ಗುರುವಾರ , ನವೆಂಬರ್ 14, 2019
18 °C
ಆಯೋಧ್ಯೆ ತೀರ್ಪು

ಕಾಶ್ಮೀರ: ಹಜರತ್‌ಬಲ್ ಮಸೀದಿ ಮಾರ್ಗ ಬಂದ್, ಸೆಕ್ಷನ್ 144 ಜಾರಿ

Published:
Updated:
Prajavani

ಶ್ರೀನಗರ: ಅಯೋಧ್ಯೆ ತೀರ್ಪು ಮತ್ತು ಈದ್ ಮಿಲಾದ್ ನಿಮಿತ್ತ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಇಲ್ಲಿನ ಹಜರತ್‌ಬಲ್ ಮಸೀದಿಗೆ ತೆರಳುವ ಮಾರ್ಗದಲ್ಲಿ  ಭಾನುವಾರ ಸಂಚಾರ ನಿಷೇಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಶನಿವಾರವೇ ಜಮ್ಮು ಮತ್ತು ಕಾಶ್ಮೀರದಾದ್ಯಂತ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು. 

ಈದ್‌ ಮಿಲಾದ್‌ ಮೆರವಣಿಗೆಗೂ ಭಾನುವಾರ ಅವಕಾಶ ನಿರಾಕರಿಸಲಾಗಿತ್ತು. 

ಇದಕ್ಕೂ ಮುನ್ನವೇ ಶ್ರೀನಗರದ ಹಳೆಯ ನಗರ ಪ್ರದೇಶದಲ್ಲಿರುವ ಹಜರತ್ ನಕ್ಷಬಂಧ್‌ ಸಾಹಿಬ್ ಮಸೀದಿಯಲ್ಲಿ ಸಾಂಪ್ರದಾಯಿಕ ಖೋಜೆ–ದಿಗರ್ ಪ್ರಾರ್ಥನೆ ಸೇರಿದಂತೆ ಇತರ ಪ್ರಮುಖ ಧಾರ್ಮಿಕ ಕಾರ್ಯಗಳಿಗೆ ಅನುಮತಿ ನಿರಾಕರಿಸಲಾಗಿತ್ತು.

ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವೆಂದು ಕೇಂದ್ರ ಸರ್ಕಾರ ಪ್ರಕಟಿಸಿದಾಗಿನಿಂದ ಇಲ್ಲಿನ ಐತಿಹಾಸಿಕ ಜಾಮಾ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನಾ ಸಭೆಗಳನ್ನೂ ನಿಷೇಧಿಸಲಾಗಿದೆ. 

ಸಹಜ ಸ್ಥಿತಿಗೆ ಬಾರದ ಜನಜೀವನ
370ನೇ ವಿಧಿ ರದ್ದುಗೊಳಿಸಿದ ಮೂರು ತಿಂಗಳ ಬಳಿಕವೂ ಕಾಶ್ಮೀರದಲ್ಲಿ ಸಾಮಾನ್ಯ ಜನಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಭಾನುವಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಂದ್ ಆಗಿತ್ತು. ಮಾರುಕಟ್ಟೆ ಪ್ರದೇಶಗಳಲ್ಲಿ ಮಾತ್ರ ಕೆಲ ಗಂಟೆಗಳ ಕಾಲ ಅಂಗಡಿಗಳು ತೆರೆದಿದ್ದವು.

ಲಾಲ್ ಚೌಕ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಬೆಳಿಗ್ಗೆ ಕೆಲ ಅಂಗಡಿಗಳು ಮತ್ತು ವಾಣಿಜ್ಯ ಕೇಂದ್ರಗಳು ತೆರೆದು ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಅಂಗಡಿಗಳು ಮಧ್ಯಾಹ್ನದ ಬಳಿಕ ಮುಚ್ಚುತ್ತವೆ. ಟಿಆರ್‌ಸಿ ಚೌಕ್, ಲಾಲ್ ಚೌಕ್‌ನಲ್ಲಿ ವಾರದ ಸಂತೆ ಮತ್ತು ಮಾರುಕಟ್ಟೆಗಳು ಎಂದಿನಿಂತೆ ಕಾರ್ಯ ನಿರ್ವಹಿಸುತ್ತಿವೆ.

ಪ್ರತಿಕ್ರಿಯಿಸಿ (+)