ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚುನಾವಣೆ: ಬಿಜೆಪಿ ಜತೆ ಮೈತ್ರಿಗೆ ಜೆಡಿಯುನಲ್ಲಿ ಅಪಸ್ವರ

ಸೈದ್ಧಾಂತಿಕ ನಿಲುವು ಸ್ಪಷ್ಟಪಡಿಸಿ: ನಿತೀಶ್‌ ಕುಮಾರ್‌ಗೆ ಪತ್ರ ಬರೆದ ಪವನ್ ವರ್ಮಾ
Last Updated 22 ಜನವರಿ 2020, 2:23 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ದೆಹಲಿ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರ ಕ್ರಮವನ್ನು ಅವರದೇ ಪಕ್ಷದ ಮುಖಂಡ ಪವನ್‌ ವರ್ಮಾ ವಿರೋಧಿಸಿದ್ದಾರೆ. ‘ನಿಮ್ಮ ಸೈದ್ಧಾಂತಿಕ ನಿಲುವನ್ನು ಸ್ಪಷ್ಟಪಡಿಸಿ’ ಎಂದು ಅವರು ನಿತೀಶ್‌ಗೆ ಪತ್ರ ಬರೆದಿದ್ದಾರೆ.

ಕಠಿಣ ಪದಗಳನ್ನು ಬಳಸಿ ಬರೆದಿರುವ ಪತ್ರವನ್ನು ಪವನ್‌ ಕುಮಾರ್‌ ಅವರು ತಮ್ಮ ಟ್ವಿಟರ್‌ ಖಾತೆ ಹಾಗೂ ಫೇಸ್‌ಬುಕ್‌ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ‘ಸಮಾಜವನ್ನು ವಿಭಜಿಸುವುದನ್ನೇ ಕಾರ್ಯಸೂಚಿಯಾಗಿಸಿಕೊಂಡಿರುವ ಕೇಸರಿ ಪಕ್ಷದ (ಬಿಜೆಪಿ) ಜೊತೆಗೆ ಜೆಡಿಯು ಮೈತ್ರಿ ಮಾಡಿಕೊಂಡಿರುವುದರಿಂದ ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಬಿಜೆಪಿ–ಆರ್‌ಎಸ್‌ಎಸ್‌ ಜತೆಯಾಗಿ ದೇಶವನ್ನು ಅಪಾಯದತ್ತ ಒಯ್ಯುತ್ತಿದೆ ಎಂದು ಖಾಸಗಿಯಾಗಿ ನೀವು ಹಲವು ಬಾರಿ ಹೇಳಿಕೊಂಡಿದ್ದೀರಿ. ಹಿಂದೆ ಮಹಾಮೈತ್ರಿಕೂಟದ ನೇತೃತ್ವವನ್ನು ವಹಿಸಿದ್ದ ನೀವು, ‘ಆರ್‌ಎಸ್‌ಎಸ್‌ ಮುಕ್ತ ಭಾರತ’ದ ಘೋಷಣೆ ನೀಡಿದ್ದಿರಿ. ಅವೆಲ್ಲವೂ ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳೇ ಆಗಿದ್ದಿದ್ದರೆ, ದೆಹಲಿಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾದದ್ದು ಹೇಗೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಬಿಜೆಪಿಯ ದೀರ್ಘಕಾಲದ ಮಿತ್ರಪಕ್ಷಗಳು ಸಹ ದೆಹಲಿಯಲ್ಲಿ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿವೆ’ ಎಂದು ವರ್ಮಾ ಪತ್ರದಲ್ಲಿ ಹೇಳಿದ್ದಾರೆ.

ಬಿಹಾರದಿಂದ ಹೊರಗೆ ಬಿಜೆಪಿಯ ಜತೆಗೆ ಜೆಡಿಯು ಮೈತ್ರಿ ಮಾಡಿಕೊಂಡಿದ್ದು ಇದೇ ಮೊದಲು. ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರದಲ್ಲಿ ಬಿಜೆಪಿಗೆ ಬೆಂಬಲ ನೀಡುವುದನ್ನು ಜೆಡಿಯು ಮುಖಂಡ ಪ್ರಶಾಂತ್‌ ಕಿಶೋರ್‌ ವಿರೋಧಿಸಿದ್ದರು. ಈಗ ಪಕ್ಷದ ಹಿರಿಯ ಮುಖಂಡ ಪವನ್‌ ವರ್ಮಾ ಅವರು ಬಿಜೆಪಿ ಜತೆ ಮೈತ್ರಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಜೆಡಿಯುಗೆ ಹಾಗೂ ಒಂದು ಸ್ಥಾನವನ್ನು ಎಲ್‌ಜೆಪಿಗೆ ಬಿಟ್ಟುಕೊಡುವುದಾಗಿ ಸೋಮವಾರಬಿಜೆಪಿ ಘೋಷಿಸಿತ್ತು.

ಎಸ್‌ಎಡಿಗೆ ಅಮರಿಂದರ್‌ ಸವಾಲು
‘ನಿಮ್ಮ ಅಭಿಪ್ರಾಯ ಪ್ರಾಮಾಣಿಕವಾಗಿದ್ದರೆ, ಎನ್‌ಡಿಎ ಮೈತ್ರಿಕೂಟದಿಂದ ಹೊರಗೆ ಬನ್ನಿ’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಶಿರೋಮಣಿ ಅಕಾಲಿ ದಳಕ್ಕೆ (ಎಸ್‌ಎಡಿ) ಸವಾಲು ಹಾಕಿದ್ದಾರೆ.

‘ಸಿಎಎ ಕುರಿತ ನಿಲುವನ್ನು ಬದಲಿಸುವಂತೆ ಪಕ್ಷದ ಮೇಲೆ ಬಿಜೆಪಿ ಒತ್ತಡ ಹೇರಿದ್ದನ್ನು ವಿರೋಧಿಸಿ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಎಸ್‌ಎಡಿ ನಿರ್ಧರಿಸಿದೆ’ ಎಂದು ಪಕ್ಷವು ಸೋಮವಾರ ಹೇಳಿಕೊಂಡಿತ್ತು. ಮರುದಿನವೇ ಅಮರಿಂದರ್‌ ಈ ಸವಾಲು ಹಾಕಿದ್ದಾರೆ.

‘ಸಿಎಎ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಎಂದು ಎಸ್‌ಎಡಿ ಹೇಳಿರುವುದು ಅಸಂಬದ್ಧ ಮತ್ತು ಒಪ್ಪಲಾಗದ ವಿಚಾರ. ಉಭಯ ಸದನಗಳಲ್ಲಿ ಸಿಎಎ ಪರವಾದ ನಿಲುವನ್ನು ಆ ಪಕ್ಷವು ತಳೆದಿತ್ತು. ಈಗ ನೀಡಿದ ಹೇಳಿಕೆಯು ಪ್ರಾಮಾಣಿಕವಾಗಿದ್ದರೆ ಎನ್‌ಡಿಎ ಮೈತ್ರಿಕೂಟದಿಂದ ಪಕ್ಷವು ಹೊರಬರಬೇಕು’ ಎಂದು ಅಮರಿಂದರ್‌ ಸಿಂಗ್‌ ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT