇಲ್ಲಿಯವರೆಗೂ ಪತ್ತೆ ಆಗಿಲ್ಲ. ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದಕ್ಕೆ ತಜ್ಞ ವೈದ್ಯರಿಗೆ ಮತ್ತು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದರು.

ರಾಜ್ಯದ ವಿವಿಧೆಡೆ ‘ನಿಫಾ ವೈರಸ್ ಸೋಂಕು’ ಹರಡುತ್ತಿರುವುದರಿಂದ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲಿಯೂ ನಿಫಾ ಸೋಂಕು ಕಾಣಿಸಿಕೊಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿನ ಜಿಲ್ಲಾಡಳಿತವು ಮುನ್ನೆಚ್ಚರಿಕೆ ವಹಿಸಿದೆ. ದೇಶದಲ್ಲಿ ಕೇರಳದಲ್ಲಿ ನಿಫಾ ಸೋಂಕು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಗರದಲ್ಲಿರುವ ಕೇರಳ ರಾಜ್ಯದ ನಿವಾಸಿಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್‌) ಹಾಗೂ ನವೋದಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಿಫಾ ಶಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಪ್ರತ್ಯೇಕ ವಿಭಾಗಗಳನ್ನು ಆರಂಭಿಸಲಾಗಿದೆ. ಒಂದು ವೇಳೆ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ರಕ್ತದ ಮಾದರಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಶಂಕಿತ ಪ್ರಕರಣಗಳ ನಿರ್ವಹಣೆಗಾಗಿ ಪ್ರತ್ಯೇಕ ತಜ್ಞರ ತಂಡವು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನೀರಾ ಇಳಿಸುವುದಕ್ಕೆ ಅನುಮತಿ ಇರುವುದಿಲ್ಲ. ಆದರೂ ಅನಧಿಕೃತವಾಗಿ ನೀರಾ ಇಳಿಸುವವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಬಾವಲಿಗಳ ಆವಾಸಸ್ಥಾನಕ್ಕೆ ಧಕ್ಕೆ ಆಗುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಅವುಗಳ ಆವಾಸ ಸ್ಥಾನಕ್ಕೆ ಯಾವುದೇ ರೀತಿಯ ಧಕ್ಕೆ ಮಾಡದೇ ಇದ್ದಲ್ಲಿ ಸೋಂಕು ನಿಯಂತ್ರಣ ಸಾಧ್ಯವಿದೆ ಎಂದು ಹೇಳಿದರು.

ರಾಯಚೂರಿನ ವಾಸವಿ ನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಬಾವಲಿಗಳು ವಾಸವಿದೆ. ಅಂತಹ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ನಿಗಾ ಇಡಲು ಪ್ರತಿ ಮನೆಗೂ ಭೇಟಿ ನೀಡಿ ಸೋಂಕು ಕುರಿತು ಜಾಗೃತಿ ಕಾರ್ಯ ಮೂಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಲಕ್ಷ್ಮೀ ಬಾಯಿ, ನಗರಸಭೆ ಪೌರಾಯುಕ್ತ ರಮೇಶ ನಾಯಕ, ಡಾ.ನಾಗರಾಜ, ಡಾ.ಸುದೇಂದ್ರ ಬಾಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಕೇರಳದ ವಿದ್ಯಾರ್ಥಿಗಳ ತಪಾಸಣೆ

ರಿಮ್ಸ್‌ ಹಾಗೂ ನವೋದಯ ಮೆಡಿಕಲ್‌ ಮತ್ತು ನರ್ಸಿಂಗ್‌ ಕಾಲೇಜುಗಳಲ್ಲಿ ಓದುತ್ತಿರುವ ಕೇರಳ ರಾಜ್ಯದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಲ್ಲಿ ರಕ್ತ ತಪಾಸಣೆಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಂದಿ ಸಾಕಾಣಿಕೆ ಕೇಂದ್ರದ ಸಿಬ್ಬಂದಿಗೆ ಗಾಯಗಳಾದರೆ ಚಿಕಿತ್ಸೆ ನೀಡಬೇಕು. ಹಂದಿ ಸಾಕಾಣಿಕೆದಾರರಿಗೆ ಜಾಗೃತಿ ನಡೆಸುವುದು, ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕಿನ ಕುರಿತು ಜಾಗೃತಿ ಕಾರ್ಯ ಕೈಗೊಳ್ಳುವ ಬಗ್ಗೆ ತಿಳಿಸಿದರು.

**
ಮಳೆಗಾಲ ಸಮೀಪಿಸುತ್ತಿದ್ದು, ನಗರದಲ್ಲಿ ಸ್ವಚ್ಛತೆ ಕಾಪಾಡಬೇಕು. ಶೇ 90ರಷ್ಟು ಹಂದಿಗಳ ಸ್ಥಳಾಂತರವಾಗಿದ್ದು, ಸೋಂಕು ಹರಡದಂತೆ ತಡೆಯಬೇಕು
– ಡಾ.ಬಗಾದಿ ಗೌತಮ್‌,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT