ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಿಂದ ಮತ್ತೆ ‘ಗೋಲ್ಡನ್ ಚಾರಿಯಟ್’

ಪ್ರವಾಸಿಗರ ನೆರವಿಗೆ ರೈಲು ಪುನರಾರಂಭ ಒಪ್ಪಂದ
Last Updated 19 ನವೆಂಬರ್ 2019, 19:33 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಗೋಲ್ಡನ್ ಚಾರಿಯಟ್ ರೈಲಿನ ಸಂಚಾರ ಮುಂದಿನ ಮಾರ್ಚ್‌ ವೇಳೆಗೆ ಪುನರಾರಂಭವಾಗಲಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ವು ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ)ದ ಜೊತೆ ಈ ಕುರಿತ ಒಪ್ಪಂದ ಮಾಡಿಕೊಂಡಿದೆ.

ಇಲ್ಲಿನ ರೈಲು ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಕೆಎಸ್‌ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ಹಾಗೂ ಐಆರ್‌ಸಿಟಿಸಿ ನಿರ್ದೇಶಕಿ ರಜನಿ ಹಸೀಜಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ರೈಲು ಸಂಚಾರದ ನಿರ್ವಹಣೆ ಹಾಗೂ ಮಾರುಕಟ್ಟೆ ಹೊಣೆಯನ್ನು ಐಆರ್‌ಸಿಟಿಸಿ ವಹಿಸಿಕೊಳ್ಳಲಿದ್ದು, ಆದಾಯ ಹಂಚಿಕೆ ಮಾದರಿಯಲ್ಲಿ ರೈಲು ಸಂಚಾರದ ಒಪ್ಪಂದ ಏರ್ಪಟ್ಟಿದೆ.

ರಾಜ್ಯದ ಬೆಂಗಳೂರಿನಿಂದ ಹೊರಡುವ ಗೋಲ್ಡನ್‌ ಚಾರಿಯಟ್‌ ರೈಲು ಮೈಸೂರು, ಶ್ರವಣಬೆಳಗೊಳ, ಹಂಪಿ, ವಿಜಯಪುರ, ಬಾದಾಮಿ ಮತ್ತಿತರ ಪ್ರಸಿದ್ಧ ಪ್ರವಾಸಿ ತಾಣಗಳಲ್ಲದೆ, ಗೋವಾದ ಕಡಲ ಕಿನಾರೆಗೆ ತೆರಳಲಿದೆ.ಕೈಗೆಟುಕುವ ದರಕ್ಕೆ ಈ ರೈಲು ಸಂಚಾರದ ಸೌಲಭ್ಯ ದೊರೆಯುವಂತಾಗಲಿದೆ ಎಂದು ಸಮಾರಂಭದಲ್ಲಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಸರ್ಕಾರ ಎಲ್ಲ
ಅನುಕೂಲಗಳನ್ನೂ ಕಲ್ಪಿಸುತ್ತಿದೆ ಎಂದು ರಾಜ್ಯದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.

ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 2008ರಲ್ಲಿ ಆರಂಭಿಸಿದ್ದ ಈ ರೈಲಿನ ಸಂಚಾರವು ನಿರ್ವಹಣೆ ಕೊರತೆ ಮತ್ತಿತರ ಕಾರಣಗಳಿಂದಾಗಿ 2018ರ ಮಾರ್ಚ್‌ನಿಂದ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT