ಭಾನುವಾರ, ಜನವರಿ 17, 2021
29 °C
ಕೇಂದ್ರದ ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ: ಚರ್ಚೆಗೆ ಚಾಲನೆ

ಶಾ, ಸ್ಮೃತಿಗೆ ಕೇಂದ್ರದಲ್ಲಿ ದೊಡ್ಡ ಹೊಣೆ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದಿರುವ ಬಿಜೆಪಿ ಎರಡನೇ ಅವಧಿಗೆ ಆಯ್ಕೆಯಾಗಿದೆ. ಈಗ ಹೊಸ ಸರ್ಕಾರ ಹೇಗಿರಬಹುದು ಎಂಬ ಚರ್ಚೆ ಶುರುವಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೂ ಹೊಸ ಸಂಪುಟದಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ.

ಗೃಹ, ಹಣಕಾಸು, ವಿದೇಶಾಂಗ ಮತ್ತು ರಕ್ಷಣೆ ಕೇಂದ್ರದ ನಾಲ್ಕು ಪ್ರಮುಖ ಸಚಿವಾಲಯಗಳು. ಈ ನಾಲ್ಕರಲ್ಲಿ ಒಂದು ಸ್ಥಾನ ಶಾ ಅವರಿಗೆ ದೊರೆಯಬಹುದು ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ. 

ಹಿಂದಿನ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಮತ್ತು ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್‌ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳಿವೆ. ಅವರು ಹೊಸ ಸರ್ಕಾರದ ಭಾಗವಾಗಲಿದ್ದಾರೆಯೇ ಎಂಬ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆಯುತ್ತಿದೆ. 

ರಾಜ್ಯಸಭಾ ಸದಸ್ಯರಾಗಿರುವ ಜೇಟ್ಲಿ ಅವರು 2014ರ ಚುನಾವಣೆಯಲ್ಲಿ ಅಮೃತಸರದಲ್ಲಿ ಸೋತಿದ್ದರು. ಸುಷ್ಮಾ ಅವರು ಮಧ್ಯ ಪ್ರದೇಶದ ವಿದಿಶಾದಲ್ಲಿ ಗೆದ್ದಿದ್ದರು. ಆದರೆ, ಈ ಬಾರಿ ಅವರು ಲೋಕಸಭೆಗೆ ಸ್ಪರ್ಧಿಸಿಲ್ಲ. ಹೊಸ ಸರ್ಕಾರಕ್ಕೆ ಸೇರುವ ಬಗ್ಗೆ ಈ ಇಬ್ಬರು ನಾಯಕರೂ ಈವರೆಗೆ ಏನನ್ನೂ ಹೇಳಿಲ್ಲ. 

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ್ದ ಶಾ ಅವರು, ಹೊಸ ಸರ್ಕಾರಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಪಕ್ಷ ಹಾಗೂ ಪ್ರಧಾನಿಯ ವಿವೇಚನೆಗೆ ಬಿಟ್ಟ ವಿಚಾರ ಎಂದಿದ್ದರು. 

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಹತ್ವದ ಅದೇ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಅವರ ‘ಕುಟುಂಬದ ಭದ್ರಕೋಟೆ’ ಎಂದೇ ಪರಿಗಣಿಸಲಾಗಿದ್ದ ಅಮೇಠಿಯಲ್ಲಿ ಸೋಲಿಸಿರುವ ಸ್ಮೃತಿ ಇರಾನಿ ಅವರಿಗೆ ದೊಡ್ಡ ಹೊಣೆಗಾರಿಕೆಯ ಉಡುಗೊರೆ ಸಿಗಲಿದೆ ಎಂಬ ನಿರೀಕ್ಷೆ ಇದೆ. ಕಳೆದ ಸರ್ಕಾರದಲ್ಲಿ ಅವರು ಜವಳಿ ಖಾತೆ ಹೊಂದಿದ್ದರು. 

ಕಳೆದ ಸಂಪುಟದಲ್ಲಿದ್ದ ಹಿರಿಯ ಸಚಿವರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ರವಿಶಂಕರ್ ಪ್ರಸಾದ್‌, ಪೀಯೂಷ್‌ ಗೋಯಲ್‌, ನರೇಂದ್ರ ಸಿಂಗ್‌ ತೋಮರ್‌, ಪ್ರಕಾಶ್‌ ಜಾವಡೇಕರ್‌ ಮುಂತಾದವರು ಪ್ರಮುಖ ಖಾತೆಗಳನ್ನು ಪಡೆಯಬಹುದು.  

ಮಿತ್ರ ಪಕ್ಷಗಳಾದ ಶಿವಸೇನಾ ಮತ್ತು ಜೆಡಿಯು ಚುನಾವಣೆಯಲ್ಲಿ ಉತ್ತಮ ಸಾಧನೆ ದಾಖಲಿಸಿವೆ. ಕ್ರಮವಾಗಿ 18 ಮತ್ತು 16 ಕ್ಷೇತ್ರಗಳಲ್ಲಿ ಗೆದ್ದಿವೆ. ಈ ಪಕ್ಷಗಳಿಗೆ ಉತ್ತಮ ಪ್ರಾತಿನಿಧ್ಯ ದೊರೆಯುವ ಸಾಧ್ಯತೆ ಇದೆ. 

ಬಿಜೆಪಿ ಅಚ್ಚರಿಯ ಸಾಧನೆ ದಾಖಲಿಸಿದ ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣದ ಹೊಸ ಮುಖಗಳು ಹೊಸ ಸರ್ಕಾರದಲ್ಲಿ ಮಹತ್ವದ ಹುದ್ದೆಗಳಿಗೆ ಏರಬಹುದು. 

ಪಕ್ಷವು ಎರಡನೇ ಹಂತದ ನಾಯಕತ್ವವನ್ನು ಬೆಳೆಸುವ ಗುರಿ ಹೊಂದಿದೆ. ಹಾಗಾಗಿ ಈ ಬಾರಿ ಸಂಪುಟದಲ್ಲಿ ಯುವ ಮುಖಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಬಹುದು ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. 

ಇಂದು ಮೋದಿ ಆಯ್ಕೆ

ಬಿಜೆಪಿ ಸಂಸದೀಯ ಪಕ್ಷ ಮತ್ತು ಎನ್‌ಡಿಎ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲು ನೂತನವಾಗಿ ಆಯ್ಕೆಯಾಗಿರುವ ಎನ್‌ಡಿಎ ಸಂಸದರು ಶನಿವಾರ ಸಭೆ ಸೇರಲಿದ್ದಾರೆ. ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಈ ಸಭೆ ನಡೆಯಲಿದೆ. 

ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭಿಸುವುದಕ್ಕಾಗಿ ಮೋದಿ ಅವರು ಪ್ರಧಾನಿ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. 16ನೇ ಲೋಕಸಭೆಯನ್ನು ವಿಸರ್ಜಿಸಲು ಕೇಂದ್ರ ಮಂತ್ರಿಪರಿಷತ್‌ ಸಭೆಯು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಶಿಫಾರಸು ಮಾಡಿದೆ. 

ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸತತ ಎರಡನೇ ಅವಧಿಗೆ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ ಪಕ್ಷದ ಜವಾಹರಲಾಲ್‌ ನೆಹರೂ ಮತ್ತು ಇಂದಿರಾ ಗಾಂಧಿ ಮಾತ್ರ ಸತತ ಎರಡನೇ ಅವಧಿಗೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಏರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು