ಶನಿವಾರ, ಏಪ್ರಿಲ್ 4, 2020
19 °C
ಪ್ರಯೋಗಾಲಯ ಸ್ಥಾಪಿಸಲು ನಿರಾಕರಣೆ: ಟೆಹರಾನ್‌ನಲ್ಲಿ ಭಾರತೀಯ ವಿಜ್ಞಾನಿಗಳು

ಕೊರೊನಾ ಸೋಂಕು ಭೀತಿ: ಇರಾನ್‌ನಿಂದ ಹಿಂತಿರುಗಿದ 44 ಭಾರತೀಯ ಯಾತ್ರಾರ್ಥಿಗಳು

ಪಿಟಿಐ Updated:

ಅಕ್ಷರ ಗಾತ್ರ : | |

 ನವದೆಹಲಿ: ಇರಾನ್‌ನಲ್ಲಿ ಸಿಲುಕಿದ್ದ 44 ಭಾರತೀಯ ಯಾತ್ರಾರ್ಥಿಗಳನ್ನು ವಾಪಸ್‌ ಕರೆತರಲಾಗಿದೆ.

ಇರಾನ್‌ ಏರ್‌ ವಿಮಾನದ ಮೂಲಕ ಈ ಯಾತ್ರಾರ್ಥಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಬಂದಿಳಿದರು. ಇರಾನ್‌ನಲ್ಲಿ ವ್ಯಾಪಕವಾಗಿ ಕೊರೊನಾ ವೈರಸ್‌ ಹಬ್ಬಿದ್ದು, ಅಲ್ಲಿರುವ ಭಾರತೀಯರನ್ನು ವಾಪಸ್‌ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ.

ಈ ಯಾತ್ರಾರ್ಥಿಗಳನ್ನು ಏರ್‌ ಇಂಡಿಯಾ ವಿಮಾನದ ಮೂಲಕ ರಾಜಸ್ಥಾನದ ಜೈಸಲ್ಮೆರ್‌ಗೆ ಕರೆದೊಯ್ಯಲಾಗುವುದು. ಅಲ್ಲಿ ಸೇನೆಯು ಸ್ಥಾಪಿಸಿರುವ ಕೇಂದ್ರದಲ್ಲಿ ಪ್ರತ್ಯೇಕವಾಗಿರಿಸಲಾಗುವುದು ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್‌ ಸೊಂಬಿತ್‌ ಘೋಷ್‌ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 58 ಭಾರತೀಯರನ್ನು ಭಾರತೀಯ ವಾಯು ಪಡೆಯ ವಿಮಾನದ ಮೂಲಕ ಕರೆತರಲಾಗಿತ್ತು. ಇರಾನ್‌ನ ವಿವಿಧ ಪ್ರಾಂತ್ಯಗಳಲ್ಲಿ ಸುಮಾರು 6,000 ಭಾರತೀಯರಿದ್ದಾರೆ ಎಂದು ವಿದೇಶಾಂಗ ಸಚಿವ ಜೈಶಂಕರ್‌ ತಿಳಿಸಿದ್ದಾರೆ.

 ಇರಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕೊರೊನಾ ವೈರಸ್‌ ಸೋಂಕಿನ ಪರೀಕ್ಷೆಗೆ ಒಳಪಡಿಸಲು ಭಾರತೀಯ ವಿಜ್ಞಾನಿಗಳಿಗೆ ಅನುಮತಿ ನಿರಾಕರಿಸಲಾಗಿದೆ.

ತಾತ್ಕಾಲಿಕ ಪ್ರಯೋಗಾಲಯ ಸ್ಥಾಪಿಸಿ ಪರೀಕ್ಷೆ ನಡೆಸಲು ವಿಜ್ಞಾನಿಗಳು ಉದ್ದೇಶಿಸಿದ್ದರು. ಆದರೆ, ಭದ್ರತಾ ಕಾರಣ ನೀಡಿ ಪ್ರಯೋಗಾಲಯ ಸ್ಥಾಪಿಸಲು ಅವಕಾಶ ನೀಡಿಲ್ಲ.

ಇರಾನ್‌ನಲ್ಲಿರುವ 1,200 ಭಾರತೀಯರನ್ನು ವಾಪಸ್‌ ಕರೆತರುವ ಮುನ್ನ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ಪ್ರಯೋಗಾಲಯ ಸ್ಥಾಪಿಸಲು ಬಯಸಿತ್ತು. ಇವರಲ್ಲಿ ಬಹುತೇಕರು ವಿದ್ಯಾರ್ಥಿಗಳು ಮತ್ತು ಯಾತ್ರಾರ್ಥಿಗಳಾಗಿದ್ದಾರೆ. 

ಸುಮಾರು 1,200 ಭಾರತೀಯರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ಭಾರತಕ್ಕೆ ತರಲಾಗಿದೆ. ಇವರು ವೈರಸ್‌ ಸೋಂಕಿಗೆ ಒಳಗಾಗಿದ್ದಾರೆಯೇ ಎನ್ನುವುದನ್ನು ಪರೀಕ್ಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯ ‘ಐಸಿಎಂಆರ್–ಎನ್ಐವಿ’ ಸಂಸ್ಥೆಯ ನಾಲ್ವರು ವಿಜ್ಞಾನಿಗಳು ಟೆಹರಾನ್‌ಗೆ ತೆರಳಿದ್ದು, ಮಾದರಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

 *
ಕೊರೊನಾ ವೈರಸ್‌ ವಿರುದ್ಧ ಸಾರ್ಕ್‌ ರಾಷ್ಟ್ರಗಳು ಬಲಿಷ್ಠ ಕಾರ್ಯತಂತ್ರ ರೂಪಿಸಬೇಕಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ನಾಗರಿಕರ ಅರೋಗ್ಯ ಕಾಪಾಡಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.
-ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು