ಶನಿವಾರ, ಅಕ್ಟೋಬರ್ 19, 2019
27 °C
ಬೆಂಗಳೂರು

ಎಚ್‌ಎಎಲ್‌: ತೇಜಸ್‌ ಏರಿದ ರಾಜನಾಥ್‌ ಸಿಂಗ್‌; 30 ನಿಮಿಷ ಯಶಸ್ವಿ ಹಾರಾಟ

Published:
Updated:

ಬೆಂಗಳೂರು: ದೇಶೀಯ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇದೇ ಮೊದಲ ಬಾರಿಗೆ ಹಾರಾಟ ನಡೆಸಲಿದರು.

ಗುರುವಾರ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದ ರಾಜನಾಥ್‌ ಸಿಂಗ್‌ ಅವರು ಯುದ್ಧ ವಿಮಾನದ ಪೈಲಟ್‌ ಧಿರಿಸಿನಲ್ಲಿ ತೇಜಸ್‌ನ ಕೋ-ಪೈಲಟ್‌ ಸ್ಥಾನದಲ್ಲಿ ಕುಳಿತರು. ಹಾರಾಟಕ್ಕೂ ಮುನ್ನ ಸಂತಸದಿಂದ ಕೈಬೀಸಿದರು. 

ಇದನ್ನೂ ಓದಿ: ‘ತೇಜಸ್‌’ ನೌಕಾಪಡೆ ಆವೃತ್ತಿಯ ಪರೀಕ್ಷೆ ಯಶಸ್ವಿ

ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದಲ್ಲಿ ಎರಡು ಸೀಟರ್‌ಗಳ ಯುದ್ಧ ವಿಮಾನದಲ್ಲಿ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಹಾರಾಟ ನಡೆಸಿ ವೇಗದ ಅನುಭವ ಪಡೆದಿದ್ದರು. 

ಸುಮಾರು 30 ನಿಮಿಷ ಹಾರಾಟ ನಡೆಸುವ ಮೂಲಕ ತೇಜಸ್‌ ಏರಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ರಾಜನಾಥ್‌ ಸಿಂಗ್‌ ಭಾಗಿಯಾದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಉತ್ಪನ್ನಗಳ ಪ್ರದರ್ಶನದಲ್ಲಿಯೂ ರಾಜನಾಥ್‌ ಸಿಂಗ್‌ ಅವರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ತೇಜಸ್ ಹಾರಾಟ ನಡೆಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ: ಪಿ.ವಿ.ಸಿಂಧು

ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ ತೇಜಸ್‌ ವಾಯುಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಈ ವಿಮಾನವು ‘ಅರೆಸ್ಟ್‌ ಲ್ಯಾಂಡಿಂಗ್‌’ (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.

ಶಸ್ತ್ರ ಸಜ್ಜಿತ 16 ತೇಜಸ್‌ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ 2018ರ ಜೂನ್‌ನಲ್ಲಿ ಸೇರ್ಪಡೆಯಾಗಿವೆ. 2013ರಲ್ಲಿ ಯುದ್ಧ ವಿಮಾನ ಪರೀಕ್ಷಾರ್ಥ ಹಾರಾಟಗಳಿಗೆ ಅನುಮತಿ ನೀಡಲಾಗಿತ್ತು. ಇದೀಗ ಭಾರತೀಯ ವಾಯುಪಡೆಯ ಎರಡು ಸ್ಕ್ವಾಡ್ರನ್‌ಗಳಲ್ಲಿ 18 ತೇಜಸ್‌ ಫೈಟರ್‌ಗಳ ಬಲವಿದೆ. ಮಾರ್ಕ್‌ 1 ಆವೃತ್ತಿಯ ಇನ್ನೂ 83 ತೇಜಸ್ ಫೈಟರ್‌ಗಳು ವಾಯುಪಡೆಗೆ ಸೇರ್ಪಡೆಯಾಗಲಿವೆ. 

ವಾಯುಪಡೆ ಎಚ್‌ಎಎಲ್‌ಗೆ 40 ತೇಜಸ್‌ ಫೈಟರ್‌ಗಳನ್ನು ಪೂರೈಸುವಂತೆ ಮನವಿ ಮಾಡಿತ್ತು. ನಂತದಲ್ಲಿ ₹50 ಸಾವಿರ ಕೋಟಿ ವೆಚ್ಚದಲ್ಲಿ 83 ತೇಜಸ್‌ ಪೂರೈಕೆಗೆ ಬೇಡಿಕೆ ಇಟ್ಟಿದೆ. 

* ತೇಜಸ್ ಜೀವನದಲ್ಲಿ ಒಂದು ಅದ್ಭುತ, ರೋಮಾಂಚನ ಅನುಭವ. 2 ನಿಮಿಷಗಳಲ್ಲಿ ವಿಮಾನ ನಿಯಂತ್ರಣ ತೆಗೆದುಕೊಂಡೆ, ಪೈಲಟ್ ಜತೆ ಮಾತನಾಡುತ್ತಾ ಸಾಗಿದೆ. ಭಯ ಅನ್ನಿಸಲಿಲ್ಲ. ಪ್ರಯಾಣ ಆರಾಮದಾಯಕವಾಗಿತ್ತು. ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಗುಣಮಟ್ಟ ವಿಶ್ವಮಟ್ಟದ್ದು. ಯುದ್ಧ ವಿಮಾನ ತಯಾರಿಕೆಯಲ್ಲಿ ಭಾರತ ಶಕ್ತಿಶಾಲಿಯಾಗಿದೆ. ತೇಜಸ್‌ಗೆ ಮಲೇಷ್ಯಾ, ಪೂರ್ವ ಏಷ್ಯಾದ ದೇಶಗಳಿಂದಲೂ ಬೇಡಿಕೆ ಇದೆ. ವಿಶ್ವದ ಯಾವುದೇ ಯುದ್ಧ ವಿಮಾನಗಳಿಗಿಂತ ಕಮ್ಮಿ ಇಲ್ಲ.

– ರಾಜನಾಥ ಸಿಂಗ್, ರಕ್ಷಣಾ ಸಚಿವ

Post Comments (+)