ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಕೋಮು ಗಲಭೆ, ಹೈಲಾಕಂಡಿ ಪಟ್ಟಣ ಪ್ರಕ್ಷುಬ್ಧ: ಕರ್ಫ್ಯೂ ಹೇರಿಕೆ

14 ಮಂದಿಗೆ ಗಾಯ: ಒಂದು ಸಾವು
Last Updated 11 ಮೇ 2019, 18:36 IST
ಅಕ್ಷರ ಗಾತ್ರ

ಹೈಲಾಕಂಡಿ: ಕೋಮು ಗಲಭೆಗೆ ಒಬ್ಬ ಮೃತಪಟ್ಟು, 14 ಜನ ಗಾಯಗೊಂಡಿರುವ ಘಟನೆ ಅಸ್ಸಾಂನ ಹೈಲಾಕಂಡಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

ಶಾಂತಿ ಸುವ್ಯವಸ್ಥೆ ಕಾಪಾಡಲು ಎರಡು ದಿನಗಳ ಕರ್ಫ್ಯೂ ಹೇರಲಾಗಿದ್ದು, ಪೊಲೀಸ್‌ ಮತ್ತು ಸೇನಾ ಪಡೆ ನಿಯೋಜಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಸೂಚಿಸಿದ್ದಾರೆ.

ಪಟ್ಟಣದ ಕಾಳಿ ಬಾರಿ ಪ್ರದೇಶದ ಮಸೀದಿ ಎದುರಿನ ರಸ್ತೆಯಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಜನರು ಅಣಿಯಾಗಿದ್ದರು. ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ಕಾರಣಕ್ಕೆ ಗಲಭೆ ಮಧ್ಯಾಹ್ನ 1ರ ಸುಮಾರು ಆರಂಭವಾಯಿತು.ಪರಿಸ್ಥಿತಿ ನಿಯಂತ್ರಣಕ್ಕೆ ಎರಡು ದಿನಗಳ ಕಾಲ ಕರ್ಫ್ಯೂ ಹೇರಲಾಗಿದ್ದು, ಸಿಆರ್‌ಪಿಎಫ್‌ ಮತ್ತು ಅಸ್ಸಾಂ ರೈಫಲ್ಸ್ಸಹಾಯ ಪಡೆಯಲಾಗಿದೆ. ತ್ವರಿತ ಗತಿಯಲ್ಲಿ ಗಲಭೆ ನಿಯಂತ್ರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೀರ್ತಿ ಜಲ್ಲೀ ಹೇಳಿದ್ದಾರೆ

ಘಟನೆಯಲ್ಲಿಸುಮಾರು 15 ಜನ ಗಾಯಗೊಂಡಿದ್ದು ಹತ್ತಿರದ ಸಿಲ್ಚಾರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತನನ್ನು ಜಶೀಂ ಉದ್ದೀನ್‌ (28) ಎಂದು ಗುರುತಿಸಲಾಗಿದ್ದು ಮೂವರ ಸ್ಥಿತಿ ಚಿಂತಾಜನಕವಾಗಿದೆ. 15 ವಾಹನಗಳು ಜಖಂ ಆಗಿವೆ. 12 ವ್ಯಾಪಾರ ಮಳಿಗೆಗಳಿಗೆ ಹಾನಿಯಾಗಿದೆಯಲ್ಲದೆ ಪಟ್ಟಣದ ಹಲವು ಭಾಗಗಳಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಸೇನೆಯ ಸಹಾಯ ಕೋರಿದೆ ಎಂದು ಸರ್ಕಾರಿ ಮೂಲಗಳು ದೃಢಪಡಿಸಿವೆ.

ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಜನರಲ್ಲಿ ಮನವಿ ಮಾಡಿದ್ದು, ಸೌಹಾರ್ದ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್‌ ಬೊರಾ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಅಲ್ಲದೆ, ಪರಿಸರ ಸಚಿವ ಪರಿಮಲ್‌ ಶುಕ್ಲವೈದ್ಯ, ಎಡಿಜಿಪಿ ಮುಖೇಶ್‌ ಅಗರ್‌ವಾಲಾ, ಬರಾಕ್‌ ಕಣಿವೆ ಪ್ರದೇಶದ ಆಯುಕ್ತ ಅನ್ವರುದ್ದೀನ್‌ ಚೌಧರಿ ಅವರಿಗೆ ಪರಿಸ್ಥಿತಿ ನಿಯಂತ್ರಿಸುವ ಜವಾಬ್ದಾರಿ ನೀಡಿದ್ದಾರೆ.

ಕರ್ಫ್ಯೂ ವಿಸ್ತರಣೆ
ಭಾನುವಾರ ಸಂಜೆ 7ರವರೆಗೆ ಕರ್ಫ್ಯೂ ವಿಸ್ತರಿಸಲಾಗಿದ್ದು,ಸಚಿವ ಶುಕ್ಲವೈದ್ಯ ಅವರು ಗಾಳಿಸುದ್ದಿಗಳಿಗೆ ಮಹತ್ವ ನೀಡದಂತೆ ಜನರಿಗೆ ಮನವಿ ಮಾಡಿದ್ದಾರೆ. ಸುಳ್ಳು ಸುದ್ದಿ ಪ್ರಸಾರ ನಿಯಂತ್ರಣಕ್ಕೆ ಶುಕ್ರವಾರ ರಾತ್ರಿಯಿಂದಅಂತರ್ಜಾಲ ಸೇವೆ ನಿಷೇಧಿಸಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಬೊರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT