ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಪ್ರಸ್ತಾವ ಮಂಡಿಸಿದ ಅಮಿತ್ ಶಾ

ರಾಜ್ಯಸಭೆ ಕಲಾಪ
Last Updated 5 ಆಗಸ್ಟ್ 2019, 7:10 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ನಿಲುವಳಿಯನ್ನು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದರು. ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

‘ಆಂತರಿಕ ಭದ್ರತೆ, ಜಮ್ಮು ಮತ್ತು ಕಾಶ್ಮೀರ ಎದುರಿಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಗಮನದಲ್ಲಿಟ್ಟುಕೊಂಡು ರಾಜ್ಯವನ್ನು ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು. ಭೌಗೋಳಿಕವಾಗಿ ಭಿನ್ನವಾಗಿರುವ ಲಡಾಖ್‌ಗೆ ಕೇಂದ್ರಾಡಳಿತ ಸ್ಥಾನಮಾನ ನೀಡುವ ಕುರಿತ ಅಲ್ಲಿನ ಜನರ ಬೇಡಿಕೆ ದೀರ್ಘಾವಧಿಯಿಂದ ಬಾಕಿ ಇದೆ. ಹೀಗಾಗಿ ಲಡಾಖ್ ಅನ್ನು ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು’ ಎಂದೂ ಅಮಿತ್ ಶಾ ಪ್ರಸ್ತಾವ ಮಂಡಿಸಿದರು.

ಈ ನಿಲುವಳಿಯನ್ನು ಆಡಳಿತ ಪಕ್ಷದ ಸದಸ್ಯರು ಸ್ವಾಗತಿಸಿದರು. ಆದರೆ, ಪ್ರತಿಪಕ್ಷಗಳ ಸದಸ್ಯರು ‘ಸಂವಿಧಾನದ ಹತ್ಯೆ ಮಾಡಬೇಡಿ’ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಸಂವಿಧಾನಕ್ಕೆ ಬಿಜೆಪಿ ಇಂದು ಅಗೌರವ ತೋರಿದೆ. ನಮ್ಮ ದೇಶದ ಸಂವಿಧಾನದ ಪರವಾಗಿ ನಾವು ನಿಂತುಕೊಳ್ಳುತ್ತೇವೆ. ಸಂವಿಧಾನದ ಪ್ರತಿಯನ್ನು ಹರಿದುಹಾಕಲು ಯತ್ನಿಸಿದ ಪಿಡಿಪಿ ಸದಸ್ಯರ ಕ್ರಮವನ್ನು ಖಂಡಿಸುತ್ತೇವೆ. ಬಿಜೆಪಿ ಸಂವಿಧಾನದ ಕೊಲೆ ಮಾಡಿದೆ’ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದರು.

‘ನೀವು ಸ್ವತಃ ತುರ್ತುಸ್ಥಿತಿಯ ಪರಿಣಾಮ ಅನುಭವಿಸಿದ್ದೀರಿ. ಆದರೂ ನಿಮ್ಮ ವರ್ತನೆ ತುರ್ತುಸ್ಥಿತಿಯ ದಿನಗಳಿಗಿಂತ ಭಿನ್ನವಾಗಿಲ್ಲ’ ಎಂದು ಎಂಡಿಎಂಕೆ ನಾಯಕ ವೈಕೊ ಆಕ್ಷೇಪ ವ್ಯಕ್ತಪಡಿಸಿದರು.

‘ಇದು ಸಂವಿಧಾನದ ಕತ್ತಲ ದಿನ. ಕಾಶ್ಮೀರದ ಜನರಿಗೆ ಭಾರತೀಯರು ಕೊಟ್ಟಿದ್ದ ಮಾತನ್ನು ಹಿಂಪಡೆದ ದಿನ. ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವು ಅನೈತಿಕ ಮತ್ತು ಸಂವಿಧಾನಬಾಹಿರ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತವು ಒಂದು ಆಕ್ರಮಣಕಾರಿ ಬಲವಾಗಿ ಉಳಿದುಕೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದ ಜನರಲ್ಲಿ ಭೀತಿ ಹುಟ್ಟಿಸುವ ಮೂಲಕ ಅಲ್ಲಿನ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT