ಶಸ್ತ್ರಾಸ್ತ್ರ ಖರೀದಿ: ಭಾರತಕ್ಕೆ ಎರಡನೇ ಸ್ಥಾನ, ಸೌದಿ ಅರೇಬಿಯಾ ಪ್ರಥಮ

ಗುರುವಾರ , ಮಾರ್ಚ್ 21, 2019
30 °C
ಚೀನಾ ಪ್ರಮುಖ ರಫ್ತುದಾರ ರಾಷ್ಟ್ರ

ಶಸ್ತ್ರಾಸ್ತ್ರ ಖರೀದಿ: ಭಾರತಕ್ಕೆ ಎರಡನೇ ಸ್ಥಾನ, ಸೌದಿ ಅರೇಬಿಯಾ ಪ್ರಥಮ

Published:
Updated:

2014–18ರಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದು, ಜಾಗತಿಕ ಒಟ್ಟು ಖರೀದಿಯಲ್ಲಿ ಶೇ 9.5ರಷ್ಟು ಪಾಲು ಹೊಂದಿದೆ. 

ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ‍ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌(ಎಸ್‌ಐಪಿಆರ್‌ಐ) ಸೋಮವಾರ ‍ಪ್ರಕಟಿಸಿರುವ ವರದಿಯಲ್ಲಿ ಈ ಅಂಶ ತಿಳಿದು ಬಂದಿದೆ. 2009–13 ಮತ್ತು 2014–18ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ 24ರಷ್ಟು ಇಳಿಕೆಯಾಗಿದೆ. ವರದಿ ಪ್ರಕಾರ, ರಷ್ಯಾದಿಂದ 2001ರಲ್ಲಿ ಯುದ್ಧ ವಿಮಾನಗಳಿಗೆ ಹಾಗೂ 2008ರಲ್ಲಿ ಫ್ರಾನ್ಸ್‌ನಿಂದ ಸಬ್‌ಮರೀನ್‌ಗಳ ಖರೀದಿಗೆ ಇಡಲಾದ ಬೇಡಿಕೆ ಪೂರೈಕೆಯಾಗುವಲ್ಲಿ ನಿಧಾನವಾಗಿರುವ ಕಾರಣದಿಂದಲೂ ಆಮದು ಪ್ರಮಾಣ ಕಡಿತಗೊಂಡಿದೆ. 

2009–13ರಲ್ಲಿ ರಷ್ಯಾದಿಂದ ಭಾರತ ಶೇ 76ರಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದ್ದರೆ, 2014–18ರಲ್ಲಿ ಶೇ 58ರಷ್ಟಾಗಿದೆ. 2014–18ರಲ್ಲಿ ಇಸ್ರೇಲ್‌, ಅಮೆರಿಕ ಹಾಗೂ ಫ್ರಾನ್ಸ್‌ನಿಂದ ಭಾರತಕ್ಕೆ ಶಸ್ತ್ರಾಸ್ತ್ರ ರಫ್ತು ಪ್ರಮಾಣ ಹೆಚ್ಚಿದೆ. ಇತ್ತೀಚೆಗೆ ಭಾರತ ರಷ್ಯಾದೊಂದಿಗೆ ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಐದು ವರ್ಷಗಳಲ್ಲಿ ಆಮದು ಪ್ರಮಾಣ ಏರಿಕೆಯಾಗಲಿದೆ.

ಎಸ್‌–400 ಕ್ಷಿಪಣಿ(ವಾಯು ರಕ್ಷಣಾ ವ್ಯವಸ್ಥೆ), ನಾಲ್ಕು ಯುದ್ಧ ನೌಕೆಗಳು, ಎಕೆ–203 ರೈಫಲ್‌ಗಳು, ಗುತ್ತಿಗೆ ಆಧಾರದಲ್ಲಿ ಪರಮಾಣು ಆಕ್ರಮಣಕಾರಿ ಸಬ್‌ಮರೀನ್‌, ಕಮೋವ್‌–226ಟಿ ಹೆಲಿಕಾಪ್ಟರ್‌ಗಳು, ಎಂಐ–17 ಹೆಲಿಕಾಪ್ಟರ್‌ಗಳು ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ಭಾರತ ಒಪ್ಪಂದ ಮಾಡಿಕೊಂಡಿದೆ. 

ಭಾರತ ಮತ್ತು ಪಾಕಿಸ್ತಾನ ಉಭಯ ರಾಷ್ಟ್ರಗಳ ಆಮದು ಖರೀದಿ ಪ್ರಮಾಣ 2014–18ರಲ್ಲಿ ಕಡಿಮೆಯಾಗಿದೆ. ಜಾಗತಿಕ ಖರೀದಿ ಪ್ರಮಾಣದಲ್ಲಿ ಶೇ 2.7ರಷ್ಟು ಪಾಲು ಹೊಂದಿರುವ ಪಾಕಿಸ್ತಾನ, ಆಮದು ಪ್ರಮಾಣದಲ್ಲಿ ವಿಶ್ವದಲ್ಲಿ 11ನೇ ಸ್ಥಾನದಲ್ಲಿದೆ. ಚೀನಾದಿಂದ ಅತಿ ಹೆಚ್ಚು, ಶೇ 70ರಷ್ಟು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಆಮದು ಮಾಡಿಕೊಳ್ಳುತ್ತಿದೆ. ಇದರೊಂದಿಗೆ ಅಮೆರಿಕದಿಂದ ಶೇ 8.9 ಹಾಗೂ ರಷ್ಯಾದಿಂದ ಶೇ 6ರಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತದೆ. 

2014–18ರಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ್ರ ರಫ್ತು ಮಾಡಿರುವ ರಾಷ್ಟ್ರಗಳು; ಅಮೆರಿಕ, ರಷ್ಯಾ, ಫ್ರಾನ್ಸ್‌, ಜರ್ಮನಿ ಹಾಗೂ ಚೀನಾ. ಜಾಗತಿಕವಾಗಿ ಒಟ್ಟು ರಫ್ತು ಪ್ರಮಾಣದಲ್ಲಿ ಈ ಐದು ರಾಷ್ಟ್ರಗಳು ಒಟ್ಟು ಶೇ 75ರಷ್ಟು ವಹಿವಾಟು ನಡೆಸಿವೆ.

ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ರಫ್ತು ಪ್ರಮಾಣ ಏರಿಕೆಯಾಗಿದ್ದು, ಉಳಿದ ಭಾಗಗಳಲ್ಲಿ ಇಳಿಕೆಯಾಗಿದೆ ಎಂದು ವರದಿ ಹೇಳಿದೆ. ಸೌದಿ ಅರೇಬಿಯಾ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. 

ಒಟ್ಟು ಶಸ್ತ್ರಾಸ್ತ್ರ ರಫ್ತಿನಲ್ಲಿ ಚೀನಾ ಶೇ 2.7ರಷ್ಟು ವಹಿವಾಟು ನಡೆಸುವ ಮೂಲಕ ಪ್ರಮುಖ ಶಸ್ತ್ರಾಸ್ತ್ರ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಚೀನಾದ ಪ್ರಮುಖ ಗ್ರಾಹಕ ರಾಷ್ಟ್ರಗಳಾಗಿವೆ. 

ರಾಷ್ಟ್ರ– ಶಸ್ತ್ರಾಸ್ತ್ರ ಆಮದು ಪ್ರಮಾಣ (2014–18)
* ಸೌದಿ ಅರೇಬಿಯಾ– ಶೇ 12
* ಭಾರತ– ಶೇ 9.5
* ಈಜಿಪ್ಟ್‌– ಶೇ 5.1
* ಆಸ್ಟ್ರೇಲಿಯಾ– ಶೇ 4.6
* ಅಲ್ಜಿರಿಯಾ– ಶೇ 4.4
* ಚೀನಾ– ಶೇ 4.2
* ಯು.ಎ.ಇ– ಶೇ 3.7
* ಇರಾಕ್‌– ಶೇ 3.7
* ದಕ್ಷಿಣ ಕೊರಿಯಾ– ಶೇ 3.1
* ವಿಯೆಟ್ನಾಂ– ಶೇ 2.9

ಭಾತತದ ಹಿನ್ನಡೆ ಏಕೆ?
2009–13 ಮತ್ತು 2014–18ರ ಅವಧಿಯಲ್ಲಿ ವಿದೇಶಿ ಶಸ್ತ್ರಾಸ್ತ್ರ ಪೂರೈಕೆದಾರರು ವಿಳಂಬ ನೀತಿ ಅನುಸಿರಿಸಿದ್ದೇ ಭಾರತದ ಸ್ಥಾನ ಕುಸಿತವಾಗಲು ಕಾರಣ ಎಂದು ವರದಿ ಹೇಳಿದೆ. 2001ರಲ್ಲಿ ರಷ್ಯಾದ ಸುಖೋಯ್ 30ಎಂಕೆಐ, 2008ರಲ್ಲಿ ಫ್ರಾನ್ಸ್‌ನ ಸ್ಕಾರ್ಪೀನ್ ಸರಣಿಯ ಜಲಾಂತರ್ಗಾಮಿಗಳ ಪೂರೈಕೆಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು.

ಹಿಂದೆ ಬಿದ್ದ ಮಾಸ್ಕೊ
ಭಾರತದ ಲಾಭದಾಯಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ರಷ್ಯಾ ಪಾಲು ಕುಸಿತ ಕಂಡಿದೆ. 2014–18ರ ಅವಧಿಯಲ್ಲಿ ರಷ್ಯಾ ಪಾಲು ಶೇ 58ಕ್ಕೆ ಇಳಿದಿದೆ. 2009–13ರ ಅವಧಿಯಲ್ಲಿ ಶೇ 76ರಷ್ಟು ಸಲಕರಣೆಗಳನ್ನು ರಷ್ಯಾ ಪೂರೈಸಿತ್ತು. ಆದರೆ ಇಸ್ರೇಲ್, ಅಮೆರಿಕ ಮತ್ತು ಫ್ರಾನ್ಸ್ ದೇಶಗಳು ತಮ್ಮ ಪಾಲು ಹೆಚ್ಚಿಸಿಕೊಂಡಿವೆ. 

ಚೀನಾ ದಾಪುಗಾಲು
ಯುದ್ಧಸಾಮಗ್ರಿ ಪೂರೈಸುವ ದೇಶಗಳ ಪಟ್ಟಿಯಲ್ಲಿ ಚೀನಾ ಮಹತ್ವದ ಸ್ಥಾನ ಪಡೆದಿದೆ. ಅಮೆರಿಕ, ರಷ್ಯಾ ಮೊದಲೆರಡು ಜಾಗ ಆಕ್ರಮಿಸಿಕೊಂಡಿದ್ದರೆ ಚೀನಾ ಆರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಚೀನಾದ ಅತಿದೊಡ್ಡ ಗ್ರಾಹಕ ದೇಶಗಳು. ಪಾಕಿಸ್ತಾನಕ್ಕೆ ಶೇ 37ರಷ್ಟು ಹಾಗೂ ಬಾಂಗ್ಲಾದೇಶಕ್ಕೆ ಶೇ 16ರಷ್ಟು ರಕ್ಷಣಾ ಉಪಕರಣಗಳನ್ನು ಚೀನಾ ಮಾರಾಟ ಮಾಡಿದೆ. 

ರಾಜಕೀಯ ಕಾರಣಗಳಿಗಾಗಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ದೇಶಗಳು ಚೀನಾದ ಉಪಕರಣಗಳನ್ನು ಖರೀದಿಸುತ್ತಿಲ್ಲ. 

ಬರಹ ಇಷ್ಟವಾಯಿತೆ?

 • 27

  Happy
 • 3

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !