ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿ ಗತಿಯ ಜಟಾಪಟಿ

Last Updated 27 ನವೆಂಬರ್ 2019, 19:22 IST
ಅಕ್ಷರ ಗಾತ್ರ

‘ನಿತ್ಯದ ವಸ್ತು ಖರೀದಿಗೂ ಹಣವಿಲ್ಲ’

ನವದೆಹಲಿ (ಪಿಟಿಐ):ಈಗಿನ ಆರ್ಥಿಕ ಹಿಂಜರಿತವನ್ನು ಅರ್ಥ ಸರಪಣಿಯ ಸಹಜ ವಿದ್ಯಮಾನ ಎಂದು ತಳ್ಳಿ ಹಾಕಲಾಗದು. ಕೆಲವು ವರ್ಷಗಳಿಂದ ಆರ್ಥಿಕತೆಯು ಜರ್ಜರಿತವಾಗಿದೆ. ದಿನನಿತ್ಯ ಬೇಕಾದ ವಸ್ತುಗಳನ್ನು ಖರೀದಿಸುವುದಕ್ಕೂ ಜನರಲ್ಲಿ ಹಣ ಇಲ್ಲ. ಗ್ರಾಮೀಣ ಪ್ರದೇಶದ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ ಎಂದು ರಾಜ್ಯಸಭೆಯಲ್ಲಿ ಅರ್ಥ ವ್ಯವಸ್ಥೆ ಬಗ್ಗೆ ಬುಧವಾರ ನಡೆದ ಚರ್ಚೆಯನ್ನು ಆರಂಭಿಸಿ ಕಾಂಗ್ರೆಸ್‌ನ ಆನಂದ್‌ ಶರ್ಮಾ ಹೇಳಿದರು.

ಶ್ರೀಮಂತರು ಮತ್ತು ಬಡವರ ನಡುವಣ ಅಂತರ ಹೆಚ್ಚುತ್ತಿದೆ. ನೋಟು ರದ್ದತಿ ಮತ್ತು ಜಿಎಸ್‌ಟಿಯ ತರಾತುರಿಯ ಅನುಷ್ಠಾನದಂತಹ ತಪ್ಪು ನಿರ್ಧಾರಗಳು ಈಗಿನ ಸ್ಥಿತಿಗೆ ಕಾರಣ ಎಂದು ಅವರು ಬಣ್ಣಿಸಿದರು.

ಆರ್ಥಿಕ ಚಟುವಟಿಕೆಯ ನಾಲ್ಕು ಆಧಾರ ಕೇಂದ್ರಗಳಾದ ಹೂಡಿಕೆ, ಕೈಗಾರಿಕಾ ಉತ್ಪನ್ನ, ಸಾಲ ನೀಡಿಕೆ ಮತ್ತು ರಫ್ತು ಬಹುತೇಕ ನಿಂತು ಹೋಗಿದೆ ಎಂದು ಅವರು ಹೇಳಿದರು.

‘ಆರ್ಥಿಕ ಪ್ರಗತಿಗೆ ವೇಗ ನೀಡಲು ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ವೆಚ್ಚ ಮಾಡಬೇಕು. ಸರ್ಕಾರದ ವೆಚ್ಚ ಇಳಿಕೆಯಾಗಿದೆ. ಖಾಸಗಿ ವಲಯವು ಹೂಡಿಕೆ ಮಾಡುತ್ತಿದೆ. ಸರ್ಕಾರದ ಬಳಿಯಲ್ಲಿ ಹಣವೇ ಇಲ್ಲ, ಹಾಗಾಗಿ ವೆಚ್ಚ ಮಾಡುತ್ತಿಲ್ಲ. ಇವೆಲ್ಲವೂ ದೇಶದ ಅರ್ಥ ವ್ಯವಸ್ಥೆಯ ಮೇಲೆ ಜನರು ಇಟ್ಟಿದ್ದ ವಿಶ್ವಾಸದ ಮೇಲೆ ಪರಿಣಾಮ ಬೀರಿದೆ’ ಎಂದು ಶರ್ಮಾ ಹೇಳಿದ್ದಾರೆ.

ಸರ್ಕಾರಕ್ಕೆ ಈವರೆಗೆ (ಏಪ್ರಿಲ್‌–ಸೆಪ‍್ಟೆಂಬರ್‌) ಸಂಗ್ರಹಿಸಲು ಸಾಧ್ಯವಾಗಿರುವ ವರಮಾನ ₹9.2 ಲಕ್ಷ ಕೋಟಿ ಮಾತ್ರ. ಆದರೆ, ಸರ್ಕಾರದ ಗುರಿ ಇದ್ದದ್ದು ₹24.6 ಲಕ್ಷ ಕೋಟಿ. ಆರ್ಥಿಕ ವರ್ಷದ ಉಳಿದ ಅವಧಿಯಲ್ಲಿ ₹15.2 ಲಕ್ಷ ಕೋಟಿಯನ್ನು ಎಲ್ಲಿಂದ ತರಲು ಸಾಧ್ಯ’ ಎಂದು ಅವರು ಪ್ರಶ್ನಿಸಿದ್ದಾರೆ. ಆರ್ಥಿಕ ಕೊರತೆಯ ಪ್ರಮಾಣ ಶೇ 7–8ರಷ್ಟಾಗಬಹುದು ಎಂದು ಅವರು ಅಂದಾಜಿಸಿದ್ದಾರೆ.

ಗ್ರಾಮೀಣ ಅರ್ಥ ವ್ಯವಸ್ಥೆಯು ಹದಗೆಟ್ಟಿದೆ. ರೈತರ ಕೈಗೆ ಹಣ ನೀಡದ ಹೊರತು ಇದು ಸರಿಯಾಗದು. ಉದ್ಯಮ ತೆರಿಗೆಯನ್ನು ಕಡಿಮೆ ಮಾಡುವುದರಿಂದ ದೊಡ್ಡ ಸಾಧನೆಯೇನೂ ಆಗದು. ಉದ್ಯಮ ಸಂಸ್ಥೆಗಳು ಈ ಮೊತ್ತವನ್ನು ತಮ್ಮ ಸಾಲ ಕಡಿಮೆ ಮಾಡಿಕೊಳ್ಳಲು ಬಳಸುತ್ತವೆಯೇ ಹೊರತು ಉದ್ಯೋಗ ಸೃಷ್ಟಿಗಾಗಿ ಹೂಡಿಕೆ ಮಾಡುವುದಿಲ್ಲ ಎಂದರು.

‘ಗತಿ ನಿಧಾನ, ಹಿಂಜರಿತ ಇಲ್ಲ’

ಅರ್ಥ ವ್ಯವಸ್ಥೆಯ ಪ್ರಗತಿಯ ಗತಿ ನಿಧಾನವಾಗಿದ್ದರೂ, ದೇಶಕ್ಕೆ ಆರ್ಥಿಕ ಹಿಂಜರಿತದ ಬೆದರಿಕೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ನಡೆದ ಚರ್ಚೆಗೆ ಅವರು ಉತ್ತರಿಸಿದರು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 2009–2014ರ ಅವಧಿಯ ಜತೆಗೆ ಎನ್‌ಡಿಎ ಆಳ್ವಿಕೆಯ 2014–2019ರ ಅವಧಿಯನ್ನು ಹೋಲಿಸಿ ಅವರು ಮಾತನಾಡಿದರು. ಎನ್‌ಡಿಎ ಅವಧಿಯಲ್ಲಿ ಹಣದುಬ್ಬರ ಇಳಿಕೆಯಾಗಿದೆ, ಪ್ರಗತಿ ದರ ಏರಿಕೆಯಾಗಿದೆ ಎಂದರು.

ತಮ್ಮ ಮೊದಲ ಬಜೆಟ್‌ನಲ್ಲಿ ಕೈಗೊಂಡ ಕ್ರಮಗಳು ಫಲ ನೀಡಲು ಆರಂಭಿಸಿವೆ. ಆಟೊಮೊಬೈಲ್‌ನಂತಹ ಕ್ಷೇತ್ರಗಳಲ್ಲಿ ಪುನಶ್ಚೇತನದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದರು.

ಸರ್ಕಾರದ ವರಮಾನ ಇಳಿಕೆಯಾಗುತ್ತಿದೆ ಎಂಬ ಕಳವಳಕ್ಕೆ ಆಸ್ಪದವಿಲ್ಲ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ, ಈ ಆರ್ಥಿಕ ವರ್ಷದ ಮೊದಲ ಏಳು ತಿಂಗಳಲ್ಲಿ ನೇರ ತೆರಿಗೆ ಮತ್ತು ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ.ಆರ್ಥಿಕತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜುಲೈ 5ರಂದು ತಾವು ಮಂಡಿಸಿದ ಮೊದಲ ಬಜೆಟ್‌ ವಿಫಲವಾಗಿದೆ ಎಂಬುದನ್ನು ಅವರು ನಿರಾಕರಿಸಿದರು. ಬಜೆಟ್‌ ಮಂಡಿಸಿದ ತಿಂಗಳಲ್ಲಿಯೇ ಇತರ ಕ್ರಮಗಳನ್ನು ಘೋಷಿಸಿದ್ದನ್ನು ಅವರು ಸಮರ್ಥಿಸಿಕೊಂಡರು. ಬ್ಯಾಂಕುಗಳಿಗೆ ಪುನರ್ಧನದ ಅಗತ್ಯ ಇದೆ ಎಂಬುದನ್ನು ಆರ್ಥಿಕ ಸಮೀಕ್ಷೆ ಕಂಡುಕೊಂಡಿತ್ತು ಎಂದರು.

₹70 ಸಾವಿರ ಕೋಟಿ ಪುನರ್ಧನ ನೀಡಿಕೆಯು ಬ್ಯಾಂಕುಗಳ ಸಾಲ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇತ್ತೀಚೆಗೆ ಕೈಗೊಂಡ ಸಾಲ ನೀಡಿಕೆ ಕಾರ್ಯಕ್ರಮದಲ್ಲಿ ₹2.5 ಲಕ್ಷ ಕೋಟಿ ಸಾಲ ನೀಡಲಾಗಿದೆ ಎಂದರು.

* ಈ ವರ್ಷದ ಆರ್ಥಿಕ ಪ್ರಗತಿ ತೀವ್ರವಾಗಿ ಕುಗ್ಗಲಿದೆ ಎಂದು ಅಂದಾಜಿಸಲಾಗಿದೆ. ಹಣಕಾಸು ಸಂಸ್ಥೆಗಳಲ್ಲಿನ ಹಿನ್ನಡೆ ಬಳಿಕ ಚಿಲ್ಲರೆ ವ್ಯಾಪಾರ, ಆಟೊಮೊಬೈಲ್‌, ವಸತಿ, ಭಾರಿ ಕೈಗಾರಿಕಾ ಕ್ಷೇತ್ರಗಳಿಗೆ ವ್ಯಾಪಿಸಿತು

* ಏಪ್ರಿಲ್‌–ಜೂನ್‌ ಅವಧಿಯಲ್ಲಿ ಆರ್ಥಿಕ ಪ್ರಗತಿ ದರ ಶೇ 5ರಷ್ಟಿತ್ತು. 2013ರ ಬಳಿಕ ಅತ್ಯಂತ ಕಡಿಮೆ ಪ್ರಗತಿ ದರ ಇದು. ನಂತರದ ತ್ರೈಮಾಸಿಕದಲ್ಲಿ ಇದು ಇನ್ನೂ ಕೆಳಗಿಳಿದಿರಬಹುದು ಎಂದು ಅಂದಾಜಿಸಲಾಗಿದೆ

* ಸತತ ಆರು ತ್ರೈಮಾಸಿಕಗಳಲ್ಲಿ ಆರ್ಥಿಕ ಪ್ರಗತಿ ಕುಸಿಯುತ್ತಲೇ ಸಾಗಿರುವುದು 2012ರ ಬಳಿಕ ಇದೇ ಮೊದಲು

* ಉದ್ಯಮ ತೆರಿಗೆ ದರ ಕಡಿತ ಮತ್ತು ಇತರ ಆರ್ಥಿಕ ಚೇತರಿಕೆ ಕ್ರಮಗಳ ಬಳಿಕವೂ ಪುನಶ್ಚೇತನ ಕಂಡು ಬಂದಿಲ್ಲ

ಅಂಕಿಅಂಶಗಳು ಭೀತಿ ಹುಟ್ಟಿಸುತ್ತಿವೆ. ಒಟ್ಟು ಆಂತರಿಕ ಉತ್ಪನ್ನ ಏಳು ವರ್ಷಗಳ ಕೆಳಮಟ್ಟಕ್ಕೆ ಕುಸಿದಿದೆ. ಹೂಡಿಕೆ ಪ್ರಮಾಣವು ಶೇ 7ರಷ್ಟು ಇಳಿಕೆಯಾಗಿದೆ
-ಆನಂದ್‌ ಶರ್ಮಾ, ಕಾಂಗ್ರೆಸ್‌ ಮುಖಂಡ

ಎಲ್ಲವೂ ಕುಸಿಯುತ್ತಿದೆ ಎಂಬುದು ಸರಿಯಲ್ಲ. ಪ್ರಧಾನಿ ವೈಯಕ್ತಿಕ ಆಸಕ್ತಿ ವಹಿಸುತ್ತಿದ್ದಾರೆ. ಹಾಗಾಗಿ, ಅರ್ಥ ವ್ಯವಸ್ಥೆಯು ಪ್ರಗತಿಯ ಹಾದಿಯಲ್ಲಿ ಸಾಗಲಿದೆ
-ನಿರ್ಮಲಾ ಸೀತಾರಾಮನ್‌, ಹಣಕಾಸು ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT