ಶನಿವಾರ, ಜನವರಿ 18, 2020
20 °C

ದೀಪಿಕಾ ಪಡುಕೋಣೆ ಜೆಎನ್‌ಯು ಭೇಟಿ ಬೆಂಬಲಿಸಿದ ಆರ್‌ಬಿಐ ಮಾಜಿ ಗವರ್ನರ್ ರಾಜನ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಜೆಎನ್‌ಯುನಲ್ಲಿ ನಡೆದ ಹಿಂಸಾಚಾರದ ವಿರುದ್ಧ ಬಾಲಿವುಡ್  ನಟಿ ದೀಪಿಕಾ ಪಡುಕೋಣೆ ಅವರ ಮೌನ ಪ್ರತಿಭಟನೆ ಮತ್ತು ಚುನಾವಣಾ ಆಯುಕ್ತ ಅಶೋಕ್ ಲಾವಸಾ ಅವರು ತಮ್ಮ ಕುಟುಂಬಕ್ಕಿರುವ ಕಿರುಕುಳದ ಹೊರತಾಗಿಯೂ ನಿಷ್ಪಕ್ಷಪಾತವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಕೆಲ ಜನರಿಗೆ ಸತ್ಯ, ಸ್ವಾತಂತ್ರ್ಯ ಮತ್ತು ನ್ಯಾಯ ಕೇವಲ ಉನ್ನತ ಪದಗಳಲ್ಲ, ತ್ಯಾಗಕ್ಕೆ ಯೋಗ್ಯವಾದ ಆದರ್ಶಗಳು ಎಂಬುದನ್ನು ತೋರಿಸಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಬರೆದುಕೊಂಡಿರುವ ರಾಜನ್, ಮುಸುಕುಧಾರಿ ಹಲ್ಲೆಕೋರರ ತಂಡವು ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯಕ್ಕೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಪೊಲೀಸರಿಂದ ಯಾವುದೇ ಅಡ್ಡಿಯಾಗಿಲ್ಲದಿರುವುದು 'ಆತಂಕಕಾರಿ' ವಿಚಾರವಾಗಿದೆ ಎಂದು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಅವರ ಹೆಸರೇಳದೆಯೇ ಜೆಎನ್‌ಯು ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಭೇಟಿ ಮಾಡಿ ಮೌನವಾಗಿ ಪ್ರತಿಭಟನೆ ನಡೆಸಿದ್ದು ಶ್ಲಾಘನೀಯ. ಈ ನಡೆಯಿಂದಾಗಿ ಆಕೆ ಅಭಿನಯದ ಚಿತ್ರ ಛಪಾಕ್‌ಗೆ ತೊಂದರೆಯುಂಟಾಗಿದೆ. ನಟಿಯ ಈ ನಡೆಯು ನಿಜವಾಗಿಯು ಅಪಾಯದಲ್ಲಿರುವುದನ್ನು ತಡೆಯಲು ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಗಳ ಯುವ ಜನತೆ ಒಟ್ಟಾಗಿ ಮೆರವಣಿಗೆ ನಡೆಸುತ್ತಿದ್ದಾರೆ. ನಮ್ಮ ರಾಷ್ಟ್ರೀಯ ಧ್ವಜದ ಹಿಂದೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿದ್ದಾರೆ. ರಾಜಕೀಯ ನಾಯಕರ ಸ್ವಾರ್ಥಕ್ಕಾಗಿ ಒಡೆದಾಳುವ ನೀತಿಯನ್ನು ಅವರು ತಿರಸ್ಕರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ಧ ನಡೆಯುತ್ತಿರುವ ಹೋರಾಟವೇ ಇದಕ್ಕೆ ಸಾಕ್ಷಿಯಾಗಿದೆ. ಇದು ಭಾರತದಲ್ಲಿ ಸಂವಿಧಾನವು ಮತ್ತಷ್ಟು ಪ್ರಕಾಶಿಸುತ್ತಿರುವುದನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಚುನಾವಣೆ ಪ್ರಕ್ರಿಯೆ ಉಲ್ಲಂಘನೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರಿಗೆ ಕ್ಲೀನ್ ಚಿಟ್ ನೀಡಲು ನಿರಾಕರಿಸಿದ ಚುನಾವಣಾ ಆಯೋಗದ ಏಕೈಕ ಸದಸ್ಯ ಅಶೋಕ್ ಲಾವಸಾ ಅವರನ್ನು ಹೆಸರಿಸದೆ ಮಾತನಾಡಿದ ರಾಜನ್, ಚುನಾವಣಾ ಆಯುಕ್ತರು ನಿಷ್ಪಕ್ಷಪಾತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದಾಗ ಅದು ಅವರ ಕುಟುಂಬದ ಮೇಲಿನ ಕಿರುಕುಳಕ್ಕೆ ಕಾರಣವಾಗುತ್ತದೆ. ಸಮಗ್ರತೆಯನ್ನು ಸಂಪೂರ್ಣವಾಗಿ ಹಂಬಲಿಸಲಾಗಿಲ್ಲ ಎಂದು ಅವರು ಪ್ರತಿಪಾದಿಸುತ್ತಾರೆ' ಎಂದು ಅವರು ಲಾವಾಸ ಅವರ ಬಗ್ಗೆ ಶ್ಲಾಘಿಸಿದ್ದಾರೆ.

ಬಿಜೆಪಿ ಎರಡನೇ ಅವಧಿಗೆ ಗದ್ದುಗೆ ಹಿಡಿದ ಕೂಡಲೇ , ಲಾವಸಾ ಅವರ ಕುಟುಂಬದ ಐವರು ಸದಸ್ಯರ ವಿರುದ್ಧ ತನಿಖೆ ಪ್ರಾರಂಭಿಸಲಾಯಿತು.

ಅಧಿಕಾರಿಗಳ ರಾಜೀನಾಮೆ ಮತ್ತು ಕೆಲವು ಮಾಧ್ಯಮಗಳು ಸತ್ಯವನ್ನು ಹೊರಹಾಕಲು ದಣಿವರಿಯದೆ ನಿರಂತರವಾಗಿ ಕೆಲಸ ಮಾಡುತ್ತಿರುವುದನ್ನು ರಾಜನ್ ಶ್ಲಾಘಿಸಿದರು. ಆಡಳಿತ ಸೇವೆಯ ಅಧಿಕಾರಿಗಳು ತಮ್ಮ ಕನಸಿನ ಕೆಲಸಗಳಿಗೆ ರಾಜೀನಾಮೆ ನೀಡುವುದು ಅವರು ನಂಬಿಕೆಯಿಂದ ಸೇವೆ ಸಲ್ಲಿಸಲು ಸಾಧ್ಯವಾಗದಿದ್ದಾಗ. ನಮಗೆ ಸ್ವಾತಂತ್ರ್ಯ ದೊರೆತಿದ್ದಕ್ಕೆ ನಮ್ಮ ಪೂರ್ವಜರು ಮಾಡಿದ ತ್ಯಾಗಗಳು ಇಂದಿಗೂ ನಮ್ಮನ್ನು ಪ್ರೇರೇಪಿಸುತ್ತವೆ ಎಂಬುದಕ್ಕೆ ಅಧಿಕಾರಿಗಳು ಜೀವಂತ ಸಾಕ್ಷಿಯಾಗಿದ್ದಾರೆ ಎಂದು ಅವರು ಬರೆದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು