ಶನಿವಾರ, ಡಿಸೆಂಬರ್ 7, 2019
21 °C

ಗೌರವ ನೀಡದಿದ್ದರೆ ಕೈ ಕತ್ತರಿಸುವೆ: ಅಧಿಕಾರಿಗಳಿಗೆ ಅತುಲ್‌ ಸಿಂಗ್‌ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ‘ನಮಗೆ ಗೌರವ ನೀಡದಿದ್ದರೆ ಹಾಗೂ ನಮ್ಮ ಕಾರ್ಯಕರ್ತರು ಹೇಳುವ ಕೆಲಸಗಳನ್ನು ಮಾಡದಿದ್ದರೆ ಕೈಗಳನ್ನು ಕತ್ತರಿಸುವುದಾಗಿ’ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ಥಾಪಿಸಿರುವ ಹಿಂದೂ ಯುವ ವಾಹಿನಿ (ಎಚ್‌ವೈವಿ) ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅತುಲ್‌ ಸಿಂಗ್‌ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ.

ಕುಶಿನಗರ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಬೆದರಿಕೆ ಹಾಕಿರುವ ಅವರು, ‘ವಾಹಿನಿಯ ಕಾರ್ಯಕರ್ತರ ಕೆಲಸಗಳನ್ನು ಮಾಡದಿದ್ದರೆ ಸರ್ಕಾರಿ ಅಧಿಕಾರಿಗಳನ್ನು ಬೂಟಿನಿಂದ ಒದೆಯಲಾಗುವುದು. ಕೈಗಳನ್ನು ತಲವಾರ್‌ನಿಂದ ಕತ್ತರಿಸಲಾಗುವುದು’ ಎಂದಿದ್ದಾರೆ.

‘ತಮ್ಮ ವಿಧಾನಸಭೆ ಕ್ಷೇತ್ರಗಳಲ್ಲಿರುವ ಮಸೀದಿಗಳಿಗೆ, ಖಬರಸ್ತಾನಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯಲಾಗುವುದು’ ಎಂದು ವಾಹಿನಿಯ ಮತ್ತೊಬ್ಬ ಮುಖಂಡ ಹೇಳಿದ್ದಾರೆ.

ಈ ಹಿಂದೆಯೂ ವಾಹಿನಿ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಂಡ ಘಟನೆಗಳು ನಡೆದಿವೆ. ಬುಲಂದಶಹರ ಜಿಲ್ಲೆಯಲ್ಲಿ ಪ್ರೇಮಿಗಳಿಗೆ ಸಹಾಯ ಮಾಡಿದರು ಎಂದು ಆರೋಪಿಸಿ ಮುಸ್ಲಿಂ ವ್ಯಕ್ತಿಯನ್ನು ಕಾರ್ಯಕರ್ತರ ಗುಂಪೊಂದು ಹತ್ಯೆ ಮಾಡಿತ್ತು. ಲವ್‌ ಜಿಹಾದ್‌ಗೆ ಸಂಚು ರೂಪಿಸಿರುವ ಆರೋಪದ ಮೇಲೆ ಮೀರಠ್‌ನಲ್ಲಿ ಮುಸ್ಲಿಂ ಯುವಕನೊಬ್ಬನನ್ನು ಪೊಲೀಸ್‌ ಠಾಣೆಯಿಂದ ಎಳೆದುಕೊಂಡು ಬಂದು ಹಲ್ಲೆ ನಡೆಸಲಾಗಿತ್ತು. 

ಕೆಲವು ತಿಂಗಳ ಹಿಂದೆ ಮಹಾರಾಜಗಂಜ್‌ ಜಿಲ್ಲೆಯ ಚರ್ಚ್‌ಗೆ ನುಗ್ಗಿದ್ದ ಕಾರ್ಯಕರ್ತರು, ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಪಾದ್ರಿ ಮೇಲೆ ಹಲ್ಲೆ ನಡೆಸಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು