ಭಾರತದಲ್ಲಿ ‘ಪ್ರಾಂತ್ಯ’ ಸ್ಥಾಪನೆ ಇಸ್ಲಾಮಿಕ್‌ ಸ್ಟೇಟ್‌ ಹೇಳಿಕೆ

ಶನಿವಾರ, ಮೇ 25, 2019
27 °C

ಭಾರತದಲ್ಲಿ ‘ಪ್ರಾಂತ್ಯ’ ಸ್ಥಾಪನೆ ಇಸ್ಲಾಮಿಕ್‌ ಸ್ಟೇಟ್‌ ಹೇಳಿಕೆ

Published:
Updated:

ನವದೆಹಲಿ: ಕಾಶ್ಮೀರದಲ್ಲಿ ತನ್ನ ’ಪ್ರಾಂತ್ಯ‘ವೊಂದನ್ನು ಸ್ಥಾಪಿಸಿರುವುದಾಗಿ ಭಯೋತ್ಪಾದಕರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಇದೇ ಮೊದಲ ಬಾರಿಗೆ ಹೇಳಿಕೊಂಡಿದೆ.

ಐಸ್‌ನೊಂದಿಗೆ ನಂಟು ಹೊಂದಿರುವ ಶಂಕೆ ಮೇಲೆ ಇಷ್ಫಾಕ್‌ ಅಹ್ಮದ್‌ ಸೋಫಿ ಎಂಬ ಉಗ್ರನನ್ನು ಶುಕ್ರವಾರ ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಈ ಘಟನೆ ಬೆನ್ನಲ್ಲೇ, ಐಎಸ್‌ ಈ ಹೇಳಿಕೆ ಬಿಡುಗಡೆ ಮಾಡಿದೆ.

’ವಿಲಾಯಹ್ ಆಫ್‌ ಹಿಂದ್‌‘ ಎಂಬುದಾಗಿ ಈ ಪ್ರಾಂತ್ಯಕ್ಕೆ ಹೆಸರಿಸಲಾಗಿದೆ. ಅಲ್ಲದೇ, ಶೋಪಿಯಾನ್‌ ಜಿಲ್ಲೆಯ ಅಂಶಿಪೋರಾ ಪಟ್ಟಣದಲ್ಲಿ ನಡೆಸಿದ ದಾಳಿಯಲ್ಲಿ ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ ಎಂದು ಐಎಸ್‌ನ ಒಡೆತನದ ಸುದ್ದಸಂಸ್ಥೆ ಅಮಾಕ್‌ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ.

ಕಾಶ್ಮೀರಕ್ಕೆ ಸಂಬಂಧಿಸಿದ ವಿದ್ಯಮಾನಗಳನ್ನು ನಿರ್ವಹಿಸುತ್ತಿರುವ ಗೃಹ ಸಚಿವಾಲಯ ಮಾತ್ರ ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

’ತಾನು ನಡೆಸುವ ವಿಧ್ವಂಸಕ ಕೃತ್ಯಗಳನ್ನು ಹೋಲುವಂತಹ ಚಟುವಟಿಕೆಗಳನ್ನು ಕಾಶ್ಮೀರದಲ್ಲಿ ಐಎಸ್‌ ನಡೆಸಿರುವುದು ಕಂಡು ಬಂದಿಲ್ಲ. ಹೀಗಾಗಿ ಕಾಶ್ಮೀರದಲ್ಲಿ ತನ್ನ ಪ್ರಾಂತ್ಯವೊಂದನ್ನು ಸ್ಥಾಪಿಸಿರುವುದಾಗಿ ಐಎಸ್‌ ಹೇಳುತ್ತಿರುವುದು ಅಸಂಬದ್ಧ ಎನಿಸುತ್ತದೆ. ಆದರೆ, ಈ ಮಾತನ್ನು ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ‘ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಎಸ್‌ಐಟಿಇ ಇಂಟೆಲ್‌ ಗ್ರೂಪ್‌ನ ನಿರ್ದೇಶಕಿ ರಿಟಾ ಕಟ್ಜ್‌ ಅಭಿಪ್ರಾಯಪಡುತ್ತಾರೆ. ಈ ಸಂಸ್ಥೆ ವಿಶ್ವದಲ್ಲಿ ಇಸ್ಲಾಮಿಕ್‌ ಉಗ್ರರ ಚಲನವಲನಗಳ ಮೇಲೆ ಕಣ್ಣಿಟ್ಟಿದೆ.

‘ಕೊನೆ ಉಗ್ರ’: ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಇಷ್ಫಾಕ್‌ ಅಹ್ಮದ್‌ ಸೋಫಿ, ಕಾಶ್ಮೀರದಲ್ಲಿ ನಡೆದ ಹಲವಾರು ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾನೆ. ಅದರಲ್ಲೂ, ಪೊಲೀಸರು, ಭದ್ರತಾ ಪಡೆಗಳ ಮೇಲೆ ನಡೆದ ಗ್ರೆನೇಡ್‌ ದಾಳಿಯಲ್ಲಿ ಈತನ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಸೇನೆಯ ಮೂಲಗಳು ಹೇಳುತ್ತವೆ.

‘ಈತ ಕಾಶ್ಮೀರದಲ್ಲಿ ಐಎಸ್‌ ನಂಟು ಹೊಂದಿದ್ದವರ ಪೈಕಿ ಉಳಿದಿದ್ದ ಏಕೈಕ ಉಗ್ರನಾಗಿರುವ ಸಾಧ್ಯತೆ‘ ಇದೆ ಎಂದುಸೇನಾಧಿಕಾರಿಯೊಬ್ಬರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !